ಕಟ್ಟಡ ನಿರ್ಮಾಣದ ರೂಢಿ ಭಾಷೆಯಲ್ಲಿ ಸ್ನಾಗ್ಗಿಂಗ್ (snagging) ಎಂದರೆ ಹೊಸದಾಗಿ ಕಟ್ಟಿಸುತ್ತಿರುವ ಮನೆ ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ಏನಾದರೂ ಅಡ್ಡಿ, ದೋಷಗಳಿವೆಯೇ ಎಂದು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಹಾಗೂ ಸರಿಪಡಿಸಬೇಕಾದ ದೋಷಗಳನ್ನು ಗುರುತಿಸಿ ಬಿಲ್ಡರ್ ಗಮನಕ್ಕೆ ತಂದು ಒಪ್ಪಂದಕ್ಕೆ ಸಹಿ ಹಾಕುವ ಮೊದಲೇ ಸರಿಪಡಿಸಲು ಕೋರುವುದು ಎಂದರ್ಥ.
ಎಲ್ಲರೂ ಮನೆ, ಅಪಾರ್ಟ್‌ಮೆಂಟ್ ಖರೀದಿ ಮಾಡುವಾಗ ಎಲ್ಲ ಪರಿಪೂರ್ಣವಾಗಿರಬೇಕು ಎಂದು ಬಯಸುತ್ತಾರೆ. ಮನೆ ನಿರ್ಮಾಣದ ವೇಳೆ ಆ ಜವಾಬ್ದಾರಿ ಡೆವಲಪರ್‌ನದ್ದಾಗಿರುತ್ತದೆ. ಮಾತುಕತೆ ಸಂದರ್ಭದಲ್ಲಿ ಡೆವಲಪರ್ ನಮಗೆ ಮನೆ, ವಿಲ್ಲಾದಲ್ಲಿ ಅತ್ಯುತ್ತಮ ನಿರ್ಮಾಣ ಗುಣಮಟ್ಟ, ಅಂತರರಾಷ್ಟ್ರೀಯ ಗುಣಮಟ್ಟದ ಸೌಕರ್ಯ, ವಿಶಾಲವಾದ ಮುಕ್ತಪ್ರದೇಶ, ಬೇರೆ ಬೇರೆ ವಿಶೇಷ ಸೌಕರ್ಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ. ಹಾಗಾಗಿ ಮನೆ ಹಸ್ತಾಂತರಕ್ಕೂ ಮುನ್ನ ಸ್ನಾಗ್ಗಿಂಗ್ ಬಹುಮುಖ್ಯ ಪಾತ್ರ ವಹಿಸುತ್ತದೆ.
ಮನೆಯ ಗೃಹಪ್ರವೇಶಕ್ಕೂ ಮೊದಲು ಹೊಸ ಮನೆಯನ್ನು ಪರಿಶೀಲನೆ ಮಾಡಿ, ಸರಿಪಡಿಸಲು ಅಗತ್ಯವಿರುವ ದೋಷಗಳನ್ನು ಬಿಲ್ಡರ್ ಗಮನಕ್ಕೆ ತರಬೇಕು. ಗೋಡೆಯಲ್ಲಿ ಕಂಡುಬರುವ ಸಾಮಾನ್ಯ ದೋಷಗಳೆಂದರೆ ಕಳಪೆ ಗುಣಮಟ್ಟದ ಪೇಂಟ್, ಸಿಪ್ಪೆ ಏಳುತ್ತಿರುವ ವಾಲ್‌ಪೇಪರ್, ಸರಿಯಾಗಿ ಕೂರಿಸಿರದ ಸ್ವಿಚ್‌ಬೋರ್ಡ್, ಸಾಕೆಟ್‌ಗಳು, ಚಾರ್ಜಿಂಗ್ ಪಾಯಿಂಟ್‌ಗಳು ಹಾಗೂ ಕಳಪೆ ಗುಣಮಟ್ಟದ ಲೈಟ್ ಫಿಟ್ಟಿಂಗ್ಸ್‌ಗಳು.
ಬಿರುಕು ಬಿಟ್ಟ ಅಥವಾ ಕ್ರಿಕ್ ಶಬ್ದ ಮಾಡುವ ಬಾಗಿಲುಗಳು, ದೋಷಪೂರಿತ ಲಾಕ್, ತಪ್ಪಾಗಿ ಜೋಡಿಸಿರುವ ಹ್ಯಾಂಡ್ ಲಾಕ್‌ಗಳು ಇವುಗಳನ್ನು ಬಿಲ್ಡರ್ ಗಮನಕ್ಕೆ ತಂದು ಸರಿಪಡಿಸಲೇಬೇಕು. ಅರೆಬರೆ ತೆರೆದ ಕಿಟಕಿ, ಬಣ್ಣ ಮಾಸಿರುವ ಗೋಡೆ ಮನೆಯ ಅಂದ, ವ್ಯವಸ್ಥೆಯನ್ನು ಹಾಳು ಮಾಡಬಹುದು.
ಫ್ಲೋರಿಂಗ್‌ನಲ್ಲಿ ಎತ್ತರ ತಗ್ಗಿರುವ ನೆಲ, ಅಸಮರ್ಪಕವಾಗಿ ಜೋಡಿಸಿರುವ ಟೈಲ್ಸ್, ಗೀಚುಗಳನ್ನು ಮನೆಯ ಗೃಹಪ್ರವೇಶಕ್ಕಿಂತ ಮೊದಲೇ ಗಮನಕ್ಕೆ ತಂದರೆ ಉತ್ತಮ. ಅಡುಗೆಮಮನೆಯ ಚಿಮಣಿ, ನಲ್ಲಿಗಳು, ಕಿಚನ್ ಕಬೋರ್ಡ್‌ಗಳು, ಸ್ನಾನದ ಮನೆ, ಟಾಯ್ಲೆಟ್‌ನಲ್ಲಿ ಪೈಪ್, ಶವರ್ ಹೆಡ್, ಬಾತ್‌ಟಬ್‌ಗಳು ಹಾಗೂ ಶವರ್ ಟ್ರೇಗಳು ಸಮರ್ಪಕವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
ಸ್ನಾಗ್ಗಿಂಗ್ ಯಾಕೆ ಅಗತ್ಯ?
ಹೊಸ ಮನೆಗೆ ಸ್ಥಳಾಂತರ ಆಗುವ ಮೊದಲು ಈ ದೋಷಗಳನ್ನು ಬಿಲ್ಡರ್ ಗಮನಕ್ಕೆ ತಂದರೆ ಅದನ್ನು ಸರಿಪಡಿಸುವ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ಎಲ್ಲಾ ಅಗತ್ಯ ಸೌಕರ್ಯಗಳ ಪರಿಶೀಲನೆ ಖರೀದಿದಾರನ ಹಕ್ಕು. ಒಂದು ವೇಳೆ ಗೃಹಪ್ರವೇಶದ ನಂತರ ದೋಷಗಳನ್ನು ಕಂಡುಹಿಡಿದು ಗಮನಕ್ಕೆ ತಂದರೆ, ಬಿಲ್ಡರ್ ಸರಿಪಡಿಸಲು ಒಪ್ಪದೇ ಇರಬಹುದು ಅಥವಾ ಹೆಚ್ಚುವರಿ ಹಣ ಕೇಳಬಹುದು. ನಿಮಗೆ ಪರಿಶೀಲನೆ ನಡೆಸಲು ಕಷ್ಟವಾಗುತ್ತಿದ್ದಲ್ಲಿ ಯಾರಾದರೂ ಸಿವಿಲ್ ಎಂಜಿನಿಯರ್ ಸಹಾಯ ಪಡೆಯಬಹುದು.
ಸ್ನಾಗ್ಗಿಂಗ್ ಮಾಡುವುದೆಂದರೆ ದೋಷಗಳ ಪಟ್ಟಿ ಮಾಡಿಕೊಂಡು, ಅವು ರಿಪೇರಿಗೆ ಯೋಗ್ಯವೇ ಎಂದು ಮನದಟ್ಟು ಮಾಡಿಕೊಳ್ಳಬೇಕು. ನಂತರ ಆ ಪಟ್ಟಿಯನ್ನು ಬಿಲ್ಡರ್ ಕೈಗೆ ನೀಡಿ, ಸ್ವತಃ ಬಿಲ್ಡರ್‌ನ್ನು ಆ ಮನೆಗೆ ಕರೆದುಕೊಂಡು ಹೋಗಿ ತೋರಿಸಬೇಕು. ಮನೆ ಬಿಟ್ಟು ಕೊಡುವ ಒಪ್ಪಂದದ ಪೇಪರ್‌ಗಳಿಗೆ ಸಹಿ ಹಾಕುವ ಮೊದಲು ಬಿಲ್ಡರ್ ಎಲ್ಲಾ ರಿಪೇರಿ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆಯೇ ಎಂದು ಡಬಲ್ ಚೆಕ್ ಮಾಡಿಕೊಂಡು ಸಹಿ ಹಾಕಬೇಕು.
ಬಿಲ್ಡರ್ ಎಲ್ಲಾ ರಿಪೇರಿ ನಡೆದಿವೆ ಎಂದು ತಿಳಿಸಿದಾಗ ಹೊಸ ಮನೆಗೆ ಸ್ವತಃ ತೆರಳಿ, ಸ್ನಾಗ್ಗಿಂಗ್ ಲಿಸ್ಟ್‌ನಲ್ಲಿನ ಎಲ್ಲ ಕೆಲಸಗಳು ಪೂರ್ಣವಾಗಿವೆ ಎಂದು ತಿಳಿದುಕೊಳ್ಳಬೇಕು.