ಬೆಂಗಳೂರು: ಜೂನ್-13:ಆಡಳಿತದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ನಗರ ಪಾಲಿಕೆಯನ್ನು ವಿಭಜಿಸಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ಇದಕ್ಕೂ ಮುನ್ನ ಇದ್ದ ಬಿಎಸ್ ಪಾಟೀಲ್ ತಜ್ಞರ ಸಮಿತಿಯನ್ನು ಪುನರ್ ರಚನೆ ಮಾಡಿ ಆದೇಶಿಸಿದೆ. ಅಲ್ಲದೆ, ನಿಗದಿತ ಸಮಯದಲ್ಲಿ ವರದಿ ತರಿಸಿಕೊಂಡು ಅದರ ಆಧಾರದ ಮೇಲೆ ಪಾಲಿಕೆಯನ್ನು ಪುನರ್ ರಚಿಸಲು ಸರ್ಕಾರ ತೀರ್ಮಾನಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಬಿಎಸ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಈ ಹಿಂದೆ ರಚಿಸಲಾಗಿತ್ತು. ಇದಕ್ಕೆ ಮುಂದುವರೆದಂತೆ, ಪ್ರಸ್ತುತ ಪಾಲಿಕೆಯ ಆಡಳಿತಾತ್ಮಕ ಹಿತದೃಷ್ಟಿಯಿಂದ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ಬಿಎಸ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಈಗ ಪುನರ್ ರಚಿಸಲು ಸರ್ಕಾರವು ತೀರ್ಮಾನಿಸಿದೆ. ಅದರಂತೆ ಪಾಟೀಲ್ ಅಧ್ಯಕ್ಷತೆಯ ಸಮಿತಿಯಲ್ಲಿ ಬಿಬಿಎಂಪಿ ನಿವೃತ್ತ ಆಯುಕ್ತ ಸಿದ್ದಯ್ಯ ಮತ್ತು ಹಿಂದಿನ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸದಸ್ಯ ರವಿಚಂದರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಸಮಿತಿಯು ಬಿಬಿಎಂಪಿ ಪುನರ್ ರಚನೆ ಸಂಬಂಧ ಅಧ್ಯಯನ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಪಾಲಿಕೆ ವಿಶೇಷ ಆಯುಕ್ತರು (ಆಡಳಿತ) ಸಮಿತಿಗೆ ಬೇಕಾದ ಅಗತ್ಯ ಮಾಹಿತಿಯನ್ನು ಒದಗಿಸಬೇಕು ಮತ್ತು ತತ್ಸಬಂಧ ಕರೆಯಬೇಕಾಗಿರುವ ಸಭೆಗಳ ಬಗ್ಗೆ ಸೂಕ್ತವಾಗಿ ಸಮನ್ವಯ ಕಾರ್ಯ ನಿರ್ವಹಿಸಬೇಕು. ಸಮಿತಿಗೆ ಉತ್ತಮ ಕಚೇರಿ, ಕೊಠಡಿ, ಅಗ್ಯತ್ಯ ಸಿಬ್ಬಂದಿ, ಪೀಠೋಪಕರಣಗಳು, ವಾಹನ ಸೌಲಭ್ಯ ಸೇರಿದಂತೆ ಇನ್ನಿತರ ಅವಶ್ಯ ಸೌಲಭ್ಯ ಒದಗಿಸುವಂತೆ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್ಎಸ್ ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.