ಬೆಂಗಳೂರು;ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಈಗ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಬೆದರಿಕೆ ಕರೆ(threatening call)ಮಾಡಿದ್ದಾರೆ. ಸೋಮವಾರ ರಾತ್ರಿ 11.30ಕ್ಕೆ ಬೆದರಿಕೆ ಕರೆ ಬಂದಿದ್ದು ಪೊಲೀಸರು ತಕ್ಷಣ ರಾಜಭವನದಲ್ಲಿ(Raj Bhavan) ಪರಿಶೀಲನೆ ನಡೆಸಿ ಹುಸಿ ಬಾಂಬ್ ಕರೆ(Fake bomb call)ಎಂದು ದೃಢಪಡಿಸಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಬೆದರಿಕೆ ಜಾಡು ಹಿಡಿದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಬಾಂಬ್ ಬೆದರಿಕೆ ಕರೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ,ಇತ್ತೀಚೆಗಷ್ಟೇ ಇದೇ ರೀತಿಯ ಬಾಂಬ್ ಬೆದರಿಕೆ ಕರೆ ಬೆಂಗಳೂರಿನಾದ್ಯಂತ ಸುಮಾರು 44 ಶಾಲೆಗಳಿಗೆ ಅನಾಮಧೇಯ ಇಮೇಲ್‌ಗಳ ಮೂಲಕ ಬಂದಿತ್ತು. ಈ ಘಟನೆ ನಡೆದು 10 ದಿನಗಳು ಕೂಡ ಕಳೆದಿಲ್ಲ, ಅಷ್ಟರೊಳಗೆ ಇದೇ ರೀತಿಯ ಮತ್ತೊಂದು ಬೆದರಿಕೆ ಕರೆ ಮುನ್ನೆಲೆಗೆ ಬಂದಿದೆ.ಸದ್ಯ ಕಾಲ್ ಮಾಡಿದ ಮೊಬೈಲ್ ನಂಬರ್ ಜಾಡು ಹಿಡಿದಿರುವ ಕೇಂದ್ರ ವಿಭಾಗ ಹಾಗೂ ಸೈಬರ್(Cyber) ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಂಕಿತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಬೆದರಿಕೆ ಕರೆ ಬೆನ್ನಲ್ಲೇ ರಾಜಭವನದ ಬಳಿ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ರಾಜಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಪರಿಶೀಲನೆ ನಡೆಸಿ ಒಳಗಡೆ ಕಳುಹಿಸಲಾಗುತ್ತಿದೆ.