25.6 C
Bengaluru
Monday, December 23, 2024

ಚುನಾವಣಾ ಅಕ್ರಮ: ಈವರೆಗೆ 309 ಕೋಟಿ ರೂ.ಮೌಲ್ಯದ ವಸ್ತುಗಳು ಜಪ್ತಿ!

ಬೆಂಗಳೂರು ಮೇ 2 :ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ತನಿಖಾ ಸಂಸ್ಥೆಗಳು ನೂರಾರು ಕೋಟಿ ರೂಪಾಯಿ ಮೌಲ್ಯದ ನಗದು, ವಸ್ತು, ಮದ್ಯ ಮತ್ತಿತರೆ ವಸ್ತುಗಳನ್ನು ಜಪ್ತಿ ಮಾಡಿವೆ.
ಬೆಂಗಳೂರು: ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ತನಿಖಾ ಸಂಸ್ಥೆಗಳು ಅವಿರತ ಕಾರ್ಯನಿರ್ವಹಿಸುತ್ತಿವೆ.

ನಿನ್ನೆ (ಸೋಮವಾರ) ಬೆಂಗಳೂರಿನ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 1.02 ಕೋಟಿ ರೂ. ಮೌಲ್ಯದ 2.05 ಕೆ.ಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ 1.50 ಕೋಟಿ ರೂ. ಮೌಲ್ಯದ 2.67 ಕೆ.ಜಿ ಮಾದಕ ವಸ್ತುಗಳು ಮತ್ತು ಬೆಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 61.40 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 111.11 ಕೋಟಿ ನಗದು, 22.33 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ಸೀಜ್ ಮಾಡಲಾಗಿದೆ.

74.13 ಕೋಟಿ ರೂ. ಮೌಲ್ಯದ 19.62 ಲಕ್ಷ ಲೀಟರ್ ಮದ್ಯ, 21.13 ಕೋಟಿ ರೂ. ಮೌಲ್ಯದ 1,662.28 ಕೆ.ಜಿ ಮಾದಕ ವಸ್ತುಗಳು, 76.05 ಕೋಟಿ ರೂ. ಮೌಲ್ಯದ 149.42 ಕೆಜಿ ಚಿನ್ನ, 4.48 ಕೋಟಿ ರೂ. ಮೌಲ್ಯದ 644.54 ಕೆಜಿ ಬೆಳ್ಳಿ ಜಪ್ತಿಯಾಗಿದೆ. ಒಟ್ಟು 80.53 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳು ದೊರೆತಿವೆ. ನಗದು, ಮದ್ಯ ಸೇರಿದಂತೆ ಒಟ್ಟು 309.35 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.

2,390 ಎಫ್‌ಐಆರ್, 69,825 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದ್ದು, 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದುಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 5,522 ಪ್ರಕರಣ ದಾಖಲಿಸಲಾಗಿದೆ. 10,077 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 15,456 ಜಾಮೀನುರಹಿತ ವಾರೆಂಟ್ ‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಆಯೋಗವು ತಿಳಿಸಿದೆ.ಮಾರ್ಚ್​ 29 ರಿಂದ ನೀತಿ ಸಂಹಿತೆ ಜಾರಿ: ದೇಶದಲ್ಲಿ ಯಾವುದೇ ಚುನಾವಣೆ ಘೋಷಣೆಯಾದಾಗ ಅದರ ಜೊತೆಗೆ ಚುನಾವಣಾ ನೀತಿ ಸಂಹಿತೆಯೂ ಘೋಷಣೆಯಾಗುತ್ತದೆ. ಚುನಾವಣೆ ಫಲಿತಾಂಶ ಹೊರಬೀಳುವ ತನಕ ರಾಜಕೀಯ ನಾಯಕರು, ಪಕ್ಷಗಳು ಮತ್ತು ಚುನಾವಣಾ ಪ್ರಕ್ರಿಯಿಗೆ ಸಂಬಂಧಿಸಿದ ಎಲ್ಲರೂ ನೀತಿ ಸಂಹಿತೆಗೆ ಬದ್ಧರಾಗಿರಬೇಕಿದೆ.

ನೀತಿ ಸಂಹಿತೆ ಎಂದರೇನು?: What is Code of Conduct?
ನೀತಿ ಸಂಹಿತೆ ಎನ್ನುವುದು ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಸೂಚಿಸಿದ ನಿಯಮಗಳ ಪಟ್ಟಿ. ನೀತಿ ಸಂಹಿತೆ ಉಲ್ಲಂಘನೆ ಮಾಡಿದಲ್ಲಿ ಮತದಾನ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಚುನಾವಣಾ ಆಯೋಗದಿಂದ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.

 

ನೀತಿ ಸಂಹಿತೆಯಲ್ಲಿ ಮುಖ್ಯವಾಗಿ ಪಕ್ಷಗಳು, ಅಭ್ಯರ್ಥಿಗಳು ಮತದಾರರಿಗೆ ಲಂಚ ನೀಡುವುದು, ಮತದಾರರಿಗೆ ಬೆದರಿಕೆ ಹಾಕುವುದು, ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಕ್ರಮ ಹಾದಿ ಹಿಡಿಯುವುದು ನಡೆಸುವಂತಿಲ್ಲ. ಇದಕ್ಕಾಗಿ ಚುನಾವಣಾ ಆಯೋಗ ವಿವಿಧ ತನಿಖಾ ಸಂಸ್ಥೆಗಳ ಮೂಲಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಕೋಟ್ಯಂತರ ಮೌಲ್ಯದ ಅಕ್ರಮ ನಗದು, ವಸ್ತುಗಳು ಮುಂತಾದವನ್ನೆಲ್ಲ ವಶಪಡಿಸಿಕೊಳ್ಳುತ್ತಿದೆ.

Related News

spot_img

Revenue Alerts

spot_img

News

spot_img