ಬೆಂಗಳೂರು;5 ದಿನಗಳಿಂದ ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿರುವ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳ ಸಮೀಕ್ಷೆಯಲ್ಲಿ ನೂರಾರು ನೋಟಿಸ್(Notice) ವಿತರಣೆಯಾಗಿದ್ದು, 36 ಕ್ಕೂ ಹೆಚ್ಚು ಉದ್ಯಮಗಳಿಗೆ ಬೀಗ ಜಡಿದಿದ್ದಾರೆ.ನಿಯಮ ಉಲ್ಲಂಘಿಸಿದ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿನ ಐದು ಪಬ್/ಬಾರ್‌ಗಳ ಪರವಾನಗಿಯನ್ನು ರದ್ದು ಮಾಡಿದ್ದಾರೆ.ಹಾಗೆಯೇ ಲೋಪದೋಷಗಳು ಕಂಡುಬಂದಿರುವ ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ 8 ವಿಭಾಗಗಳಲ್ಲಿ ಅಧಿಕಾರಿಗಳು ಇಂದು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಬೊಮ್ಮನಹಳ್ಳಿ, ದಾಸರಹಳ್ಳಿ, ಬೆಂಗಳೂರು ಪೂರ್ವ, ಮಹಾದೇವಪುರ, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಟಿಮ ಮತ್ತು ಯಲಹಂಕ ವಿಭಾಗದಲ್ಲಿನ ಒಟ್ಟು 79 ಹೋಟೆಲ್ ಗಳ ಮೇಲೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ.ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,118 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದೆ. ಈ ಪೈಕಿ 748 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 353 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ 36 ಉದ್ದಿಮೆಗಳನ್ನು ಮುಚ್ಚಲಾಗಿದೆ.
ಆರ್ ಆರ್ ನಗರ ವಿಭಾಗದ ವ್ಯಾಪ್ತಿಯ ಒಟ್ಟು ಐದು ಹೊಟೆಲ್ ಗಳನ್ನು ನಿಯಮ ಬಾಹಿರವಾಗಿ ನಡೆಸುತ್ತಿದ್ದ ಹಿನ್ನಲೆಯಲ್ಲಿ ಈ ಹೊಟೆಲ್ ಗಳಿಗೆ ಬೀಗ ಜಡಿಯಲಾಗಿದೆ. ಕೆಂಗೇರಿ ಉುಪನಗರದಲ್ಲಿರುವ ಬ್ರ್ಯೂ ಕಿಂಗ್ಸ್ ಹೊಟೆಲ್, ಆರ್ ಆರ್ ನಗರದ ಕೆಹೆಚ್ ಬಿ(KHB) ಕಾಲೋನಿಯಲ್ಲಿರುವ ಮರಾಠ ಹಳ್ಳಿಯ ಪಬ್ ಹೌಸ್, ಚನ್ನರ್ಸಂದ್ರದ ಬ್ಯಾಂಬೂಸ್ ಶೂಟ್ಸ್ ಹೊಟೆಲ್, ನಾಗರಭಾವಿಯ ಬಿಡಿಎ(BDA) ಬಡಾವಣೆಯ ದೀಪಾ ಕಾಂಪ್ಲೆಕ್ಸ್ ನಲ್ಲಿರುವ ಹೆಚ್ಐವಿ 5 ಹೊಟೆಲ್ ಮತ್ತು ಚನ್ನಸಂದ್ರದ ಮುಖ್ಯರಸ್ತೆಯಲ್ಲಿರುವ ಆನಂದ್ ಬಾರ್ ಮತ್ತು ರೆಸ್ಟೋರೆಂಟ್ ನ ರೂಫ್ ಟಾಪ್ ಬೀಗ ಹಾಕಲಾಗಿದೆ ಎಂದು ತಿಳಿದುಬಂದಿದೆ.ಪರವಾನಗಿ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ತಿಳಿಸಿದ್ದಾರೆ.ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,118 ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದ್ದು, ಇಂದು 79 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 26ಕ್ಕೆ ನೊಟೀಸ್ ಜಾರಿಗೊಳಿಸಲಾಗಿದೆ. ಐದು ಉದ್ದಿಮೆಗಳ ಪರವಾನಗಿ ರದ್ದು ಮಾಡಲಾಗಿದೆ ಎಂದು ಹೇಳಿದ್ದಾರೆ.