ʻಮನೆಗಳು ಇರುವುದು ವಾಸಕ್ಕಾಗಿಯೇ ಹೊರತು ಊಹಾಪೋಹಗಳನ್ನು ಸೃಷ್ಟಿಸಲು ಅಲ್ಲʼ – ಇದು ಚೀನಾದ ರಿಯಲ್ ಎಸ್ಟೇಟ್ ಉದ್ಯಮದ ಬಿಕ್ಕಟ್ಟಿನ ಕುರಿತು ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ ಮಾತು.
ಮನೆಗಳ ಪೂರ್ವ ಮಾರಾಟ ಮತ್ತು ಸಾಲದ ಪೂರೈಕೆ ಕಾರಣದಿಂದ 20 ವರ್ಷಗಳ ಸುದೀರ್ಘ ಅವಧಿಯ ಚೀನಾದ ರಿಯಲ್ ಎಸ್ಟೇಟ್ ಬೂಮ್, ಅಲ್ಲಿನ ರಿಯಲ್ ಎಸ್ಟೇಟ್ ಸಂಪತ್ತನ್ನು ವಿಶ್ವದ ಬಹುದೊಡ್ಡ ಸಂಪತ್ತನ್ನಾಗಿ ರೂಪಿಸಿತ್ತು. ಇದರ ಒಟ್ಟು ಮೌಲ್ಯ 50 ಟ್ರಿಲಿಯನ್ ಅಮೆರಿಕನ್ ಡಾಲರ್‌ಗೂ ಅಧಿಕ.
2020ರ ಆಗಸ್ಟ್‌ನಲ್ಲಿ ಡೆವಲಪರ್‌ಗಳು ಎಷ್ಟು ಪ್ರಮಾಣದ ಸಾಲವನ್ನು ಪಡೆಯಬಹುದು ಎಂಬುದಕ್ಕೆ ಸಂಬಂಧಿಸಿ ಅಲ್ಲಿನ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿತು. “ಮೂರು ಕೆಂಪು ರೇಖೆಗಳು” (ಥ್ರೀ ರೆಡ್ ಲೈನ್ಸ್) ಎಂದು ಕರೆಯಲಾದ ಈ ಮಾರ್ಗಸೂಚಿಯ ಪರಿಣಾಮ ಸಾಲ ಮರುಪಾವತಿ ಮಾಡಲಾಗದ ಸರಣಿ ಸಮಸ್ಯೆಗಳು ಉದ್ಭವಿಸಿದವು.
ಷಿ ಅವರ ಈ ನಿಯಮದಿಂದಾಗಿ ಅಗ್ರ ಒಂಬತ್ತು ರಿಯಲ್ ಎಸ್ಟೇಟ್ ಉದ್ಯಮಿಗಳು 2020ರಿಂದ ಈವರೆಗೆ 79 ಬಿಲಿಯನ್ ಅಮೆರಿಕನ್ ಡಾಲರ್ ಸಂಪತ್ತು ನಷ್ಟ ಅನುಭವಿಸುಂತಾಯಿತು. ಈ ನಷ್ಟವು ಚೀನಾದ ರಿಯಲ್ ಎಸ್ಟೇಟ್ ಉದ್ಯಮವನ್ನು ಆವರಿಸಿರುವ ಬಿಕ್ಕಟ್ಟಿನ ಸಂಕೇತವಾಗಿದೆ ಮತ್ತು ಇದು ದೇಶದ ಶೇ 70ರಷ್ಟು ಮನೆಗಳನ್ನು ಹಾಗೂ ಶೇ 30ರಷ್ಟು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಮೊತ್ತವಾಗಿದೆ.
ಗ್ರಾಹಕರಲ್ಲಿ ಆಸ್ತಿ ಮಾರುಕಟ್ಟೆಯ ಮೇಲೆ ವಿಶ್ವಾಸ ತಗ್ಗಿದ್ದರಿಂದಾಗಿ ಮನೆಗಳ ಬೆಲೆ ಮತ್ತು ಮಾರಾಟ ನಿರಂತರ 11 ತಿಂಗಳುಗಳಿಂದಲೂ ದಾಖಲೆಯ ಕುಸಿತ ಕಂಡಿದೆ. ನಿರ್ಮಾನ ಪೂರ್ವ ಮಾರಾಟವಾಗಿರುವ ಶೇ 90ರಷ್ಟು ಮನೆಗಳ ನಿರ್ಮಾಣ ಪೂರ್ಣಗೊಳಿಸಲು ಡೆವಲಪರ್‌ಗಳ ಬಳಿ ಹಣ ಇಲ್ಲವಾಗಿದೆ.
ಬ್ಯಾಂಕ್‌ಗಳು ಚೀನಾದಲ್ಲಿ 9 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಸಾಲವನ್ನು ಮನೆ/ಆಸ್ತಿ ಖರೀದಿ ಉದ್ದೇಶಕ್ಕೆ ನೀಡಿವೆ. ಅವುಗಳಲ್ಲಿ 5.3 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಅಡಮಾನ ಸಾಲ. ಈ ಪೈಕಿ 291 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಸಾಲ ಪಾವತಿ ನಿರಾಕರಿಸುವ ಆತಂಕ ಇದೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಹಣ ಪಾವತಿಸುವ ಸಾಮರ್ಥ್ಯ ಹೊಂದಿದ್ದಾರಾದರೂ, ಅವರು ಪಾವತಿ ಮಾಡದೇ ಇರುವ ಆಯ್ಕೆಯನ್ನೇ ಇಷ್ಟಪಡುತ್ತಿದ್ದಾರೆ.
ಆರ್ಥಿಕ ಉತ್ತೇಜಕ ಕ್ರಮ:
ಇದೀಗ ಪಾಲಿಸಿ ಬ್ಯಾಂಕ್‌ಗಳ ಮೂಲಕ ಡೆವಲಪರ್‌ಗಳಿಗೆ 29 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ನೆರವು ನೀಡಲು ಚೀನಾ ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ, ಸರ್ಕಾರದ ಅಧೀನದ ಪಾಲಿಸಿ ಬ್ಯಾಂಕ್‌ಗಳು ಮೂಲಸೌಕರ್ಯ ಯೋಜನೆಗಳಲ್ಲಿ 44 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಅನುಮತಿ ನೀಡುವ ಮೂಲಕ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಿಸಿದೆ. ಆದರೆ ಸಮೀಕ್ಷೆಯೊಂದರ ಪ್ರಕಾರ ಸ್ಥಗಿತಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಡೆವಲಪರ್‌ಗಳಿಗೆ ಅಗತ್ಯ ಇರುವ ಮೊತ್ತ 444 ಬಿಲಿಯನ್ ಅಮೆರಿಕನ್ ಡಾಲರ್.
ಈ ಆರ್ಥಿಕ ಉತ್ತೇಜನ ಉಪಕ್ರಮಗಳು ಸದ್ಯಕ್ಕೆ ಸ್ಥಳೀಯ ಆಡಳಿತಗಳಿಗೆ ಸಮಾಧಾನ ನೀಡಿದೆ. ಸ್ಥಳೀಯ ಆಡಳಿತಗಳೇ ಅಲ್ಲಿನ ಮೂಲಸೌಕರ್ಯಗಳಿಗೆ ಹೊಣೆಗಾರಿಕೆ ಹೊಂದಿರುತ್ತವೆ.
ವಸತಿ ಬಿಕ್ಕಟ್ಟು ಹೆಚ್ಚಳದ ಭಾಗವಾಗಿ ಡೆವಲಪರ್‌ಗಳು ಭೂಮಿಯನ್ನು ಖರೀದಿ ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯ ಆಡಳಿತಗಳಿಗೆ ಭೂಮಿ ಮಾರಾಟದಿಂದ ಬರುವ ಪ್ರಮುಖ ಆದಾಯದಲ್ಲಿ ಈ ವರ್ಷ ಶೇ 32ರಷ್ಟು ಖೋತಾ ಆಗಿದೆ. ಒಟ್ಟಾರೆಯಾಗಿ ಚೀನಾದಲ್ಲಿನ ರಿಯಲ್ ಎಸ್ಟೇಟ್ ಉದ್ಯಮದ ಕುಸಿತವು ಜಾಗತಿಕ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆಯೇ ಎಂಬ ಆತಂಕ ಎದುರಾಗಿದೆ.