21.1 C
Bengaluru
Tuesday, July 9, 2024

ನಿಮ್ಮ ಮನೆಗೆ ಅಂದದ ಲುಕ್‌ ಬೇಕಾ?: ಈ 5 ಬದಲಾವಣೆ ಮಾಡಿ

ಮನೆಯ ಒಳಾಂಗಣಕ್ಕೆ ಅಂದದ ಲುಕ್‌ ನೀಡುವುದು ಸುಲಭದ ಕೆಲಸವಲ್ಲ. ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ಆಧುನಿಕ ಮೆರುಗು ನೀಡುವಂಥ ಲುಕ್‌ ನೀಡಬೇಕು ಎಂದರೆ ಸಾಕಷ್ಟು ಯೋಚಿಸಲೇಬೇಕು. ಮನೆಯ ರೂಪುರೇಷೆ ಬದಲಿಸುವಾಗ ಮುಖ್ಯವಾದ ಈ ಐದು ಅಂಶಗಳನ್ನು ಅಳವಡಿಸಿಕೊಂಡರೆ ನಿಮ್ಮ ಕೆಲಸ ಸುಲಭವಾಗುತ್ತದೆ ಎನ್ನುತ್ತಾರೆ ಲೇಖಕಿ ವಿಶಾಖಾ ರತ್ನಪರಾಖಿ.

ಮನೆಗೆ ಆಧುನಿಕ ಹಾಗೂ ಸಮಕಾಲೀನ ಲುಕ್‌ ನೀಡುವುದು ಪ್ರತಿಯೊಬ್ಬರ ಕನಸು. ಆದರೆ ಮನೆಯ ವಿನ್ಯಾಸ, ಗಾತ್ರದಿಂದಾಗಿ ನಮ್ಮ ಆಸೆಯಂತೆ ಎಲ್ಲವನ್ನೂ ಬದಲಾಯಿಸುವುದು ಕಷ್ಟ. ಮನೆಯನ್ನು ಅಲಂಕರಿಸಲಿರುವ ಸಾಕಷ್ಟು ಆಯ್ಕೆಗಳು ಹಾಗೂ ಕ್ರಿಯಾಶೀಲತೆಯನ್ನು ಬಳಸಬೇಕಾಗುತ್ತದೆ. ಮನೆಯವರ ಆಸೆ ಆಕಾಂಕ್ಷೆಗಳು, ಜೀವನಶೈಲಿಯನ್ನು ಪ್ರತಿಬಿಂಬಿಸುವಂತಿರಬೇಕು ಮನೆ.

ಶೇಕರ್‌ ಸ್ಟೈಲ್‌ ಕ್ಯಾಬಿನೆಟ್‌ಗಳು
ಅಡುಗೆ ಮನೆಯಲ್ಲಿನ ಸಾಮಾನುಗಳನ್ನು ಒಪ್ಪ ಓರಣವಾಗಿರಿಸಲು ಸಂಗ್ರಹಣಾ ಸ್ಥಳ ಬೇಕೇಬೇಕು. ಇದರಿಂದಾಗಿ ಇತ್ತೀಚೆಗೆ ʼಶೇಕರ್‌ ಸ್ಟೈಲ್‌ ಕ್ಯಾಬಿನೆಟ್‌ʼ ಪರಿಕಲ್ಪನೆ ಜನಪ್ರಿಯಗೊಳ್ಳುತ್ತಿದ್ದು ಹೆಚ್ಚಿನ ಸಂಗ್ರಹಣಾ ಜಾಗವನ್ನು ನೀಡುವುದರ ಜೊತೆಗೆ ಮನೆಗೆ ವಿಶಿಷ್ಟ ಲುಕ್‌ ನೀಡಲಿದೆ.

ಸೀಲಿಂಗ್‌ ಮೋಲ್ಡಿಂಗ್‌ ವಿನ್ಯಾಸ
ಭಾರತೀಯ ಮನೆಗಳಲ್ಲಿ ಸೀಲಿಂಗ್‌ ವಿನ್ಯಾಸದ ಕಲ್ಪನೆ ಹೆಚ್ಚು ಕಾಣಸಿಗುವುದಿಲ್ಲ. ಆದರೆ ಇತ್ತೀಚೆಗೆ ಇದರ ಸೌಂದರ್ಯವರ್ಧಕ ಗುಣಗಳನ್ನು ಮನಗಂಡ ಅನೇಕರು ಈ ವಿನ್ಯಾಸಕ್ಕೆ ಮೊರೆಹೋಗುತ್ತಿದ್ದಾರೆ. ಅನೇಕ ಬಗೆಯ ಮೋಲ್ಡಿಂಗ್‌ ಆಯ್ಕೆಗಳು ಈಗ ಬಂದಿವೆ. ಪ್ಲಾಸ್ಟರ್‌, ವುಡ್‌, ಪಿವಿಸಿ ಅಥವಾ ಇನ್ನಿತರೆ ವಸ್ತುಗಳನ್ನು ಬಳಸಿಕೊಂಡು ಮನೆಗೆ ಆಧುನಿಕ ಲುಕ್‌ ಸಿಗುವಂತೆ ವಿನ್ಯಾಸಗೊಳಿಸಲಾಗುತ್ತದೆ. ಕ್ರೌನ್‌ ಮೋಲ್ಡಿಂಗ್‌, ಸೀಲಿಂಗ್‌ ಮೆಡಾಲಿಯನ್‌, ಟ್ರೇ ಸೀಲಿಂಗ್‌, ಕಫರ್ಡ್‌ ಸೀಲಿಂಗ್‌ಗಳು ಹೆಚ್ಚು ಜನಮನ್ನಣೆ ಗಳಿಸಿದ ವಿನ್ಯಾಸಗಳು.

ಬಣ್ಣಬಣ್ಣದ ಫ್ರೇಂ
ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ವಿನ್ಯಾಸದಷ್ಟೇ ಬಣ್ಣಗಳೂ ಮಹತ್ವದ ಪಾತ್ರ ವಹಿಸುತ್ತವೆ. ಬಾಗಿಲು, ಕಿಟಕಿಗಳಿಗೆ ಆಕರ್ಷಕ ಬಣ್ಣಗಳನ್ನು ಬಳಸಿ ಮನೆಯ ಒಳಾಂಗಣಕ್ಕೆ ವಿಶೇಷ ರೂಪವನ್ನು ನೀಡಬಹುದು. ಆಕರ್ಷಕ ಬಣ್ಣ ಮನೆಯ ಅಂದವನ್ನು ದುಪ್ಪಟ್ಟುಗೊಳಿಸುವುದಷ್ಟೇ ಅಲ್ಲ, ಮನಸ್ಸಿನ ಭಾವನೆಗಳ ಮೇಲೆಯೂ ಪರಿಣಾಮ ಬೀರುತ್ತವೆ.

ವಿಕ್ಟೋರಿಯನ್‌ ಟಚ್‌
1837ರಿಂದ 1901ರ ಕಾಲವನ್ನು ವಿಕ್ಟೋರಿಯನ್‌ ಕಾಲ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ಜನಪ್ರಿಯಗೊಂಡಿದ್ದು ವಿಕ್ಟೋರಿಯನ್‌ ವಾಸ್ತುಶಿಲ್ಪ. ಇಟ್ಟಿಗೆಯಿಂದ ಅಲಂಕೃತಗೊಂಡ ಗೋಡೆಗಳು, ಮರದ ನೆಲಹಾಸುಗಳು, ಕವಚದಂಥ ಕಿಟಕಿ ವಿನ್ಯಾಸಗಳು ವಿಕ್ಟೋರಿಯನ್‌ ವಾಸ್ತುಶಿಲ್ಪದ ವೈಶಿಷ್ಟ್ಯ. ನೇವಿ ಬ್ಲ್ಯೂ, ಬರ್ಗೆಂಡಿ, ದಟ್ಟ ಕಂದು, ರೂಬಿ ಕೆಂಪು, ಗಾಢ ಹಸಿರು ಬಣ್ಣಗಳು ಆ ಕಾಲದಲ್ಲಿ ಹೆಚ್ಚು ಬಳಕೆಯಾಗುತ್ತಿದ್ದ ಬಣ್ಣ. ಟಿಫಾನಿ ದೀಪಗಳು ಹಾಗೂ ಗೊಂಚಲು ಗೊಂಚಲಾಗಿರುವ ದೀಪಗಳ ವಿನ್ಯಾಸ ಮನೆಗೆ ಅತ್ಯಾಕರ್ಷಕ ಲುಕ್‌ ನೀಡಲಿದೆ.

ಆಕರ್ಷಕ ಕಾರ್ನರ್‌
ಚಿಕ್ಕದಾದ ಕಾಫಿ ಟೇಬಲ್‌, ಆಕರ್ಷಕ ಗಿಡಗಳು, ಚೆಂದದ್ದೊಂದು ಕುರ್ಚಿ, ಬೆಳಕಿನ ವಿನ್ಯಾಸ ಇದ್ದುಬಿಟ್ಟರೆ ಮನೆಗೆ ಹೊಸತನ ಸಿಗುತ್ತದೆ. ಮನಸ್ಸಿಗೆ ಮುದ ನೀಡುವ ಇಂಥ ವಿನ್ಯಾಸಗಳು ಮನೆಮಂದಿಯ ಜೀವನೋತ್ಸಾಹವನ್ನು ಹೆಚ್ಚಿಸಬಲ್ಲವು.

Related News

spot_img

Revenue Alerts

spot_img

News

spot_img