#Law #Bigamy #Second Marriage and Law, #hindu Law
ಬೆಂಗಳೂರು, ನ. 25: ಒಬ್ಬ ಜೀವಂತ ಪತ್ನಿ ಇರುವಾಗಲೇ ಪತಿ ಎರಡನೇ ಮದುವೆ ಅಗುವುದು ( ದ್ವಿಪತ್ನಿತ್ವ ) ಅಪರಾಧವೇ ? ಅಥವಾ ಜೀವಂತ ಪತಿ ಇರುವಾಗಲೇ ಪತ್ನಿ ಎರಡನೇ ಮದುವೆ ಆಗುವುದು ಅಪರಾಧವೇ ? ಎರಡನೇ ಮದುವೆಗೆ ಕಾನೂನು ಮಾನ್ಯತೆ ಇದೆಯೇ ? ಯಾವ ಸಂದರ್ಭದಲ್ಲಿ ಎರಡನೇ ಮದುವೆ ಅಪರಾಧ ಆಗುವುದಿಲ್ಲ ?
ದ್ವಿಪತ್ನಿತ್ವದ ವಿರುದ್ಧ ದೂರು ನೀಡಲು ಯಾವ ಸಾಕ್ಷಾಧಾರಗಳು ಬೇಕು? ದ್ವಿಪತ್ನಿತ್ವಕ್ಕೆ ಯಾವ ಶಿಕ್ಷೆಯಿಂದ ದಂಡಿಸಲು ಕಾನೂನಲ್ಲಿ ಅವಕಾಶವಿದೆ ? ದ್ವಿಪತ್ನಿತ್ವ ಮದುವೆ ನೋಂದಣಿ ಮಾಡಿಸಬಹುದೇ ? ಎರಡನೇ ಪತ್ನಿಯ ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರೆ ? ಲೀವ್ ಇನ್ ರಿಲೇಷನ್ ಗೆ ದ್ವಿಪತ್ನಿತ್ವ ನಿಯಮ ಅನ್ವಯಿಸುತ್ತದೆಯೇ ?
ದ್ವಿಪತ್ನಿತ್ವ ಅಥವಾ ದ್ವಿಪತ್ನಿತ್ವದ ವಿಚಾರ ಬಂದರೆ ಇಂತಹ ನೂರಾರು ಪ್ರಶ್ನೆಗಳು ಮೂಡುತ್ತವೆ. ಒಟ್ಟಾರೆಯಾಗಿ ಭಾರತದಲ್ಲಿ ಬಹುಪತ್ನಿತ್ವಕ್ಕೆ ಸಂಬಂಧಿಸಿದಂತೆ ಇರುವ ಕಾನೂನಿನ ಸಮಗ್ರ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.
ಭಾರತದಲ್ಲಿ ವಿವಾಹಕ್ಕೆ ಸಂಬಂಧಿಸಿದಂತೆ ಹಿಂದೂಗಳಿಗೆ ಹಿಂದೂ ವಿವಾಹ ಕಾಯ್ದೆ ಅನ್ವಯ ಆಗುತ್ತದೆ. ಮುಸ್ಲಿಂಮರಿಗೆ ಅವರ ವೈಯಕ್ತಿಕ ನಿಯಮಗಳು ಅನ್ವಯಿಸುತ್ತವೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿನಾಲ್ಕು ಮಂದಿಯನ್ನು ವಿವಾಹ ವಾಗಲು ಅವಕಾಶವಿದೆ. ಅವರಿಗೆ ಬಹು ಪತ್ನಿತ್ವದ ನಿಯಮ ಅನ್ವಯ ಆಗಲ್ಲ. ಭಾರತದ ಎಷ್ಟೋ ಬುಡಕಟ್ಟು ಜನಾಂಗವೂ ಸಹ ದ್ವಿಪತ್ನಿತ್ವ ಪಾಲಿಸುವ ಸಂಪ್ರದಾಯವಿದ್ದು ಈ ಕುರಿತ ಭಾರತದಲ್ಲಿರುವ ಕಾನೂನು ದರ್ಶನ ಇಲ್ಲಿ ವಿವರಿಸಲಾಗಿದೆ.
ದ್ವಿಪತ್ನಿತ್ವ ಮತ್ತು ಕಾನೂನು: ಭಾರತೀಯ ದಂಡ ಸಂಹಿತೆ ಸೆಕ್ಷನ್(IPC – 494 ಪ್ರಕಾರ ಜೀವಂತ ಪತಿ ಅಥವಾ ಪತ್ನಿ ಇರುವಾಗ ಪತಿ ಅಥವಾ ಪತ್ನಿ ಮತ್ತೊಂದು ಮದುವೆಯಾಗುವುದು ಕಾನೂನು ಅಪರಾಧ. ಅಂತಹ ಅಪರಾಧ ಎಸಗಿದವರನ್ನು ಏಳು ವರ್ಷ ಶಿಕ್ಷೆಯಿಂದ ದಂಡಿಸಬಹುದು. ದಂಡವನ್ನು ವಿಧಿಸಬಹುದು. ಅಥವಾ ಶಿಕ್ಷೆ ಹಾಗು ದಂಡವನ್ನು ಸಕ್ಷಮ ನ್ಯಾಯಾಲಯ ವಿಧಿಸಲು ಅವಕಾಶವಿದೆ. ಆದರೆ ಸಕಾರಣದಿಂದ ನ್ಯಾಯಾಲಯವೇ ಎರಡನೇ ಮದುವೆಗೆ ಅವಕಾಶ ನೀಡಿದ್ದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗದು. ಉದಾಹರಣೆಗೆ ಮಾನಸಿಕ ಅಸ್ವಸ್ಥೆರಾಗಿ ಬುದ್ಧಿ ಬ್ರಮಣೆಗೆ ಒಳಗಾಗಿದ್ದರೆ, ಮೊದಲನೇ ಪತ್ನಿ ಅಥವಾ ಪತಿ ಮೃತಪಟ್ಟಿದ್ದರೆ ಎರಡನೇ ಮದುವೆ ಅಪರಾಧ ಎಂದು ಪರಿಗಣಿಸಲಾಗದು.
IPC Sec 495 ಪ್ರಕಾರ, ವಿವಾಹಿತ ಪತಿ ಅಥವಾ ಪತ್ನಿ ತನ್ನ ಮೊದಲನೇ ವಿವಾಹವನ್ನು ಮರೆಮಾಚಿ ಎರಡನೇ ಮದುವೆಯಾಗುವುದು ಕಾನೂನು ಪ್ರಕಾರ ಅಪರಾಧ. ಅಂತಹ ಅಪರಾಧ ಎಸಗಿದವರ ವಿರುದ್ಧ ಹತ್ತು ವರ್ಷ ಶಿಕ್ಷೆ ಹಾಗೂ ದಂಡದಿಂದ ನ್ಯಾಯಾಲಯ ದಂಡಿಸಲು ಅವಕಾಶವಿದೆ.
ಪತಿಯಿಂದ ಅಪರಾಧಗಳು:
1. ವಿವಾಹಿತ ಪತ್ನಿ ಜೀವಂತ ಇದ್ದುಕೊಂಡು ಕಾನೂನು ಪ್ರಕಾರ ವಿವಾಹ ವಿಚ್ಛೇಧನ ಪಡೆಯದೇ ಎರಡನೇ ಮದುವೆಯಾಗುವುದು ಅಪರಾಧ.
2. ವಿವಾಹಿತ ಅಥವಾ ಅವಿವಾಹಿತ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಪತ್ನಿಯ ಜತೆ ಲೈಂಗಿಕ ಸಂಪರ್ಕ ನಡೆಸಿದರೆ ಅಂತಹ ವ್ಯಕ್ತಿಯನ್ನು ಅಭಿಯೋಜನೆಗೆ ಗುರಿಪಡಿಸಬಹುದು.
3. ವಿವಾಹಿತ ವ್ಯಕ್ತಿ ಅವಿವಾಹಿತ ಮಹಿಳೆ ಜತೆ ಲೈಂಗಿಕ ಸಂಪರ್ಕ ಬೆಳೆಸುವುದು ಅಪರಾಧವಲ್ಲ!
ಮಹಿಳೆಯಿಂದ ಅಪರಾಧಗಳು:
1.ಎರಡು ಜೀವಂತ ಪತಿಯರನ್ನು ಮದುವೆಯಾಗುವ ಪತ್ನಿಯನ್ನು ಶಿಕ್ಷೆಗೆ ಗುರಿಪಡಿಸಬಹುದು.
2. ಅವಿವಾಹಿತ ಅಥವಾ ವಿವಾಹಿತ ಮಹಿಳೆ ವಿವಾಹಿತ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುವುದು ಅಪರಾಧವಾಗುತ್ತದೆ.
3. ವಿವಾಹಿತ ಮಹಿಳೆ ಅವಿವಾಹಿತ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದರೆ ಮಹಿಳೆಯನ್ನು ಶಿಕ್ಷೆಗೆ ಗುರಿಪಡಿಸಲಾಗದು.
ಬಹುತೇಕ ಪ್ರಕರಣಗಳಲ್ಲಿ ಪತಿಯು ಎರಡನೇ ಮದುವೆಗೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಮೊದಲನೇ ಪತ್ನಿ ಸಂಗ್ರಹಿಸುವುದು ತುಂಬಾ ಕಷ್ಟಕರ.ಯಾಕೆಂದರೆ ಸಾಮಾನ್ಯವಾಗಿ ಬಹುತೇಕರು ಎರಡನೇ ಮದುವೆಯನ್ನು ಕಾನೂನು ಬದ್ಧವಾಗಿ ನೋಂದಣಿ ಮಾಡಿಸಿರುವುದಿಲ್ಲ. ಕೇವಲ ಎರಡು ಹೂವಿನ ಹಾರ ಬದಲಿಸಿಕೊಂಡಿರುವ ಕಾರಣ ಕಾನೂನಾತ್ಮಕವಾಗಿ ಯಾವುದೇ ಸಾಕ್ಷಾಧಾರಗಳು ಲಭ್ಯವಾಗುವುದಿಲ್ಲ. ಹೀಗಾಗಿ ದ್ವಿಪತ್ನಿತ್ವ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ಒದಗಿಸುವುದು ಕಷ್ಟಕರ. ಹೀಗಾಗಿ ಶಿಕ್ಷೆಗೆ ಗುರಿಯಾಗುವುದು ಅತಿ ವಿರಳ.
ದ್ವಿಪತ್ನಿತ್ವ/ ಪತಿತ್ವ ಸಾಬೀತು ಪಡಿಸಲು ಬೇಕಾಗುವ ಅಂಶಗಳು:
ಮೊದಲ ಮದುವೆ ಕಾನೂನು ಬದ್ಧತೆ: ದ್ವಿತ್ನಿತ್ವ ಅಥವಾ ಪತಿತ್ವ ವಿಚಾರದಲ್ಲಿ ಮೊದಲನೇ ಮದುವೆ ಕಾನೂನು ಬದ್ಧವಾಗಿ ಅಗಿರಬೇಕು. ಮೊದಲ ಪತ್ನಿ ಜೀವಂತವಿದ್ದು, ಅವರ ಜತೆ ಪತಿ ವಾಸವಾಗಿರಬೇಕು. ಇಂತಹ ಸಂದರ್ಭದಲ್ಲಿ ಎರಡನೇ ಮದುವೆ ಕಾನೂನು ಬಾಹಿರವಾಗುತ್ತದೆ. ಇಂತಹ ಸಂದರ್ಭದಲ್ಲಿ ಎರಡನೇ ಮದುವೆಯಾದ ಪತಿ ಅಥವಾ ಪತ್ನಿಗೆ ಸಂಬಂಧಿಸಿದ ಎರಡನೇ ಮದುವೆ ದಾಖಲೆಗಳನ್ನು ಸಂಗ್ರಹಿಸಬೇಕು. ಒಂದು ವೇಳೆ ಮೊದಲ ಮದುವೆ ಕಾನೂನು ಬದ್ಧವಾಗಿ ಆಗಿಲ್ಲದಿದ್ದರೆ ಎರಡನೇ ಮದುವೆ ಅಪರಾಧ ಎನಿಸುವುದಿಲ್ಲ!.
ಎರಡನೇ ಮದುವೆ ಕಾನೂನು ಬಾಹಿರ: ವಿವಿಧ ಧರ್ಮಗಳ ವೈಯಕ್ತಿಕ ಕಾನೂನಿನಲ್ಲಿ ಎರಡನೇ ಮದುವೆಗೆ ಅವಕಾಶ ನೀಡಿದ್ದರೆ ( ಮುಸ್ಲಿಂ ಪರ್ಸನಲ್ ಲಾ) ಅಂತಹ ಸಂದರ್ಭದಲ್ಲಿ ದ್ವಿಪತ್ನಿತ್ವಕ್ಕೆ ಕಾನೂನು ಮಾನ್ಯತೆ ಇರುತ್ತದೆ.
ಯಾವಾಗ ದ್ವಿಪತ್ನಿತ್ವ /ಪತಿತ್ವ ಅಪರಾಧವಲ್ಲ: ಕೆಳಕಂಡ ಸಂದರ್ಭದಲ್ಲಿ ಎರಡನೇ ಮದುವೆ ಅಪರಾಧವಾಗುವುದಿಲ್ಲ.
1. ಮೊದಲ ಪತ್ನಿಗೆ ವಿಚ್ಚೇಧನ ನೀಡಿದರೆ, ಅಥವಾ ಮೊದಲನೇ ಮದುವೆ ಕಾನೂನು ಬದ್ಧವಲ್ಲ ಎಂದು ನ್ಯಾಯಾಲಯ ತೀರ್ಪು ನಿಡಿದ ಸಂದರ್ಭದಲ್ಲಿ ಎರಡನೇ ಮದುವೆ ಆಗುವುದು ಅಪರಾಧವಲ್ಲ.
2. ಪತಿ ಹಾಗೂ ಪತ್ನಿ ಸತತ ಏಳು ವರ್ಷಗಳ ಕಾಲ ಕೂಡದೇ ಇದ್ದು, ಪ್ರತ್ಯೇಕವಾಗಿ ವಾಸವಾಗಿದ್ದರೆ, ಈ ವಿಷಯವನ್ನು ಎರಡನೇ ಮದುವೆಯಾಗುವ ವ್ಯಕ್ತಿಗೆ ಹೇಳಿ ಎರಡನೇ ಮದುವೆಯಾಗಿದ್ದರೆ, ಅಂತಹ ಎರಡನೇ ಮದುವೆ ಅಪರಾಧ ಎನಿಸಲಾರದು. ಪತಿ ಅಥವಾ ಪತ್ನಿ ಏಳು ವರ್ಷ ಕಾಣೆಯಾಗಿದ್ದು, ಏಳು ವರ್ಷದ ನಂತರ ಪತಿ ಅಥವಾ ಪತ್ನಿ ಎರಡನೇ ಮದುವೆಯಾಗಿದ್ದರೆ ಅದನ್ನು ಕಾನೂನು ಬಾಹಿರ ಎಂದು ಕರೆಯಲಾಗದು. ಯಾಕೆಂದರೆ ಏಳು ವರ್ಷ ಕಾಣೆಯಾದ ವ್ಯಕ್ತಿಯನ್ನು ಜೀವಂತ ಇಲ್ಲ ಎಂದೇ ಭಾವಿಸಲಾಗುತ್ತದೆ.
ಮೊದಲ ಪತಿ ಅಥವಾ ಪತ್ನಿ ಮೃತಪಟ್ಟಿದ್ದು, ಇಂತಹ ಸಂದರ್ಭದಲ್ಲಿ ಎರಡನೇ ಮದುವೆಯಾದರೆ ಅದು ಅಪರಾಧ ಆಗುವುದಿಲ್ಲ.