25.6 C
Bengaluru
Monday, December 23, 2024

ಮನೆಯೊಳಗೆ ಜಿರಳೆ ಕಾಟದಿಂದ ಮುಕ್ತಿ ಹೇಗೆ?

ಮನೆ ಎಂದಮೇಲೆ ಅಲ್ಲಲ್ಲಿ ತಿಂಡಿತಿನಿಸು, ಆಹಾರ ಪದಾರ್ಥಗಳು ಚೆಲ್ಲಿರುವುದು ಸಾಮಾನ್ಯ. ಈ ತಿಂಡಿ, ಆಹಾರದ ವಾಸನೆಗೆ ಅತಿ ಬೇಗನೆ ಮನೆಯೊಳಗೆ ಸೇರುವ ಬೇಡದ ಅತಿಥಿಗಳೆಂದರೆ ಜಿರಳೆಗಳು. ಮನೆಯಲ್ಲಿ ಇವುಗಳ ಸಂಖ್ಯೆ ಹೆಚ್ಚಾದರೆ ಕಾಯಿಲೆಗಳನ್ನು ಬರಮಾಡಿಕೊಂಡಂತೆ. ಸಣ್ಣಮಕ್ಕಳು ಅಥವಾ ವೃದ್ಧರು ಮನೆಯಲ್ಲಿದ್ದರೆ ಜಿರಳೆಗಳನ್ನು ನಿವಾರಣೆ ಮಾಡುವುದು ಅತಿ ಮುಖ್ಯ. ಒಂದು ಬಾರಿ ಮನೆಯಲ್ಲಿ ಜಿರಳೆ ಕಾಣಿಸಿಕೊಂಡರೆ ಅದನ್ನು ಪೂರ್ತಿ ನಿವಾರಣೆ ಮಾಡುವುದು ಕಠಿಣ ಕೆಲಸ.

ಮನೆಯ ಸಿಂಕ್‌ ಕೆಳಗಿನ ಖಾಲಿ ಸ್ಥಳ, ಗಾಳಿಯಾಡುವ ಸಡಿಲ ಆಹಾರ ಪೊಟ್ಟಣಗಳು, ಸೋರುವ ನಲ್ಲಿಗಳು, ಅಡುಗೆ ಕೋಣೆಯ ಕಬೋರ್ಡ್‌ಗಳು ಜಿರಳೆಗಳು ಸೇರುವ, ತಮ್ಮ ಸಂಖ್ಯೆಯನ್ನು ವೃದ್ಧಿ ಮಾಡಿಕೊಳ್ಳುವ ಜಾಗಗಳು. ಜಿರಳೆಗಳು ಎಲ್ಲೆಂದರಲ್ಲಿ ಕೊಚ್ಚೆ, ಚರಂಡಿಯಲ್ಲಿ ಓಡಾಡಿ, ನಂತರ ಆಹಾರ ಪದಾರ್ಥಗಳ ಮೇಲೆ ಓಡಾಡುವುದರಿಂದ ಅನೇಕ ರೋಗ ರುಜಿನಗಳನ್ನು ಬೇಗನೆ ಹರಡುತ್ತವೆ. ಜಿರಳೆಗಳು ಸಡಿಲ ಪಾತ್ರೆ ಅಥವಾ ಡಬ್ಬಿಯಲ್ಲಿದ್ದ ಆಹಾರ ಪದಾರ್ಥಗಳ ಒಳಗೆ ಸೇರಿಕೊಳ್ಳುವುದರಿಂದ, ಅದನ್ನು ಸೇವಿಸುವುದರಿಂದ ಫುಡ್‌ಪಾಯ್ಸನ್‌ ಕೂಡ ಆಗಬಹುದು. ಕರುಳಿಗೆ ಹಾನಿಕಾರಕ ಬ್ಯಾಕ್ಟೀರಿಯಾಗಳು ಹೋಗಿ ನಾನಾ ರೀತಿಯ ಆರೋಗ್ಯ ಸಮಸ್ಯೆ ಕಾಡಬಹುದು. ಇನ್ನು ಕೆಲವು ಜನರಲ್ಲಿ ಅಸ್ತಮಾ, ಅತಿಸಾರದಂತಹ ಕಾಯಿಲೆಗಳನ್ನು ಹೆಚ್ಚು ಮಾಡಬಹುದು.

ಮನೆಯಲ್ಲಿ ಕಾಣಿಸಿಕೊಳ್ಳುವ ಜಿರಳೆಗಳಲ್ಲೂ ನಾನಾ ವಿಧಗಳಿವೆ. ಜರ್ಮನ್‌ ಜಿರಳೆ ಎಂದು ಕರೆಸಿಕೊಳ್ಳುವ ಜಿರಳೆಯು ಅರ್ಧ ಇಂಚು ಉದ್ದ, ಕಂದು ಬಣ್ಣದಿಂದ ಕೂಡಿರುತ್ತದೆ. ತಲೆ ಹಿಂದೆ ಎರಡೂ ಕಡೆ ಉದ್ದದ ಗೆರೆಯಂತಿರುತ್ತದೆ. ಮತ್ತೊಂದು ಬಗೆಯ ಅಮೆರಿಕನ್‌ ಜಿರಳೆಯು ಎರಡು ಇಂಚು ಉದ್ದ, ಕೆಂಪು– ಕಂದು ಬಣ್ಣದೊಂದಿಗೆ ತಲೆಯ ಹಿಂದೆ ಹಳದಿ ಬಣ್ಣ ಹೊಂದಿರುತ್ತದೆ. ಅಮೆರಿಕನ್‌ ಜಿರಳೆ ಸ್ವಲ್ಪ ದೂರ ಹಾರುವ ಸಾಮರ್ಥ್ಯ ಹೊಂದಿದ್ದರೆ, ಜರ್ಮನ್‌ ಜಿರಳೆ ಹಾರಾಡುವುದೇ ಕಡಿಮೆ. ಇನ್ನು ಏಷ್ಯನ್‌ ಜಿರಳೆಗಳು ಸೆಕೆ ಪ್ರದೇಶಗಳಾದ ಫ್ಲೋರಿಡ ಮೊದಲಾದಡೆ ಕಾಣಸಿಗುತ್ತವೆ. ಇವು ಜರ್ಮನ್‌ ಜಿರಳೆಯಂತಿದ್ದರೂ ಹಾರುವ ಸಾಮರ್ಥ್ಯ ಹೊಂದಿದೆ.

ಈ ಜಿರಳೆಗಳು ಮನೆಯೊಳಗೆ ಕಾಣಿಸಿಕೊಂಡರೆ ಅಸಹ್ಯದ ಜೊತೆಗೆ ಕಾಯಿಲೆಗಳನ್ನು ಹರಡುತ್ತವೆ. ಹಾಗಾಗಿ ಮನೆಯಲ್ಲಿ ಜಿರಳೆ ನಿವಾರಣೆ ಮಾಡುವ ಕೆಲ ಉಪಾಯಗಳನ್ನು ಕಂಡುಕೊಳ್ಳಬೇಕು.

ಜಿರಳೆಗಳು ಹೊರಗಿನ ತಾಪದಿಂದ ತಪ್ಪಿಸಿಕೊಳ್ಳಲು ತಂಪಾದ ಜಾಗ ಹುಡುಕಿಕೊಂಡು ಮನೆಯ ಒಳಗೆ ಬರುತ್ತವೆ. ಮನೆಗಳು, ಕಿಟಕಿಗಳು ಹಾಗೂ ಗೋಡೆಯಲ್ಲಿನ ಸಣ್ಣ ಬಿರುಕುಗಳ ಮೂಲಕ ಅವು ಒಳಬರುತ್ತವೆ. ಈ ಸಂದಿಗಳನ್ನು ಮುಚ್ಚುವ ಮೂಲಕ ಅವುಗಳನ್ನು ತಡೆಯಬಹುದು. ಬಿರುಕುಗಳಿದ್ದರೆ ಅವುಗಳನ್ನ ಸೀಲ್‌ ಜಾಯಿಂಟ್‌ ಮಾಡಿ ಮುಚ್ಚಬೇಕು.

ಆಹಾರದ ಅತಿ ಪುಟ್ಟ ಕಣಗಳು ನೆಲದ ಮೇಲೆ ಚೆಲ್ಲಿದ್ದಾಗ ನಾವು ನಿರ್ಲಕ್ಷಿಸುತ್ತೇವೆ. ಆದರೆ ಇದೇ ಜಿರಳೆ ಹೆಚ್ಚಾಗಲು ಕಾರಣ. ಮನೆಯನ್ನು ದಿನನಿತ್ಯ ಗುಡಿಸಿ, ಒರೆಸಿ ಸ್ವಚ್ಛ ಮಾಡಬೇಕು. ಅಡುಗೆ ಮನೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಹಾರ ಪದಾರ್ಥಗಳ ಪೊಟ್ಟಣಗಳನ್ನು ಗಾಳಿಯಾಡದ, ಭದ್ರ ಮುಚ್ಚಳ ಹೊಂದಿರುವ ಡಬ್ಬಗಳಲ್ಲಿ ತುಂಬಿಸಿಡಬೇಕು. ರಾತ್ರಿ ಅಡುಗೆ ಆದ ನಂತರ ಎಲ್ಲಾ ಪಾತ್ರೆಗಳು, ಸ್ಥಳಗಳನ್ನು ಶುಚಿಯಾಗಿಡಬೇಕು. ಯಾಕೆಂದರೆ ರಾತ್ರಿ ಸಮಯದಲ್ಲಿ ಜಿರಳೆಗಳು ಸಕ್ರಿಯವಾಗಿರುತ್ತವೆ.

ಅಡುಗೆ ಮನೆಯಲ್ಲಿ ಜಿರಳೆಗಳಾಗುವುದು ಹೆಚ್ಚು. ಹಾಗಾಗಿ ಅಲ್ಲಿ ಜಿರಳೆಗಳ ಸಂಖ್ಯೆ ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು. ಕಸದ ಬುಟ್ಟಿಗಳನ್ನು ಪ್ರತಿದಿನ ಸ್ವಚ್ಛ ಮಾಡಬೇಕು. ತಿಂಡಿ, ಬೇಕರಿ ತಿನಿಸು ಪೊಟ್ಟಣಗಳನ್ನು ಸೀಲ್‌ ಮಾಡಿರುವ ಕಂಟೇನರ್‌ನಲ್ಲಿ ಹಾಕಿಡಬೇಕು. ಮಾರುಕಟ್ಟೆಯಲ್ಲಿ ಫ್ಲೋರ್‌ ಹಾಗೂ ಪಾತ್ರೆಗಳ ಸ್ವಚ್ಛತೆಗೆ ಅನೇಕ ಬಗೆಯ ಲಿಕ್ವಿಡ್‌, ಸೋಪ್‌ ಲಭ್ಯ. ರಾತ್ರಿ ಊಟ ಆದಮೇಲೆ ಸಿಂಕ್‌ನಲ್ಲಿ ಪಾತ್ರೆಗಳನ್ನು ಹಾಕುವ ಅಭ್ಯಾಸವು ಜಿರಳೆಗಳನ್ನು ಮನೆಯಲ್ಲಿ ಹೆಚ್ಚು ಮಾಡುತ್ತದೆ. ರಾತ್ರಿಯಿಡೀ ಸಿಂಕ್‌ನಲ್ಲಿ ಪಾತ್ರೆ ಇಡದೇ ಆಗಾಗ್ಗೆ ಸ್ವಚ್ಛ ಮಾಡಬೇಕು.

ನೀರು ಸೋರುವ ನಲ್ಲಿ, ಪೈಪ್‌ಗಳು ಕೂಡ ಜಿರಳೆಗಳು ಜಾಸ್ತಿಯಾಗಲು ಕಾರಣ. ಟಾಯ್ಲೆಟ್‌, ಸಿಂಕ್‌ ಕೆಳಗೆ., ಬೇಸ್‌ಮೆಂಟ್‌ಗಳ ಕೆಳಗಿನ ತೇವಾಂಶ ಹೊಂದಿರುವ ಪ್ರದೇಶಗಳಲ್ಲಿ ಜಿರಳೆಗಳು ಬೆಳೆಯುತ್ತವೆ. ಆಗಾಗ ಇಂತಹ ಪ್ರದೇಶಗಳನ್ನು ಪರಿಶೀಲಿಸುತ್ತಿರಬೇಕು. ಸೋರುತ್ತಿರುವ ಕೊಳವೆಗಳು ಮತ್ತು ನಲ್ಲಿಗಳನ್ನು ಸರಿಪಡಿಸಿ, ನೆಲಮಾಳಿಗೆಯಲ್ಲಿ ತೇವಾಂಶವುಳ್ಳ ಪ್ರದೇಶಗಳನ್ನು ಒಣಗಿಸಬೇಕು.

ಮನೆಯಲ್ಲಿ ಜಿರಳೆ ಸ್ಪ್ರೇ ಇಟ್ಟುಕೊಂಡಿದ್ದರೆ ಉತ್ತಮ. ಬೇರೆ ಬಗೆಯ ಉತ್ಪನ್ನಗಳ ಬಗ್ಗೆ ಕೂಡ ಮಾಹಿತಿ ತಿಳಿದುಕೊಂಡು ಅವುಗಳನ್ನು ಸಹ ಬಳಕೆ ಮಾಡಬಹುದು. ಜಿರಳೆಗಳ ಸಂಖ್ಯೆ ಹೆಚ್ಚಾದರೆ ಕೀಟನಾಶಕಗಳ ಮೂಲಕ ಅವುಗಳನ್ನು ನಿವಾರಣೆ ಮಾಡಬಹುದು.

Related News

spot_img

Revenue Alerts

spot_img

News

spot_img