ಬೆಂಗಳೂರು;BMTC ಪ್ರಯಾಣಿಕರಿಗೆ ಸಿಹಿ ಸುದ್ದಿ ಬೆಂಗಳೂರು ಸಾರಿಗೆ ಪ್ರಯಾಣಿಕರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ರಾತ್ರಿ ಸೇವೆ ಸಂಚರಿಸುವ ಬಿಎಂಟಿಸಿ ಬಸ್‌ಗಳಿಗೆ ಸಾಮಾನ್ಯ ಸೇವೆಗಳ ಪ್ರಯಾಣ ದರವನ್ನೇ ನಿಗದಿಗೊಳಿಸಲಾಗಿದೆ. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಸಾಮಾನ್ಯ ದರವನ್ನು ನಿಗದಿ ಮಾಡಲಾಗಿತ್ತು. ಆದರೆ, ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಪ್ರಯಾಣಿಕರಿಂದ ಹೆಚ್ಚುವರಿ ಟಿಕೆಟ್ ದರವನ್ನು ಪಡೆಯಲಾಗುತ್ತಿತ್ತು . ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆಯು ಏಕರೂಪದ ಪ್ರಯಾಣ ದರ ನಿಗದಿ ಪಡಿಸಲಾಗಿದೆ ಎಂದು ತಿಳಿಸಲಾಗಿದೆ.ಬುಧವಾರದಿಂದಲೇ ಜಾರಿಗೆ ಬರುವಂತೆ ರಾತ್ರಿ ಪಾಳೆ ಸೇವೆಗೆ ಪಡೆಯುತ್ತಿದ್ದ ಒಂದೂವರೆ ಪಟ್ಟು ಹೆಚ್ಚು ಟಿಕೆಟ್ ದರವನ್ನು ರದ್ದುಪಡಿಸಿ ಹಗಲಿನಲ್ಲಿ ಪಡೆಯುವ ದರವನ್ನೇ ನಿಗದಿಪಡಿಸಿ ಆದೇಶ ಹೊರಡಿಸಿದೆ.ಬಿಎಂಟಿಸಿ ಬಸ್ ಗಳಲ್ಲಿ ರಾತ್ರಿ ಹೊತ್ತು ಹೆಚ್ಚುವರಿ ಹಣ ಪಡೆಯುವುದನ್ನು ಶೀಘ್ರದಲ್ಲೇ ರದ್ದುಪಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಹೇಳಿದ್ದರು.ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಬಿಎಂಟಿಸಿ ಬಸ್ ಗಳಲ್ಲಿ ರಾತ್ರಿ ಹೊತ್ತು ಹೆಚ್ಚುವರಿ ಟಿಕೆಟ್ ಶುಲ್ಕ ಪಡೆಯುವುದನ್ನು ರದ್ದುಪಡಿಸಲಾವುದು. ಸೆಪ್ಟೆಂಬರ್ 25ರಂದು ಬಿಎಂಟಿಸಿ ಪ್ರಾರಂಭವಾಗಿ 25 ವರ್ಷ ಪೂರ್ಣಗೊಳ್ಳಲಿದೆ. ಅಂದು ‘ನಮ್ಮ ಬಿಎಂಟಿಸಿ (Namma BMTC) ಬಸ್ ಟ್ರ್ಯಾಕಿಂಗ್ ಮೊಬೈಲ್ ಆ್ಯಪ್’ ಬಿಡುಗಡೆ ಮಾಡಲಾಗುವುದು. ಈ ಆ್ಯಪ್ ಮೂಲಕ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ಆ್ಯಪ್ನಲ್ಲಿ ಟಿಕೆಟ್ ಕೂಡ ಪಡೆಯಬಹುದು ಎಂದು ತಿಳಿಸಿದ್ದರು.