ನೀವೇನಾದರೂ ಸ್ವತ್ತು/ಆಸ್ತಿ ಖರೀದಿಗೆ ಯೋಜಿಸುತ್ತಿದ್ದೀರೇ? ಹಾಗಾದರೆ ಸುದೀರ್ಘವಾದ ಕಾಗದಪತ್ರಗಳನ್ನು ಹೊಂದಿಸುವ ಕೆಲಸಕ್ಕೂ ಸಜ್ಜಾಗುವುದು ಅನಿವಾರ್ಯ. ಗೃಹ ಸಾಲ ಪಡೆಯುತ್ತಿದ್ದೀರಿ ಎಂದಾದರೆ ಬ್ಯಾಂಕ್ ಮತ್ತು ಅಧಿಕಾರಿಗಳಿಗೆ ದಾಖಲೆ ಪೂರೈಸುವುದು, ಆಸ್ತಿ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೀಗೆ ದಾಖಲೆಗಳ ಪಟ್ಟಿಯೇ ತೆರೆದುಕೊಳ್ಳುತ್ತವೆ. ಅವುಗಳೆಂದರೆ,
ಕ್ರಯ ಪತ್ರ
ಆಸ್ತಿ ಖರೀದಿ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖವಾದ್ದು ಕ್ರಯಪತ್ರ. ಇದು ಆಸ್ತಿಯ ಮಾಲೀಕತ್ವದ ಹಕ್ಕನ್ನು ಪ್ರತಿಪಾದಿಸುವುದರಿಂದ, ಸಂಬಂಧಿಸಿದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮೂಲ ಕ್ರಯಪತ್ರದ ನೋಂದಣಿ ಮಾಡಬೇಕು.
ಖಾತಾ ಪ್ರಮಾಣಪತ್ರ
ಹೊಸ ಸ್ವತ್ತನ್ನು ನೋಂದಣಿ ಮಾಡಿಕೊಳ್ಳಲು, ಮುಂದೆ ಆಸ್ತಿಯನ್ನು ಬೇರೆಯವರ ಹೆಸರಿಗೆ ವರ್ಗಾಯಿಸಲು ಖಾತಾ ಪ್ರಮಾಣಪತ್ರ ಬಹುಮುಖ್ಯ. ಸ್ಥಳೀಯ ಸಂಸ್ಥೆಗಳ ದಾಖಲೆಗಳಲ್ಲಿ ಆಸ್ತಿ ನೋಂದಣಿ ಆಗಿದೆ ಎನ್ನಲು ಮತ್ತು ಅನುಮೋದಿತ ಯೋಜನೆ ಪ್ರಕಾರವೇ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ದೃಢೀಕರಿಸುವ ದಾಖಲೆ ಇದು. ಗೃಹ ಸಾಲ ಮಂಜೂರು ಮಾಡುವ ಮುನ್ನ ಬ್ಯಾಂಕ್‌ಗಳು ಈ ದಾಖಲೆಯನ್ನು ಕೇಳುತ್ತವೆ.
ಸಾಮಾನ್ಯ ಪವರ್ ಆಫ್ ಅಟಾರ್ನಿ
ಮಾಲೀಕರ ಪರವಾಗಿ ಅಧಿಕೃತ ವ್ಯಕ್ತಿಯಿಂದಲೇ ಸ್ವತ್ತಿನ ಮಾರಾಟ/ಖರೀದಿ ನಡೆದಿದೆ ಎಂದು ದೃಢೀಕರಿಸಲು ಈ ದಾಖಲೆ ಅತ್ಯಗತ್ಯ. ಗೃಹ ಸಾಲ ಪಡೆಯುವ ಸಂದರ್ಭದಲ್ಲಿ ಈ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ.
ಕಟ್ಟಡ ನಿರ್ಮಾಣ ಯೋಜನೆಯ ಪ್ರತಿ
ಸ್ಥಳೀಯ ಆಡಳಿತದಿಂದ ಕಟ್ಟಡ ನಿರ್ಮಾಣ ಯೋಜನೆಗೆ ನೀಡಿದ ಅನುಮೋದನೆ ಪತ್ರವನ್ನು ಕಟ್ಟಡದ ಖರೀದಿದಾದರು ಪಡೆದುಕೊಂಡಿರಬೇಕು. ರೂಪಿತ ನೀತಿ ನಿಯಮಾವಳಿ ಪ್ರಕಾರವೇ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಪ್ರತಿಪಾದಿಸುವ ದಾಖಲೆ ಇದು.
ನಿರಾಕ್ಷೇಪಣಾ ಪತ್ರ (NOC)
ಗೃಹ ನಿರ್ಮಾಣ ಯೋಜನೆಗೆ ಡೆವಲಪರ್‌ಗಳು ಸರಿಸುಮಾರು 19 ವಿವಿಧ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಆಯಾ ರಾಜ್ಯಗಳಿಗೆ ಅನುಗುಣವಾಗಿ ಈ ಸಂಖ್ಯೆಯಲ್ಲಿ ವ್ಯತ್ಯಾಸ ಉಂಟಾಗಬಹುದು.
ಹಂಚಿಕೆ ಪತ್ರ
ಗೃಹ ಸಾಲ ಪಡೆಯಲು ಹಂಚಿಕೆ ಪತ್ರ ಬಹುಮುಖ್ಯ. ಇದನ್ನು ಡೆವಲಪರ್ ಅಥವಾ ಗೃಹ ಮಂಡಳಿ ನೀಡುತ್ತದೆ. ಇದರಲ್ಲಿ ಆಸ್ತಿಯ ವಿವರ, ಖರೀದಿದಾರರು ಡೆವಲಪರ್‌ಗಳಿಗೆ ನೀಡಿದ ಹಣದ ಮಾಹಿತಿಯನ್ನು ಒಳಗೊಂಡಿರುತ್ತದೆ. ಮೂಲ ಮಾಲೀಕರಿಗೆ ಹಂಚಿಕೆ ಪತ್ರ ನೀಡಲಾಗಿರುತ್ತದೆ.
ಮಾರಾಟ ಒಪ್ಪಂದ
ಇದು ಆಸ್ತಿಗೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿಗಳನ್ನು- ನಿಯಮ ಮತ್ತು ಷರತ್ತುಗಳು, ಸ್ವಾಧೀನದ ದಿನಾಂಕ, ಪಾವತಿ ಯೋಜನೆ, ವಿಶೇಷಣಗಳು, ಸಾಮಾನ್ಯ ಪ್ರದೇಶಗಳು ಮತ್ತು ಸೌಲಭ್ಯಗಳು- ಒಳಗೊಂಡಿರುತ್ತದೆ. ಸ್ವತ್ತು ನಿರ್ಮಾಣಕ್ಕೆ ಡೆವಲಪರ್‌ಗಳು ಹೊಣೆಗಾರರು ಎಂಬುದನ್ನೂ ಹೇಳುತ್ತದೆ ಈ ದಾಖಲೆ. ಗೃಹಸಾಲ ಪಡೆಯಲು ಇದರ ಮೂಲ ಪ್ರತಿ ನೀಡಬೇಕಾಗುತ್ತದೆ.
ಸ್ವಾಧೀನ ಪತ್ರ
ಈ ದಾಖಲೆಯನ್ನು ಡೆವಲಪರ್‌ಗಳು ಖರೀದಿದಾರರಿಗೆ ನೀಡುತ್ತಾರೆ ಮತ್ತು ಯಾವ ದಿನಾಂಕಕ್ಕೆ ಆಸ್ತಿಯನ್ನು ಸ್ವಾಧೀನಕ್ಕೆ ನೀಡಲಾಗಿದೆ ಎಂಬ ಮಾಹಿತಿಯನ್ನು ಒಳಗೊಂಡಿರುತ್ತದೆ. ಗೃಹಸಾಲ ಪಡೆಯಲು ಇದರ ಮೂಲ ಪ್ರತಿಯನ್ನು ನೀಡಬೇಕು.
ಪಾವತಿ ರಸೀದಿಗಳು
ನೀವು ಹೊಸ ಸ್ವತ್ತು ಖರೀದಿಸುತ್ತಿರುವುದಾದರೆ ಡೆವಲಪರ್‌ಗಳಿಂದ ಮೂಲ ಪಾವತಿ ರಸೀದಿಗಳನ್ನು ಪಡೆದುಕೊಳ್ಳಿ. ಒಂದು ವೇಳೆ ಮರುಮಾರಾಟದ ಆಸ್ತಿಯನ್ನು ಖರೀದಿಸುತ್ತಿದ್ದರೆ, ಬ್ಯಾಂಕ್‌ಗೆ ಸಲ್ಲಿಸಲು ಮಾರಾಟಗಾರರಿಂದ ರಸೀದಿಗಳ ಪ್ರತಿಯನ್ನು ಕೇಳಿ ಪಡೆಯಿರಿ.
ಆಸ್ತಿ ತೆರಿಗೆ ರಸೀದಿ
ನಿಮಗಿಂತ ಮೊದಲಿನ ಮಾಲೀಕರು ಆಸ್ತಿಗೆ ಸಂಬಂಧಿಸಿ ಯಾವುದೇ ರೀತಿಯ ತೆರಿಗೆಗಳನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ರಸೀದಿಗಳನ್ನು ಸಂಗ್ರಹಿಸಿಕೊಳ್ಳಿ. ಆಸ್ತಿಯ ಹಕ್ಕು ಪ್ರತಿಪಾದಿಸಲು ಈ ರಸೀದಿಗಳೂ ನೆರವಾಗುತ್ತವೆ.
ಹೊಣೆಗಾರಿಕೆ ಪ್ರಮಾಣಪತ್ರ
ಆಸ್ತಿಯು ಯಾವುದೇ ಕಾನೂನು ತೊಡಕು ಅಥವಾ ಅಡಮಾನವನ್ನು ಹೊಂದಿಲ್ಲ ಎಂಬುದನ್ನು ಖಚಿತಪಡಿಸಲು ಹೊಣೆಗಾರಿಕೆ ಪ್ರಮಾಣಪತ್ರ ಬೇಕು. ಗೃಹ ಸಾಲ ನೀಡುವ ಮುನ್ನ ಬ್ಯಾಂಕ್‌ಗಳು ಕೇಳುವ ಪ್ರಮುಖ ದಾಖಲೆಗಳಲ್ಲಿ ಇದೂ ಒಂದು. ಭಾರತದಲ್ಲಿ, ಆಸ್ತಿಗೆ ಸಂಬಂಧಿಸಿ ಕಾನೂನು ತೊಡಕು ಇದ್ದಲ್ಲಿ ಅರ್ಜಿ ನಮೂನೆ 15 ಮತ್ತು ಯಾವುದೇ ಸಮಸ್ಯೆ ಇಲ್ಲದಿದ್ದಲ್ಲಿ ಮಾಲೀಕರಿಗೆ ಅರ್ಜಿ ನಮೂನೆ 16 ಅನ್ನು ನೀಡಲಾಗುತ್ತದೆ.
ಕಾರ್ಯ ಪೂರ್ಣ ಪ್ರಮಾಣಪತ್ರ
ಗೃಹಸಾಲ ಪಡೆಯಲು ಈ ದಾಖಲೆ ಅಗತ್ಯ. ಅನುಮೋದಿತ ಯೋಜನೆಯ ಪ್ರಕಾರ ಕಟ್ಟಡವನ್ನು ನಿರ್ಮಿಸಲಾಗಿದೆ ಎಂಬ ಅಂಶವನ್ನು ಈ ಕಾಗದವು ಪ್ರತಿಪಾದಿಸುತ್ತದೆ.
ಸ್ವಾಧೀನ ಪ್ರಮಾಣಪತ್ರ
ಅನುಭೋಗಕ್ಕೆ ನೀಡಲು ಕಟ್ಟಡ ಸಿದ್ಧಗೊಂಡಿದೆ ಮತ್ತು ಅನುಮೋದಿತ ಯೋಜನೆ ಪ್ರಕಾರ ಕಟ್ಟಡ ನಿರ್ಮಾಣಗೊಂಡಿದೆ ಎಂದು ಸ್ಥಳೀಯ ಆಡಳಿತಗಳು ಡೆವಲಪರ್‌ಗಳಿಗೆ ನೀಡುವ ದಾಖಲೆಯೇ ಸ್ವಾಧೀನ ಪ್ರಮಾಣಪತ್ರ.