ಬೆಂಗಳೂರು;ಬೆಂಗಳೂರಿನಲ್ಲೂ ಕಾವೇರಿ ಹೋರಾಟ ತೀವ್ರಗೊಳ್ಳುತ್ತಿದೆ. ಬೆಂಗಳೂರು ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಆಯಾ ವಲಯ ಹೆಚ್ಚುವರಿ ಆಯುಕ್ತರು, ಡಿಸಿಪಿಗಳಿಗೆ ಸೂಚನೆ ಕೊಟ್ಟಿದ್ದಾರೆ.ಕನ್ನಡಪರ ಹೋರಾಟಗಾರರು, ರೈತರು ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.ತಮಿಳುನಾಡಿಗೆ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ.ನಗರದಲ್ಲಿ ಕನ್ನಡಪರ ಸಂಘಟನೆ, ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡು ಕಟ್ಟೆಚ್ಚರ ವಹಿಸಿದೆ. ನಗರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶ ಗಳಲ್ಲದೆ, ತಮಿಳಿಗರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳುವಂತೆ ಡಿಸಿಪಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸೂಚನೆ ನೀಡಿದ್ದಾರೆ.ತಮಿಳಿಗರು ಹೆಚ್ಚಾಗಿ ರುವ ಪ್ರದೇಶ ಗಳಲ್ಲಿ ಗಲಾಟೆಗಳು ನಡೆಯುವ ಸಾಧ್ಯತೆ ಇದೆ. ಚಿತ್ರರಂಗದ ನಟರೂ ಹೋರಾಟಕ್ಕೆ ಬೆಂಬಲ ಸೂಚಿಸಿರುವುದರಿಂದ ಪ್ರತಿಭಟನೆ ತೀವ್ರತೆ ಪಡೆಯಬಹುದು. ಅದೇ ರೀತಿ ಗಣೇಶ ವಿಸ ರ್ಜನಾ ಮೆರವಣಿಗೆಗಳು ನಡೆಯುತ್ತಿರುವುದರಿಂದ ಕಾವೇರಿ ವಿವಾದ ಬೇರೆ ರೀತಿಯ ತಿರುವು ಪಡೆದು ಸಂಘ ರ್ಷಗಳಿಗೆ ಕಾರಣವಾಗಬಹುದು. ಹೀಗಾಗಿ ಕಟ್ಟೆಚ್ಚರ ವಹಿಸಬೇಕು.
ನಗರದ ಪಶ್ಚಿಮ, ಪೂರ್ವ, ಉತ್ತರ, ದಕ್ಷಿಣ ವಲಯ ಹಾಗೂ ವೈಟ್ ಫೀಲ್ಡ್ ಸೇರಿ ಎಲ್ಲೆಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.ಇನ್ನೂ ಮಂಡ್ಯ, ಮದ್ದೂರು ಬಂದ್ ಹಿನ್ನೆಲೆ ಎರಡು ನಗರಗಳಲ್ಲಿ ಖಾಕಿ ಅಲರ್ಟ್ ಆಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಅಹಿತಕರ ಘಟನೆ ತಡೆಗಟ್ಟುವ ಸಲುವಾಗಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಎಸ್ ಪಿ, ಎ ಎಸ್ ಪಿ, ಮೂವರು ಡಿವೈ ಎಸ್ ಪಿ , ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಸೇರಿ 400 ಕ್ಕೂ ಹೆಚ್ಚು ಪೊಲೀಸರು ಹಾಗೂ ಜೊತೆಗೆ 6 ಕೆ.ಎಸ್.ಆರ್.ಪಿ, 5 ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.