#Law #Ancestral property rights #Hindu law #Hindu succession act,
ಬೆಂಗಳೂರು, ಏ. 28: ಪಿತ್ರಾರ್ಜಿತ ಆಸ್ತಿ ಎಂದರೇನು ? ಈ ಆಸ್ತಿಯಲ್ಲಿ ಪಾಲು ಪಡೆಯುವುದೇಗೆ ? ಪಿತ್ರಾರ್ಜಿತ ಆಸ್ತಿಯಲ್ಲಿ ಎಷ್ಟು ತಲೆಮಾರು ಪಾಲು ಪಡೆಯಲು ಅರ್ಹರು ? ಗಿಫ್ಟ್ ಡೀಡ್ ಮೂಲಕ ಪಿತ್ರಾರ್ಜಿತ ಆಸ್ತಿಯನ್ನು ಪಡೆದರೆ ಅದಕ್ಕೆ ಮಾನ್ಯತೆ ಇದೆಯೇ? ರಾಜ್ಯದಲ್ಲಿ ಬಹುತೇಕ ಕುಟುಂಬಗಳು ಪಿತ್ರಾರ್ಜಿತ ಆಸ್ತಿ ಹೊಂದಿವೆ. ಆದ್ರೆ ಪಿತ್ರಾರ್ಜಿತ ಆಸ್ತಿಯಲ್ಲಿನ ಹಕ್ಕು, ಯಾರಿಗೆಲ್ಲಾ ಪಾಲು ಇರುತ್ತದೆ ? ಎಷ್ಟು ತಲೆಮಾರು ವರೆಗೂ ಆಸ್ತಿ ಹಕ್ಕು ಹೊಂದಿರುತ್ತದೆ ಎಂಬುದರ ಸಮಗ್ರ ಮಾಹಿತಿ ಇಲ್ಲಿ ವಿವರಿಸಲಾಗಿದೆ.
Ancestral property: ಪಿತ್ರಾರ್ಜಿತ ಆಸ್ತಿ ಎಂದರೇನು ?:
ಒಂದು ಕುಟುಂಬ ನಾಲ್ಕು ತಲೆಮಾರುಗಳಿಂದ ಹೊಂದಿರುವ ಒಟ್ಟು ಕುಟುಂಬದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯುತ್ತೇವೆ. ಒಮ್ಮೆ ಕುಟುಂಬದ ಯಜಮಾನನಿಂದ ಹಕ್ಕುದಾರರಿಗೆ ಆಸ್ತಿ ಇಬ್ಬಾಗವಾಗಿ ಹಂಚಿಕೆ ಮಾಡಿದ ಬಳಿಕ ಅದು ಸ್ವಯಾರ್ಜಿತ ಆಸ್ತಿಯಾಗಿ ಬದಲಾಗುತ್ತದೆ.
ಮುತ್ತಾತನ ಆಸ್ತಿಯಲ್ಲಿ ಮೊಮ್ಮಗ ಪಾಲು ಪಡೆಯಲು ಅರ್ಹರಾಗಿರುತ್ತಾರೆ. ಪಿತ್ರಾರ್ಜಿತ ಆಸ್ತಿಯಲ್ಲಿ ನಾಲ್ಕು ತಲೆಮಾರಿನವರು ಪಾಲು ಪಡೆಯಲು ಅರ್ಹರಾಗಿರುತ್ತಾರೆ. ಪಿತ್ರಾರ್ಜಿತ ಆಸ್ತಿಯನ್ನು ಇಬ್ಬಾಗ ಪತ್ರದ ಮೂಲಕ ಅಥವಾ ಕುಟುಂಬದ ಕರಾರು ಪತ್ರ ಅಥವಾ ಪಂಚಾಯಿತಿ ಮೂಲಕ ಆಸ್ತಿಯನ್ನು ಭಾಗ ಮಾಡಿಕೊಂಡು ಪಾಲು ಪಡೆದುಕೊಳ್ಳಬಹುದು. 2005 ರಲ್ಲಿ ಹಿಂದೂ ಉತ್ತರ ದಾಯಿತ್ವ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಹೆಣ್ಣು ಮಕ್ಕಳು ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕು ಪಡೆದುಕೊಂಡರು. ಈ ತಿದ್ದಪಡಿ ಕಾಯ್ದೆ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಹಾಗೂ ಅವರ ಮಕ್ಕಳು ಸಹ ತಮ್ಮ ಪಾಲು ಪಡೆಯಲು ಅರ್ಹರು.
How many Generations can claim ancestral property: ಎಷ್ಟು ತಲೆಮಾರಿಗೆ ಹಕ್ಕು:
ಪಿತ್ರಾರ್ಜಿತ ಆಸ್ತಿಯನ್ನು ನಾಲ್ಕು ತಲೆಮಾರಿನವರು ಹಕ್ಕುಳ್ಳವರಾಗಿರುತ್ತಾರೆ. ಉದಾಹರಣೆಗೆ ರಾಮಪ್ಪ- ರಾಮಪ್ಪನ ಮಗ ಶಾಮಣ್ಣ. ಶಾಮಾಣ್ಣನ ಮಕ್ಕಳು, ಶಾಮಣ್ಣನ ಮಕ್ಕಳು ಹಾಗೂ ಮೊಮ್ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಕಾನೂನು ಪ್ರಕಾರ ಪಾಲು ಪಡೆಯಬುದಾಗಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಎಲ್ಲರಿಗೂ ಸಮಪಾಲು ಆಸ್ತಿಯ ಹಕ್ಕು ಇರುತ್ತದೆ.
Undivided property: ಅವಿಭಜಿತ ಆಸ್ತಿ ಎಂದರೇನು?
ರಾಮ ಎಂಬ ವ್ಯಕ್ತಿ ತನ್ನ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ ಮಾಡಿದ್ರೆ ಅದು ಆಸ್ತಿಯ ಇಬ್ಬಾಗ ಆಗುತ್ತದೆ. ನಾಲ್ಕು ತಲೆ ಮಾರು ವರೆಗೂ ಆಸ್ತಿ ಭಾಗ ಆಗದಿದ್ದರೆ ಮಾತ್ರ ಅದು ಅವಿಭಜಿತ ಆಸ್ತಿ ಎಂದು ಕರೆಯುತ್ತೇವೆ. ಆಸ್ತಿಇ ಇಬ್ಬಾಗ ವಾದರೆ ಅದು ಸ್ವಯಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುತ್ತದೆ.
ಗಿಫ್ಟ್ ಡೀಡ್ ಮೂಲಕ ಪಿತ್ರಾರ್ಜಿತ ಆಸ್ತಿ ಪಡೆಯಬಹುದೇ ?
ಕುಟುಂಬದ ಯಜಮಾನ ವಿಲ್ ಅಥವಾ ಗಿಫ್ಟ್ ಡೀಡ್ ಮೂಲಕ ಪಿತ್ರಾರ್ಜಿತ ಆಸ್ತಿಯನ್ನು ಬರೆದುಕೊಟ್ಟರೆ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇರಲ್ಲ. ಅಂತಹ ಪತ್ರಗಳಿಂದ ಆಸ್ತಿಯ ಹಕ್ಕುಗಳು ಬದಲಾಗುವುದಿಲ್ಲ. ಆದ್ರೆ ಒಬ್ಬ ತಂದೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆದು ಅದನ್ನು ತನಗೆ ಇಷ್ಟ ಬಂದವರಿಗೆ ಗಿಫ್ಟ್ ಡೀಡ್ ಮೂಲಕ ನೀಡಿದರೆ ಅಥವಾ ವಿಲ್ ಮೂಲಕ ಬರೆದಿಟ್ಟಿದ್ದರೆ ಅಂತಹ ದಾಖಲೆಗಳು ಕಾನೂನು ಅಡಿ ಮಾನ್ಯತೆ ಪಡೆದುಕೊಳ್ಳುತ್ತವೆ. ಆಸ್ತಿಯ ಹಕ್ಕುಗಳು ವರ್ಗಾವಣೆ ಆಗುತ್ತವೆ.
ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕು:
ಒಬ್ಬ ವ್ಯಕ್ತಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆದು ಸ್ವಯಾರ್ಜಿತವಾದ ಬಳಿಕ, ಅಂತಹ ಆಸ್ತಿಯನ್ನು ಆ ವ್ಯಕ್ತಿ ತನ್ನ ಮಕ್ಕಳಿಗೆ ಬಿಟ್ಟು ಕೊಡದೇ ಅದರಲ್ಲಿ ಮಕ್ಕಳು ಪಾಲು ಪಡೆಯಲು ಅನರ್ಹರು. ಒಬ್ಬ ವ್ಯಕ್ತಿಗೆ ಸ್ವಯಾರ್ಜಿತವಾಗಿ ಬಂದಿರುವ ಮನೆ ಇದೆ ಎಂದಿಟ್ಟುಕೊಳ್ಳಿ. ವಯಸ್ಕ ಮಗಳು ಅಥವಾ ಮಗ ತನ್ನ ಪಾಲು ಕೇಳುವಂತಿಲ್ಲ. ಪೋಷಕರು ಇಷ್ಟ ಪಟ್ಟರೆ ಆ ಮನೆಯಲ್ಲಿ ವಾಸ ಮಾಡಬಹುದು ವಿನಃ ಪಾಲು ಪಡೆಯಲು ಆಗದು. ಈ ಆಸ್ತಿಯ ಮೇಲೆ ಮಕ್ಕಳು ಯಾವುದೇ ಹಕ್ಕು ಸಾಧಿಸಲು ಬರುವುದಿಲ್ಲ. ಈ ಕುರಿತು ದೆಹಲಿ ಹೈಕೋರ್ಟ್ 2016 ರಲ್ಲಿ ನೀಡಿರುವ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಹಿರಿಯ ನಾಗರಿಕರ ಆಧಾರವಾಗಿರುವ ಆಸ್ತಿಯನ್ನು ಮಕ್ಕಳು ಸ್ವಾಧೀನ ಪಡಿಸಿಕೊಂಡಿದ್ದರೆ, ಅಂತಹ ಆಸ್ತಿಯನ್ನು ಸಹ ಮಕ್ಕಳು ತಮ್ಮ ಪಾಲಕರಿಗೆ ಬಿಟ್ಟುಕೊಡಬೇಕು. ಬಿಟ್ಟುಕೊಡದಿದ್ದ ಪಕ್ಷದಲ್ಲಿ ಅವರನ್ನು ತೆರವುಗೊಳಿಸಬಹುದು ಎಂದು ಸಹ ದೆಹಲಿ ಹೈಕೋರ್ಟ್ 2018 ರಲ್ಲಿ ತೀರ್ಪನ್ನು ನೀಡಿದೆ. ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನಗೆ ಇಷ್ಟ ಬಂದವರಿಗೆ ಮಾರಾಟ ಮಾಡಬಹುದು ಅಥವಾ ಮಕ್ಕಳಿಗೆ ನೀಡಬಹುದು.
ಪಿತ್ರಾರ್ಜಿತ ಆಸ್ತಿಯ ಹಕ್ಕು ಯಾವಾಗ ಸಿಗುತ್ತದೆ ?:
ಯಾವುದೇ ಒಂದು ಅವಿಭಕ್ತ ಕುಟುಂಬದಲ್ಲಿ ಜನಿಸಿದ ಮಗುವಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕು ಲಭ್ಯವಾಗುತ್ತದೆ. ಈ ಹಕ್ಕು ಯಾವುದೇ ವಿಲ್ ಅಥವಾ ಕರಾರುಗಳಿಂದ ಲಭ್ಯವಾಗುವುದಿಲ್ಲ.
Share of each in ancestral property: ಪಿತ್ರಾರ್ಜಿತ ಆಸ್ತಿಯಲ್ಲಿ ಸಿಗುವ ಪಾಲು ಎಷ್ಟು ?
ಪಿತ್ರಾರ್ಜಿತ ಆಸ್ತಿ ಹಂಚಿಕೆ ಸಮಪಾಲು ತತ್ವದ ಮೇಲೆ ನಿಂತಿದೆ. ಎ ಎಂಬ ವ್ಯಕ್ತಿಯ ಆಸ್ತಿಯು ತನ್ನ ಎಲ್ಲಾ ಮಕ್ಕಳಿಗೆ ಸಮಪಾಲು ಹಂಚಿಕೆಯಾಗುತ್ತದೆ. ಎ ಮಕ್ಕಳು ತಮ್ಮ ಆಸ್ತಿಯನ್ನು ತಮ್ಮ ಮಕ್ಕಳಿಗೆ ಸಮಪಾಲು ಹಂಚಿಕೆ ಮಾಡಬೇಕಾಗುತ್ತದೆ. ಎ ನ ಮೊಮ್ಮಕ್ಕಳು ತಮ್ಮ ಮಕ್ಕಳಿಗೆ ಸಮಪಾಲು ಆಸ್ತಿಯ ಹಕ್ಕು ಹೊಂದಿರುತ್ತಾರೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರ ಪಾಲು: ಹಿಂದೂ ಉತ್ತರ ದಾಯಿತ್ವ ಕಾಯಿದೆ 1956 ಕ್ಕೆ ತಿದ್ದುಪಡಿ ತರುವ ಮುನ್ನ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಹಕ್ಕು ಇರಲಿಲ್ಲ. 2005 ರಲ್ಲಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಪಾಲು ಹಕ್ಕು ಲಭ್ಯವಾಯಿತು. ಹೆಣ್ಣು ಮಕ್ಕಳ ಮಕ್ಕಳು ಅಥವಾ ಮೊಮ್ಮಕ್ಕಳು ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು. ಮಹಿಲೆ ಮದುವೆಯಾದ ಬಳಿಕವೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಬಹುದು.
ಕೃಷಿ ಭೂಮಿಯಲ್ಲಿ ಮಹಿಳೆಯರ ಹಕ್ಕು:
ಹಿಂದೂ ಉತ್ತರ ದಾಯಿತ್ವ ಕಾಯಿದೆ 1956 ತಿದ್ದುಪಡಿ ಮೂಲಕ ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಪಾಲು ಪಡೆಯುವ ಹಕ್ಕು ದೊರೆಯಿತು. ಕೃಷಿ ಭೂಮಿಯಲ್ಲಿ ಸಹ ಮಹಿಳೆಯರು ಸಮಪಾಲು ಪಡೆಯಲು ಹಕ್ಕುಳ್ಳವರಾಗಿದ್ದಾರೆ.
ಮಾವನ ಆಸ್ತಿಯಲ್ಲಿ ಅಳಿಯನಿಗೆ ಪಾಲು ?
ಮಾವನ ಆಸ್ತಿಯಲ್ಲಿ ಅಳಿಯ ಪಾಲು ಪಡೆಯಲು ಹಿಂದೂ ಉತ್ತರ ದಾಯಿತ್ವ ಕಾಯಿದೆ ಅಡಿ ಅವಕಾಶವಿಲ್ಲ. ಒಂದು ವೇಳೆ ಅಳಿಯ ಮಾವನಿಗೆ ಮನೆ ಕಟ್ಟಿಕೊಟ್ಟಿದ್ದರೂ ಸಹ ಮಾವನ ಆಸ್ತಿಯಲ್ಲಿ ಪಾಲು ಪಡೆಯಲು ಅಳಿಯನಿಗೆ ಹಕ್ಕಿಲ್ಲ ಎಂದು ಕೇರಳ ಹೈಕೋರ್ಟ್ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿದೆ. ಅಳಿಯ ಮಾವನ ಕುಟುಂಬದ ಸದಸ್ಯ ಆಗುವುದಿಲ್ಲ. ಮಾವನ ಆಸ್ತಿಯಲ್ಲಿ ಅಳಿಯ ಯಾವುದೇ ಕಾನೂನು ಬದ್ಧ ಹಕ್ಕು ಹೊಂದಿರುವುದಿಲ್ಲ. ಒಂದು ವೇಳೆ ಮಾವ ಇಷ್ಟಪಟ್ಟಲ್ಲಿ ತನ್ನ ಆಸ್ತಿಯನ್ನು ಅಳಿಯನಿಗೆ ಸ್ವಯಂ ಪ್ರೇರಿತವಾಗಿ ದಾನ ಮಾಡಬಹುದು.
ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆ ಅನ್ವಯ:
ಪಿತ್ರಾರ್ಜಿತ ಆಸ್ತಿಯ ಪಾಲು ಕುರಿತ ವಿವರಿಸುವ ಹಿಂದೂ ಉತ್ತರ ದಾಯಿತ್ವ ಕಾಯಿದೆ 1956 ಹಿಂದೂಮ ಸಿಕ್, ಜೈನ್ ಮತ್ತು ಬುದ್ಧರಿಗೆ ಅನ್ವಯಿಸುತ್ತದೆ. ಮುಸ್ಲಿಂರಿಗೆ ಮುಸ್ಲಿಂ ವೈಯಕ್ತಕ ಕಾನೂನು ( ಷರಿಯತ್ ) ಅನ್ವಯ ಆಗಲಿದೆ. ಕ್ರಿಶ್ಚಿಯನ್ನರು ಈಗಾಗಲೇ ಮಹಿಳೆಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ನೀಡಬೇಕೆಂಬ ನಿಯಮಗಳಿವೆ.
ಪಿತ್ರಾರ್ಜಿತ ಆಸ್ತಿ ಯಾರು ಮಾರಾಟ ಮಾಡಬಹುದು ?
ಪಿತ್ರಾರ್ಜಿತ ಆಸ್ತಿಯನ್ನು ಹಿಂದೂ ಅವಿಭಕ್ತ ಕುಟುಂಬದ ಒಡೆಯ ತನ್ನ ಸ್ವಯಂ ಇಚ್ಚೆ ಮೇರೆಗೆ ಮಾರಲು ಸಾಧ್ಯವಿಲ್ಲ. ಆಸ್ತಿ ಮೇಲೆ ನಾಲ್ಕು ತಲೆಮಾರಿನವರ ಹಕ್ಕು ಇರುವ ಕಾರಣದಿಂದ, ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡುವ ಮನೆಯ ಯಜಮಾನ ಆಸ್ತಿ ಮೇಲೆ ಹಕ್ಕುಳ್ಳ ಎಲ್ಲಾ ವ್ಯಕ್ತಿಗಳ ಸಮ್ಮತಿ ಪಡೆಯಬೇಕು. ಒಬ್ಬರ ಸಮ್ಮತಿ ಸಿಗದಿದ್ದರೂ ಆಸ್ತಿ ಮಾರಾಟ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮಾರಾಟ ಮಾಡಲು ಯತ್ನಿಸಿದರೆ ತಮ್ಮ ಆಸ್ತಿ ಪಾಲು ಕೇಳಿ ಲೀಗಲ್ ನೋಟಿಸ್ ನೀಡಬಹುದು.
ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಪತ್ನಿಯ ಹಕ್ಕು:
ಹಿಂದೂ ಕಾನೂನು ಪ್ರಕಾರ ಗಂಡನ ಪಿತ್ರಾರ್ಜಿತ ಆಸ್ತಿಯ ಪಾಲನ್ನು ಪತ್ನಿ ಪಡೆಯಲು ಅರ್ಹಳಾಗಿರುತ್ತಾಳೆ. ಗಂಡನ ಸ್ವಯಾರ್ಜಿತ ಆಸ್ತಿ ಆಗುವ ಕಾರಣ ಅದರ ಮೇಲೆ ಪತ್ನಿಗೆ ಸಂಪೂರ್ಣ ಹಕ್ಕುಗಳು ಇರುತ್ತವೆ. ಒಂದು ವೇಳೆ ಗಂಡನ ಸ್ವಯಾರ್ಜಿತ ಆಸ್ತಿಯಾಗಿದ್ದರೆ, ಗಂಡ ತೀರಿಕೊಂಡ ಪಕ್ಷದಲ್ಲಿ ಅತ ಬರೆದಿಟ್ಟಿರುವ ವಿಲ್ ಅಥವಾ ಗಿಫ್ಟ್ ಡೀಡ್ ಪತ್ರ ಮುಖ್ಯವಾಗುತ್ತದೆ.
ಲಿವ್ ಇನ್ ಸಂಬಂಧದಲ್ಲಿ ಹುಟ್ಟಿದ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದೆಯೇ ? :
ಒಬ್ಬ ವ್ಯಕ್ತಿ ಲಿವ್ ಇನ್ ಸಂಬಂಧದಲ್ಲಿ ಜನಿಸಿದ ಮಕ್ಕಳು ಸಹ ತನ್ನ ತಂದೆಯ ಪಿತ್ರಾರ್ಜಿತ ಆಸ್ತಿಯ ಪಾಲು ಪಡೆಯಲು ಅರ್ಹರು. ಈ ಕುರಿತು ಸುಪ್ರೀಂಕೋರ್ಟ್ 2022 ರಲ್ಲಿ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿದೆ. ಇದು ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ಸಮಗ್ರ ಕಾನೂನು ವಿವರ ಹಾಗೂ ಇತ್ತೀಚೆಗೆ ಹೊರ ಬಂದಿರುವ ತೀರ್ಪಿನ ಪ್ರಕಾರ ಅನ್ವಯಿಸುವ ನಿಯಮಗಳು.