ಬೆಂಗಳೂರು : ಕಂದಾಯ ಇಲಾಖೆಯ ಬಹುನಿರೀಕ್ಷಿತ ಯೋಜನೆ ಕರಡು ನಗರಾಸ್ತಿ ಮಾಲೀಕತ್ವ ದಾಖಲೆ (ಡಿಪಿಒಆರ್ ಪ್ರಾಪರ್ಟಿ) 4 ಲಕ್ಷ ಕಾರ್ಡ್ ವಿತರಿಸಲಾಗಿದೆ. ಶೀಘ್ರದಲ್ಲಿಯೇ ಉಳಿಕೆ ಸ್ಮಾರ್ಟ್ ಕಾರ್ಡ್ ವಿತರಿಸಲು ಸರ್ವೇ ಮತ್ತು ಸೆಟಲ್ ಮೆಂಟ್ ಆ್ಯಂಡ್ ಲ್ಯಾಂಡ್ ರೆಕಾರ್ಡ್ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.
ನಗರದಲ್ಲಿ ಮನೆ, ಅಪಾರ್ಟ್ಮೆಂಟ್ಗಳಿಗೆ ಭೂ ಕಂದಾಯ ಕಾಯ್ದೆಯಡಿ ಪ್ರಾಪರ್ಟಿ ಕಾರ್ಡ್ ನೀಡಲಾಗುತ್ತಿದೆ. ಈಗಾಗಲೆ ಡೋನ್ ಸರ್ವೇ ಮೂಲಕ ಆಸ್ತಿ ಸಮೀಕ್ಷೆ ಮಾಡಲಾಗಿದೆ. ಬಿಬಿಎಂಪಿ, ಬಿಡಿಎ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಂದ ದಾಖಲೆಗಳನ್ನು ಪಡೆದು ಮಾಲೀಕತ್ವ ಪರಿಶೀಲನೆ ನಡೆಸಿ ಪ್ರಾಪರ್ಟಿ ಕಾರ್ಡ್ ವಿತರಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ 158 ವಾರ್ಡ್ಗಳಲ್ಲಿ ಆಸ್ತಿಗಳ ಡೋನ್ ಸರ್ವೇ ಮಾಡಲಾಗಿದ್ದು, 4 ಲಕ್ಷ ಪ್ರಾಪರ್ಟಿ ಕಾರ್ಡ್ಗಳನ್ನು ವಿತರಿಸಲಾಗಿದೆ. ಸರ್ವೇ ಇಲಾಖೆ ಡೋನ್ ಬಳಸಿ ಪ್ರತಿ ತಿಂಗಳು 1 ಲಕ್ಷ ಆಸ್ತಿಗಳನ್ನು ಸರ್ವೇ ಮಾಡಲು ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ಆಸ್ತಿ ಮಾಲೀಕರಿಗೆ ಹಲವು ಅನುಕೂಲವಾಗಲಿದೆ. ಸಬ್ ರಿಜಿಸ್ಟಾರ್ ಕಚೇರಿಗೆ ನಕಲು ಪ್ರತಿಯನ್ನು ಸಲ್ಲಿಸುವ ಅಗತ್ಯ ಇರುವುದಿಲ್ಲ. ಈ ಕಾರ್ಡ್ ಅನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ನೀಡಿದರೆ, ಅದನ್ನು ಬಳಸಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಂಡು ನೋಂದಣಿ ಮಾಡಿಸಲಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವ್ಯವಹಾರ ನಡೆಸಲು ಈ ಮಾಲೀಕತ್ವದ ಸ್ಮಾರ್ಟ್ ಕಾರ್ಡ್ ಇದ್ದರೆ ಸಾಕು.
ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಆಸ್ತಿ ಮೇಲೆ ಸಾಲ ಪಡೆಯಲು ಸಹ ಕಾರ್ಡ್ ಇದ್ದರೆ ಸಾಕು. ಆಸ್ತಿ ಮಾಲೀಕತ್ವದ ಕಾರ್ಡ್ ಸಲ್ಲಿಕೆ ಮಾಡಿದರೆ ಅದರ ಪೂರ್ವಪರ ಪರಿಶೀಲನೆ ನಡೆಸಿ ಬ್ಯಾಂಕ್ಗಳು ಸಾಲ ಕೊಡಲಿವೆ, ವಾರಸುದಾರರು ದಾಖಲೆ ಒದಗಿಸುವುದು ಮತ್ತು ದೃಢೀಕರಣ ಮಾಡಿಸುವುದು ತಪ್ಪಲಿದೆ. ಪ್ರತಿ ವರ್ಷ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಪಾವತಿಸಲು ಮತ್ತು ಅಧಿಕಾರಿಗಳು ತೆರಿಗೆ ಸಂಗ್ರಹಿಸಲೂ ಅನುಕೂಲವಾಗಲಿದೆ. ಸ್ಮಾರ್ಟ್ ಕಾರ್ಡ್ನಲ್ಲಿ ಮಾಹಿತಿ ವಿನಿಮಯ ಮಾಡಿಕೊಂಡು ತೆರಿಗೆ ಪಾವತಿಸಬಹುದು. ತೆರಿಗೆ ಪಾವತಿಸಿದ ಮೇಲೆ ಅದರಲ್ಲಿ ಉಲ್ಲೇಖ ಸಹ ಆಗಲಿದೆ. ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆಗಳು ನಕ್ಷೆ ಅನುಮೋದನೆ, ವಿದ್ಯುತ್, ನೀರಿನ ಸಂಪರ್ಕ ಪಡೆಯಲು ಅನುಕೂಲವಾಗಲಿದೆ.
ಅತಿಕ್ರಮ ಪ್ರವೇಶಕ್ಕೆ ಬ್ರೇಕ್
ಒಬ್ಬರ ಆಸ್ತಿಯನ್ನು ಮತ್ತೊಬ್ಬರು ಕಬಳಿಸುವ ಅಪರಾಧಗಳನ್ನು ತಪ್ಪಿಸಬಹುದು. ಬೇರೆಯವರ ಆಸ್ತಿ ಮೇಲೆ ಸಾಲ ಪಡೆಯಲು ಸಾಧ್ಯವಿಲ್ಲ. ಕಾರ್ಡ್ ಇಲ್ಲದೆ ಯಾವುದೇ ಬ್ಯಾಂಕ್ನಲ್ಲಿ ಸಾಲ ಸಿಗುವುದಿಲ್ಲ. ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಣಿ ಸಹ ನಡೆಸುವುದಿಲ್ಲ. ಆಸ್ತಿಗೆ ಭದ್ರತೆ ಸಿಗಲಿದೆ.
ಆಸ್ತಿ ಮಾಲೀಕತ್ವದ ದಾಖಲೆ ವಿಶೇಷತೆ
• ಯುಎಲ್ಪಿನ್ ವಿಶೇಷ ಸಂಖ್ಯೆ
• ನಗರ, ಹಳ್ಳಿ ಸರ್ವೇ ನಂಬರ್, ವಾರ್ಡ್ ವಿವರ
• ಆಸ್ತಿ ವಿವರ, ವಿಸ್ತೀರ್ಣ, ಮನೆ, ಸೈಟು ಇತ್ಯಾದಿ
• ಮಾಲೀಕತ್ವದ ವಿವರ, ಆಸ್ತಿಯ ಪೂರ್ವವರ ಮಾಹಿತಿ
• ಆಸ್ತಿ ನಕ್ಷೆ, ಸುತ್ತಳತೆ, ಅಕ್ಕ-ಪಕ್ಕದ ವಿಸ್ತೀರ್ಣದ ವಿವರ
• ಆಸ್ತಿ ಮೇಲಿನ ಸಾಲದ ವಿವರ, ಬಾಕಿ ಇರುವ ಮೊತ್ತ
• ಆಸ್ತಿಯ ಮೇಲಿನ ಹಕ್ಕುಗಳು, ನಿರ್ಬಂಧಗಳು
ಶೂರಿಟಿಗೂ ಬಳಕೆ
ಪಿತ್ರಾರ್ಜಿತ ಆಸ್ತಿ ವಿಭಜನೆ ವೇಳೆ ಸುಲಭವಾಗಿ ಹಂಚಿಕೆ ಮಾಡಿಕೊಳ್ಳಬಹುದು. ಆಸ್ತಿ ಮಾಲೀಕತ್ವದ ದಾಖಲೆ (ಪ್ರಾಪರ್ಟಿ ಕಾರ್ಡ್) ಬಳಸಿಕೊಂಡು ಕಂಪ್ಯೂಟರ್ ನಲ್ಲಿ ನಕ್ಷೆ ಸಿದ್ಧಪಡಿಸಿ ವಿಭಜನೆ ಮಾಡಿ ಮಾಲೀಕತ್ವದ ಹೆಸರನ್ನು ಉಲ್ಲೇಖಿಸಬಹುದು. ಕೋರ್ಟ್ನಲ್ಲಿ ದಾವೆ ಹೂಡಿಕೆಗೆ ಅನುಕೂಲ ಆಗಲಿದೆ. ನ್ಯಾಯಾಲಯದಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ ಶ್ಯೂರಿಟಿ ಬಾಂಡ್ ಸಲ್ಲಿಸುವಾಗ ಕಾರ್ಡ್ ಒಪ್ಪಿಸಿ ಜಾಮೀನು ಪಡೆಯಬಹುದು.ಕೋರ್ಗೂದ್ ನಕಲಿ ಶೂರಿಟಿ ಸಲ್ಲಿಸುವರ ಹಾವಳಿ ತಪ್ಪಲಿದೆ.