24.2 C
Bengaluru
Sunday, December 22, 2024

ಆಸ್ತಿ ಮೇಲೆ ತಂದೆ ಸಾಲ ಮಾಡಿದ್ದನ್ನು ತೀರಿಸಿದರೂ ಪುತ್ರನಿಗೆ ಸ್ವತಂತ್ರ ಹಕ್ಕು ಸ್ಥಾಪನೆಯಾಗುವುದಿಲ್ಲ: ಹೈಕೋರ್ಟ್

“ತಂದೆಯು ಜಮೀನು ಅಡವಿಟ್ಟು ಸಹೋದರಿಗೆ ಮದುವೆ ನೆರವೇರಿಸಿದ್ದು, ಚಿನ್ನಾಭರಣ ಸಹ ಕೊಡಿಸಿದ್ದಾರೆ. ತಂದೆಯ ಸಾಲ ತೀರಿಸಿ ನಾನು ಜಮೀನು ಹಿಂದಕ್ಕೆ ಪಡೆದಿದ್ದೇನೆ. ಆದ್ದರಿಂದ ತಂದೆಯ ಸಹೋದರಿಗೆ ತಂದೆ ಆಸ್ತಿ ಮೇಲೆ ಸಮಾನ ಹಕ್ಕು ಇಲ್ಲ ಮತ್ತು ಆಕೆಗೆ ಆಸ್ತಿಯಲ್ಲಿ ಪಾಲು ಕೊಡಲಾಗದು” ಎಂಬ ವಾದ ತಿರಸ್ಕರಿಸಿರುವ ಕರ್ನಾಟಕ ಹೈಕೋರ್ಟ್, ತಂದೆಯ ಆಸ್ತಿಯಲ್ಲಿ ಪುತ್ರನ ಜೊತೆಗೆ ಪುತ್ರಿಗೂ ಸಮಾನ ಪಾಲಿದೆ ಎಂದು ಆದೇಶಿಸಿದೆ

ತುಮಕೂರಿನ ಯಲ್ಲಾಪುರದ ಗ್ರಾಮದ ನಿವಾಸಿಗಳಾದ ವೆಂಕಟೇಶ ಮತ್ತು ಅವರ ತಾಯಿ ವೆಂಕಟಲಕ್ಷ್ಮಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು (ರೆಗ್ಯುಲರ್ ಫಸ್ಟ್ ಅಪೀಲ್) ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

ವಿನೀತಾ ಶರ್ಮಾ ಪ್ರಕರಣದಲ್ಲಿ “ತಂದೆಯ ಆಸ್ತಿಯಲ್ಲಿ ಪುತ್ರನಿಗೆ ಸರಿಸಮನಾದ ಪಾಲು ಪಡೆಯಲು ಪುತ್ರಿ ಸಹ ಅರ್ಹರಾಗಿರುತ್ತಾರೆ’ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದರಂತೆ ಈ ಪ್ರಕರಣದಲ್ಲಿ ಮೇಲ್ಮನವಿದಾರ ವೆಂಕಟೇಶ್ ಅವರ ಸೋದರತ್ತೆಯಾದ ಲಕ್ಷ್ಮಿದೇವಮ್ಮ ಸಹ ಅವರ ತಂದೆಯ ಆಸ್ತಿಯಲ್ಲಿ ಪಾಲು ಹೊಂದಲು (ಸಹೋದರ ಗೋವಿಂದಯ್ಯಗೆ ಸರಿಸಮಾನವಾಗಿ) ಅರ್ಹರಾಗಿದ್ದಾರೆ ಎಂದು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ತುಮಕೂರಿನ ಯಲ್ಲಾಪುರ ಗ್ರಾಮದ ನಿವಾಸಿಯಾಗಿದ್ದ ಕಲಗಿರಿಯಪ್ಪ ಎಂಬುವರಿಗೆ ಲಕ್ಷ್ಮಿದೇವಮ್ಮ ಮತ್ತು ಕೆ ಗೋವಿಂದಯ್ಯ ಎಂಬ ಮಕ್ಕಳು ಇದ್ದರು. ತಂದೆಯ ಆಸ್ತಿಯಲ್ಲಿ ಪಾಲು ಕೋರಿ 2011ರಲ್ಲಿ ಸಿವಿಲ್ ದಾವೆ ಹೂಡಿದ್ದ ಲಕ್ಷ್ಮಿದೇವಮ್ಮ, ತಂದೆ ಕಲಗಿರಿಯಪ್ಪ ಅವರ ಹೆಸರಿನಲ್ಲಿ 1943ರಿಂದ 1949ವರಗೆ ವಿವಾದಿತ ಜಮೀನು ನೋಂದಣಿಯಾಗಿದೆ. 1964ರಲ್ಲಿ ತಂದೆ ಮೃತಪಟ್ಟಿದ್ದಾರೆ. ತಂದೆಯ ಆಸ್ತಿಯು ಸಹೋದರ ಗೋವಿಂದಯ್ಯ ಸ್ವಾಧೀನದಲ್ಲಿದೆ. ಸಹೋದರ ಸಹ ಸಾವನ್ನಪ್ಪಿದ್ದು, ಆತನ ಪತ್ನಿ ಮತ್ತು ಮಕ್ಕಳು ಆಸ್ತಿ ಅನುಭವಿಸುತ್ತಿದ್ದಾರೆ. ಹೀಗಾಗಿ, ಆಸ್ತಿಯಲ್ಲಿ ತನಗೂ ಪಾಲು ನೀಡುವಂತೆ ಸಹೋದರನ ಪುತ್ರ ಮತ್ತು ಪತ್ನಿಗೆ (ಮೇಲ್ಮನಿದಾರರು) ಆದೇಶಿಸಬೇಕು ಎಂದು ಕೋರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಸಿವಿಲ್ ನ್ಯಾಯಾಲಯವು ಲಕ್ಷ್ಮಿದೇವಮ್ಮಗೆ ಅವರ ತಂದೆಯ ಆಸ್ತಿಯಲ್ಲಿ ಪಾಲು ಇದೆ ಎಂದು 2018ರಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಗೋವಿಂದಯ್ಯ ಪುತ್ರ ವೆಂಕಟೇಶ್ ಮತ್ತು ಪತ್ನಿ ವೆಂಕಟಲಕ್ಷ್ಮಮ್ಮ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿದಾರರ ಪರ ವಕೀಲರು, 1963ರಲ್ಲಿ ಲಕ್ಷ್ಮಿದೇವಮ್ಮ ಅವರಿಗೆ ಮದುವೆ ಮಾಡಲಾಗಿದೆ. ಕಲಗಿರಿಯಪ್ಪ ಅವರು 1964ರಲ್ಲಿ ಸಾವನ್ನಪ್ಪಿದ್ದರು. ಅವರ ಪುತ್ರ ಗೋವಿಂದಯ್ಯ ಉತ್ತರಾಧಿಕಾರಿಯಾಗಿದ್ದರು. ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಎರಡು ಎಕರೆ ಜಮೀನನ್ನು ಕಲಗಿರಿಯಪ್ಪ ಅಡವಿಟ್ಟು ಸಾಲ ಪಡೆದಿದ್ದರು. ಆ ಸಾಲದಲ್ಲೇ ಲಕ್ಷ್ಮಿದೇವಮ್ಮ ಅವರಿಗೆ ಮದುವೆ ಮಾಡಲಾಗಿತ್ತು. ಆಕೆಗೆ ಚಿನ್ನಾಭರಣ ಸೇರಿದಂತೆ ಸಾಕಷ್ಟು ಬೆಲೆಬಾಳುವ ವಸ್ತುಗಳನ್ನು ನೀಡಿದ್ದಾರೆ. ಲಕ್ಷ್ಮಿದೇವಮ್ಮ ಮದುವೆಯಾದ ಕೂಡಲೇ ಅವರು ಅವಿಭಕ್ತ ಕುಟುಂಬದ ಸದಸ್ಯರಾಗುತ್ತಾರೆ ಎಂದು ತಿಳಿಸಿದ್ದರು.

ಅಲ್ಲದೆ, 1971ರಲ್ಲಿ ಗೋವಿಂದಯ್ಯ ಪೊಲೀಸ್ ಇಲಾಖೆ ಸೇವೆಗೆ ಸೇರಿದ್ದರು. ನಂತರ ಸಾಲ ತೀರಿಸದ ಕಾರಣ ಆಸ್ತಿಯನ್ನು ಹರಾಜಿಗೆ ಇಡಲಾಗಿತ್ತು. ಸಾಲವನ್ನು ಗೋವಿಂದಪ್ಪ ತೀರಿಸಿ, ಆಸ್ತಿಯನ್ನು ದಕ್ಕಿಸಿಕೊಂಡಿದ್ದರು. ಇದರಿಂದ ಜಮೀನನ್ನು ಗೋವಿಂದಯ್ಯ ಅವರೇ ಸ್ವತಃ ಸಂಪಾದಿಸಿದಂತಾಗುತ್ತದೆ. ಆದ್ದರಿಂದ ಲಕ್ಷ್ಮಿದೇವಮ್ಮ ಅವರಿಗೆ ಆಸ್ತಿ ಮೇಲೆ ಹಕ್ಕು ಸೃಷ್ಟಿಯಾಗುವುದಿಲ್ಲ ಎಂದು ವಾದ ಮಂಡಿಸಿದ್ದರು.

ಈ ವಾದ ಒಪ್ಪದ ಹೈಕೋರ್ಟ್, ತಂದೆಯ ಸಾಲ ತೀರಿಸಿದ ಕೂಡಲೇ ವ್ಯಾಜ್ಯಕ್ಕೆ ಸಂಬಂಧಿಸಿದ ಜಮೀನಿನ ಮೇಲೆ ವೈಯಕ್ತಿಕ ಹಕ್ಕು ಸೃಷ್ಟಿಸುವುದಿಲ್ಲ. ಇನ್ನೂ ವಿವಾದಿತ ಜಮೀನು ಗೋವಿಂದಯ್ಯ ಅವರ ಸ್ವಯಾರ್ಜಿತ ಎಂಬುದನ್ನು ಸಾಬೀತುಪಡಿಸುವಲ್ಲಿ ಮೇಲ್ಮನವಿದಾರರು ವಿಫಲವಾಗಿದ್ದಾರೆ ಎಂದು ಅಭಿಪ್ರಾಯಪಟ್ಟು, ಕಲಗಿರಿಯಪ್ಪ ಆಸ್ತಿಯಲ್ಲಿ ಲಕ್ಷ್ಮಿದೇವಮ್ಮ ಅವರಿಗೆ ಪಾಲಿದೆ ಎಂದು ಆದೇಶಿಸಿದೆ.

Related News

spot_img

Revenue Alerts

spot_img

News

spot_img