ಬೆಂಗಳೂರು, ಮೇ. 09 : ಮನೆಯನ್ನು ಬಾಡಿಗೆಗೆ ಕೊಡುವ ಮುನ್ನ ಹಲವು ವಿಚಾರಗಳನ್ನು ತಿಳಿದಿರಬೇಕಾಗುತ್ತದೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಲಕ್ಷಾಂತರ ಬಂದಿ ಬಾಡಿಗೆ ಮನೆಯನಲ್ಲಿ ಉಳಿದುಕೊಂಡಿದ್ದಾರೆ. ಮಹಾನಗರಗಳಲ್ಲಿ ಬಾಡಿಗೆ ಮನೆಯ ಬೇಡಿಕೆಯೂ ಕೂಡ ಹೆಚ್ಚಾಗಿಯೇ ಇರುತ್ತದೆ. ಇನ್ನು ಸ್ವಂತ ಮನೆ ಇದ್ದವರು, ಹೆಚ್ಚು ಆದಾಯ ಉಳ್ಳವರು ಮನೆಯನ್ನು ಖರೀದಿಸಿ ಬಾಡಿಗೆಗೆ ಕೊಡುತ್ತಿರುತ್ತಾರೆ. ಅದರಿಂದ ಬರುವ ಆದಾಯದಿಂದ ತಮ್ಮ ಕುಟುಂಬ ಜೀವನ ನಿರ್ವಹಣೆ ಇನ್ನಷ್ಟು ಸುಲಭವಾಗಲಿ ಎಂಬುದು ಅವರ ಆಲೋಚನೆ ಆಗಿರುತ್ತದೆ.
ಬಾಡಿಗೆಗೆ ಮನೆ ಕೊಡುವುದು, ಬಾಡಿಗೆ ಮನೆಯಲ್ಲಿ ಇರುವುದು ಎರಡೂ ಕೂಡ ಈಗಿನ ಮಹಾನಗರಗಳಲ್ಲಿ ಅನಿವಾರ್ಯವಾಗಿಬಿಟ್ಟಿದೆ. ಆದರೆ ಬಾಡಿಗೆ ಮನೆಯಲ್ಲಿ ವಾಸ ಮಾಡಲು ಎಷ್ಟೆಲ್ಲಾ ಕಷ್ಟವಾಗುತ್ತದೋ, ಅಷ್ಟೇ ಕಷ್ಟವನ್ನು ಮಾಲೀಕರೂ ಪಡುತ್ತಾರೆ. ಯಾರಿಗಾದರೂ ಬಾಡಿಗೆಯನ್ನು ಕೊಡುವ ಮುನ್ನ ಸಾವಿರ ಸಲ ಆಲೋಚನೆಯನ್ನು ಮಾಡುತ್ತಾರೆ. ಆ ವ್ಯಕ್ತಿ ಯಾರು, ಬಾಡಿಗೆ ಸರಿಯಾಗಿ ಕೊಡುತ್ತಾರಾ..? ಅವರಂದ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲವೇ..? ಎಂಬೆಲ್ಲಾ ಬಗ್ಗೆ ಆಲೋಚಿಸಬೇಕಾಗುತ್ತದೆ.
ಮಾಲೀಕರು ಮನೆಯನ್ನು ಬಾಡಿಗೆಗೆ ನೀಡುವ ಮುನ್ನ ಆದಷ್ಟು ನಿಮಗೆ ತಿಳಿದಿರುವ ವ್ಯಕ್ತಿಗೆ ಭಾಡಿಗೆ ಮನೆಯನ್ನು ನೀಡಿ. ನಿಮ್ಮ ಸ್ನೇಹಿತರ ಸ್ನೇಹತರಿಗೆ ಪರಿಚಯ ಇರುವವರು, ಇಲ್ಲ ನಿಮ್ಮ ಸಂಬಂಧಿಕರ ಸ್ನೇಹಿತರು ಹೀಗೆ ಹೇಗಾದರೂ ನಿಮಗೆ ಗೊತ್ತಿರುವ ವ್ಯಕ್ತಿಗೆ ಬಾಡಿಗೆ ಮನೆಯನ್ನು ಕೊಡುವುದು ಸೂಕ್ತ. ಇಲ್ಲವೇ ಆವ್ಯಕ್ತಿ ಈ ಹಿಂದೆ ಇದ್ದ ಬಾಡಿಗೆ ಮನೆಯ ಮಾಲೀಕರನ್ನು ಒಮ್ಮೆ ಸಂಪರ್ಕಿಸಿ.
ಇನ್ನು ಮನೆ ಬಾಡಿಗೆಯನ್ನು ಕೊಡುವ ಮುನ್ನ ಅವರ ಆಧಾರ್ ಕಾರ್ಡ್ ಪ್ರತಿಯನ್ನು ಪಡೆಯಿರಿ. ಅಗ್ರಿಮೆಂಟ್ ಮಾಡಿಸುವಾಗ ಅವರ ಊರಿನ ವಿಳಾಸವನ್ನು ನಮೂದಿಸಿ. ವ್ಯಕ್ತಿಯ ಪೋಷಕರ ಬಗ್ಗೆ ಮಾಹಿತಿಯನ್ನು ಪಡೆಯಿರಿ. ಮನೆಯಲ್ಲಿ ಎಷ್ಟು ಜನ ಇರುತ್ತಾರೆ. ಅವರೆಲ್ಲಾ ಯಾರು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಪಡೆಯಿರಿ. ಮನೆ ಬಾಡಿಗೆ ಪಡೆಯುತ್ತಿರುವ ವ್ಯಕ್ತಿ ಎಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮನೆಗೆ ಬರಲು ಕಾರಣವನ್ನು ತಿಳಿಯಿರಿ. ವ್ಯಕ್ತಿಯನ್ನು ಹೆಚ್ಚು ಮಾತನಾಡಿಸಿ, ಅವರ ಬಗೆಗಿನ ದಾಖಲೆಗಳನ್ನು ಪರಿಶೀಲಿಸಿ.