ನಿವೇಶನ, ಕೃಷಿಭೂಮಿ, ಪರಿವರ್ತಿತ ಭೂಮಿ ಸೇರಿದಂತೆ ಇನ್ನಿತರೆ ಸ್ಥಿರಸ್ವತ್ತು ಉಪ ನೋಂದಣಾಧಿಕಾರಿಗಳ ಮಾರ್ಗಸೂಚಿ ದರಕ್ಕಿಂತಲೂ ಕಡಿಮೆ ಬೆಲೆಗೆ ನೋಂದಣಿ ಮಾಡಿಸುವಂತೆ ಕೆಲವರು ದಾಸ್ತವೇಜು ಹಾಜರು ಪಡಿಸುತ್ತಾರೆ. ಸಾಮಾನ್ಯವಾಗಿ ಸ್ಥಿರ ಸ್ವತ್ತುಗಳಿಗೆ ( ನಿವೇಶನ, ಕೃಷಿ ಭೂಮಿ, ಪರಿವರ್ತಿತ ಭೂಮಿ, ಇನ್ನಿತರೆ ಸ್ಥಿರ ಆಸ್ತಿ) ಮಾರುಕಟ್ಟೆ ಬೆಲೆ ಅಥವಾ ಉಪ ನೋಂದಣಾಧಿಕಾರಿಗಳ ಮಾರ್ಗಸೂಚಿ ಬೆಲೆಗಿಂತಲೂ ಕಡಿಮೆ ಮೊತ್ತಕ್ಕೆ ದಾಸ್ತವೇಜುಗಳನ್ನು ಬರೆಸಿದರೆ, ಅದನ್ನು ಅಪಮೌಲ್ಯ ಎಂದು ಕರೆಯುತ್ತಾರೆ.
ಆಸ್ತಿಯ ಅಪಮೌಲ್ಯ ಕಾನೂನು ಬಾಹಿರ ಕೃತ್ಯ:
ಆದರೆ ಕೆಲವು ಸಂದರ್ಭದಲ್ಲಿ ಒಂದು ಪ್ರದೇಶದ ಜಾಗಕ್ಕೆ ಸರ್ಕಾರ ನಿಗದಿ ಪಡಿಸಿರುವ ಮಾರ್ಗಸೂಚಿ ದರ, ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಆ ಮೌಲ್ಯ ನಿಗದಿ ಮಾಡಿ ದಾಸ್ತಾವೇಜು ಬರೆಸಿದರೆ ಅದನ್ನು ಉಪ ನೋಂದಣಾಧಿಕಾರಿಗಳು ಅಮಾನತು ಪಡಿಸುತ್ತಾರೆ. ಆನಂತರ ಆ ದಾಸ್ತವೇಜನ್ನು ಯಾವ ರೀತಿ ನೋಂದಣಿ ಮಾಡಿಸಬೇಕು ಎಂಬುದರ ಪೂರ್ಣ ಪ್ರಕ್ರಿಯೆ ಇಲ್ಲಿ ನೀಡಲಾಗಿದೆ.
ಕರ್ನಾಟಕ ಮುದ್ರಾಂಕ ಕಾಯ್ದೆ ನಿಯಮ 45 (a) ಪ್ರಕಾರ ಆಸ್ತಿಯ ಅಪಮೌಲ್ಯ ಕಾನೂನು ಬಾಹಿರ ಕೃತ್ಯ. ಒಂದು ಸ್ಥಿರಾಸ್ತಿಗೆ ಸಂಬಂಧಸಿದ ಅಪಮೌಲ್ಯ ಪತ್ರಗಳನ್ನು ಉಪ ನೋಂದಣಾಧಿಕಾರಿಗಳು ಅಮಾನತು ಪಡಿಸಿ ಮುದ್ರಾಂಕ ಕಾಯ್ದೆ 45 (a) ಅನ್ವಯ, ಸೂಕ್ತ ಮಾರುಕಟ್ಟೆ ಮೌಲ್ಯ ತೀರ್ಮಾನ ಮಾಡಲು ಜಿಲ್ಲಾಧಿಕಾರಿಗಳಿಗೆ ( ಮುದ್ರಾಂಕಗಳ ಅಪಮೌಲ್ಯ ತನಿಖೆ ) ಇವರಿಗೆ ಉಲ್ಲೇಖಿಸುತ್ತಾರೆ.
ಉಪ ನೋಂದಣಾಧಿಕಾರಿಗಳು ಸಲ್ಲಿಸುವ ಉಲ್ಲೇಖ ಆದರಿಸಿ ಜಿಲ್ಲಾಧಿಕಾರಿಗಳು (ಅಪಮೌಲ್ಯ ತನಿಖೆ) ಅವರು ಸಂಬಂಧಪಟ್ಟ ಪಾರ್ಟಿಗಳಿಗೆ ನೋಟಿಸ್ ನೀಡುತ್ತಾರೆ. ಆ ಬಳಿಕ ನೈಸರ್ಗಿಕ ನ್ಯಾಯ ತತ್ವದ ಆಧಾರದ ಮೇಲೆ ಸಂಬಂದಪಟ್ಟ ದಸ್ತಾವೇಜಿನ ಸ್ಥಳವನ್ನು ತನಿಖೆ ಮಾಡಿ ಸರಿಯಾದ ಮಾರುಕಟ್ಟೆ ಬೆಲೆಯನ್ನು ತೀರ್ಮಾಸುತ್ತಾರೆ. ಕೊರತೆಯಾದ ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನು ಕಟ್ಟಲು ಸೂಚಿಸುತ್ತಾರೆ. ಜಿಲ್ಲಾಧಿಕಾರಿಗಳು ( ಮುದ್ರಾಂಕ ಅಪಮೌಲ್ಯ ತನಿಖೆ) ತೀರ್ಮಾನದ ಬಳಿಕ ( ಆದೇಶ) ನೋಂದಾಣಾಧಿಕಾರಿಗಳು ಕೊರತೆಯ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಂಡು ದಸ್ತಾವೇಜು ನೋಂದಣಿ ಮಾಡಿ ಸಂಬಂಧಪಟ್ಟ ಪಾರ್ಟಿಗಳಿಗೆ ಹಿಂತಿರುಗಿಸುತ್ತಾರೆ.
ಸ್ಥಿರಾಸ್ತಿ ಅಪಮೌಲ್ಯಗೊಳಿಸಿ ಅರ್ಜಿದಾರ ನೀಡಿದ ಮಾಹಿತಿ ನೈಜವಾಗಿದ್ದರೆ, ಅದು ಜಿಲ್ಲಾಧಿಕಾರಿಗಳ (ಅಪಮೌಲ್ಯ ತನಿಖೆ) ತನಿಖೆಯಲ್ಲಿ ಕಂಡು ಬಂದರೆ ಅಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು (ಅಪಮೌಲ್ಯ ತನಿಖೆ) ಅವರು ತನಿಖೆ ಕೈ ಬಿಡಬಹುದು. ಅಥವಾ ಪಾರ್ಟಿ ಉಲ್ಲೇಖಿಸಿರುವ ದಸ್ತಾವೇಜಿನ ಮೌಲ್ಯವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿ ಆದೇಶಿಸಬಹುದು. ಇದು ಸ್ಥಳ ಪರಿಶೀಲನೆ, ಅಕ್ಕಪಕ್ಕದ ಸ್ವತ್ತುಗಳ ಪರಭಾರೆ ಮೌಲ್ಯ, ಸ್ಥಳೀಯರ ಹೇಳಿಕೆ ಮತ್ತು ದಾಖಲೆಗಳನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳು (ಅಪಮೌಲ್ಯ ತನಿಖೆ ) ಅವರು ಆದೇಶಿಸಬಹುದು. ಉಪ ನೋಂದಣಾಧಿಕಾರಿಗಳ ಮಾರ್ಗಸೂಚಿ ದರಕ್ಕಿಂತಲೂ ಸ್ವಲ್ಪ ಕಡಿಮೆ ಮೌಲ್ಯ ಅಥವಾ ಹೆಚ್ಚಿನ ಮೌಲ್ಯ ನಿಗದಿ ಮಾಡಿ ನೈಸರ್ಗಿಕ ನ್ಯಾಯ ತತ್ವದ ಅಡಿ ಆದೇಶ ಮಾಡಲು ಅವಕಾಶವಿದೆ.
ಜಿಲ್ಲಾಧಿಕಾರಿಗಳು (ಮುದ್ರಾಂಕಗಳ ಅಪಮೌಲ್ಯ ತನಿಖೆ) ಇವರು ನಿರ್ಧರಿಸಿರುವ ಬೆಲೆ ಪಾರ್ಟಿಗಳಿಗೆ ಒಪ್ಪಿಗೆ ಆಗದಿದ್ದರೆ, ಇನ್ನೂ ಕಡಿಮೆ ಮಾಡುವಂತೆ ಕೋರಿ ವಿಭಾಗೀಯ ಪ್ರಾದೇಶಿಕ ಆಯುಕ್ತರು ಇವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಮೇಲ್ಮನವಿ ಸಲ್ಲಿಸುವ ಮೊದಲು ಜಿಲ್ಲಾಧಿಕಾರಿಗಳು (ಮುದ್ರಾಂಕಗಳ ಅಪಮೌಲ್ಯ ತನಿಖೆ ) ನಿರ್ಧರಿಸಿರುವ ಶುಲ್ಕದಲ್ಲಿ ಶೇ. 50 ರಷ್ಟು ಸರ್ಕಾರಕ್ಕೆ ಪಾವತಿಸಬೇಕು.
ವಿಭಾಗೀಯ ಪ್ರಾದೇಶಿಕ ಆಯುಕ್ತರು ನಿಗದಿ ಪಡಿಸಿರುವ ಮೌಲ್ಯ ಸಹ ಸಮಾಧಾನ ನೀಡದಿದ್ದರೆ, ಸಂಬಂಧಪಟ್ಟ ಪಾರ್ಟಿಗಳು ಹೈಕೊರ್ಟ್ ನಲ್ಲಿ ರಿಟ್ ಸಲ್ಲಿಸಬಹುದು. ಹೈಕೋರ್ಟ್ ಆದೇಶ ಸಮಾಧಾನ ತರದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗಬಹುದು. ಸುಪ್ರೀಂಕೋರ್ಟ್ ನೀಡುವ ತೀರ್ಪು ಅಂತಿಮವಾಗಿರುತ್ತದೆ.
ಒಂದು ಪ್ರಕರಣದ ಉದಾಹರಣೆ:
ಬೆಂಗಳೂರಿನ ನಾಯಂಡಹಳ್ಳಿ ಗ್ರಾಮದಲ್ಲಿ 30×60 ಅಳತೆಯ ನಿವೇಶನ ಇತ್ತು.ಇದರಲ್ಲಿ ಸುಮಾರು ಒಂದು ಸಾವಿರ ಚದರಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಊಹಿಸಿಕೊಳ್ಳಿ. ಇದರ ಮಾರುಕಟ್ಟೆ ಮೌಲ್ಯ ಒಂದು ಕೋಟಿ ರೂ. ಎಂದು ಸಂಬಂಧಪಟ್ಟ ಪಾರ್ಟಿ ತೀರ್ಮಾನಿಸಿದ್ದಲ್ಲಿ, ವಾಸ್ತವದಲ್ಲಿ ಈ ಆಸ್ತಿಯ ಮಾರುಕಟ್ಟೆ ಮೌಲ್ಯ 1.50 ಕೋಟಿ ರೂ. ಆಗಿದ್ದಲ್ಲಿ, ಇದನ್ನು ಅಪಮೌಲ್ಯ ಎಂದು ಕರೆಯುತ್ತೇವೆ. ಪಾರ್ಟಿ ಇಲ್ಲಿ ನೈಜ ಮೌಲ್ಯ ಒಂದು ಕೋಟಿ ಎಂದು ತೋರಿಸಿರುವುದರಿಂದ ಇಂತಹ ದಾಸ್ತಾವೇಜನ್ನು ಉಪ ನೋಂದಣಾಧಿಕಾರಿಗಳು ನೋಂದಣಿ ಮಾಡುವುದಿಲ್ಲ. ಮಾರ್ಗಸೂಚಿ ದರ 1.5 ಕೋಟಿ ರೂ.ಗೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ ( ಸರ್ಕಾರ ಕ್ಷೇತ್ರವಾರು ನಿಗದಿ ಪಡಿಸಿರುವ ಮೊತ್ತ ) ಪಾವತಿಸಿದೆ ಮಾತ್ರ ದಸ್ತಾವೇಜನ್ನು ನೋಂದಣಿ ಮಾಡಲಾಗುತ್ತದೆ.