ನಿಮ್ಮಲ್ಲಿರುವ ಬಂಡವಾಳವನ್ನು ಬೇರೆಬೇರೆ ಕಡೆಗೆ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯುವ ಬಯಕೆ ನಿಮ್ಮಲ್ಲಿದ್ದರೆ ಹೂಡಿಕೆಗೆ ಅತ್ಯುತ್ತಮ ಕ್ಷೇತ್ರ ಎಂದರೆ ರಿಯಲ್ ಎಸ್ಟೇಟ್. ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ ಹಣದುಬ್ಬರದಂಥ ಸಮಸ್ಯೆಯನ್ನು ಮೆಟ್ಟಿನಿಂತಂತಾಗುತ್ತದೆ. ತಜ್ಞರ ಪ್ರಕಾರ ಡೆಬ್ಟ್ ಫಂಡ್, ಮ್ಯೂಚುವಲ್ ಫಂಡ್, ಷೇರುಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ ದೀರ್ಘಕಾಲಿಕ ಹೂಡಿಕೆಗೆ ರಿಯಲ್ ಎಸ್ಟೇಟ್ ಕ್ಷೇತ್ರವೂ ಉತ್ತಮ ಆಯ್ಕೆ ಎಂಬುದಾಗಿದೆ.
ಪ್ರಸ್ತುತ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಅನುಕೂಲವಾಗುವಂಥ ಕೆಲವು ತಂತ್ರಗಳನ್ನು ತಜ್ಞರು ಇಲ್ಲಿ ಪಟ್ಟಿಮಾಡಿದ್ದಾರೆ.
ಅಂಗಡಿಗಳಲ್ಲಿ ಹೂಡಿಕೆ
“ಖಾಸಗಿ ಆಸ್ತಿಗಳಿಗೆ ಹೋಲಿಸಿದರೆ ಅಂಗಡಿಗಳ ನಿರ್ವಹಣಾ ವೆಚ್ಚ ಕಡಿಮೆಯೇ. ಶಾಪಿಂಗ್ ಕೇಂದ್ರಗಳಲ್ಲಿ ಹೂಡಿಕೆ ಮಾಡಿದರೆ ಅಪಾಯ ಕಡಿಮೆ. ಅಂಗಡಿಗಳು ಸುರಕ್ಷಿತವಾಗಿರುತ್ತವೆ ಮತ್ತು ಅನಿರೀಕ್ಷಿತ ಅಪಾಯಗಳು ಬಂದೊದಗುವ ಸಾಧ್ಯತೆಗಳು ತೀರಾ ಕಡಿಮೆ. ಬಾರತವು ಸಂಘಟಿತ ಚಿಲ್ಲರೆ ವ್ಯಾಪಾರ ಮತ್ತು ಶಾಪಿಂಗ್ ಕೇಂದ್ರದ ಸಂಸ್ಕೃತಿಯತ್ತ ದಾಪುಗಾಲು ಇಡುತ್ತಿದೆ. ಅಲ್ಲದೆ ಇದೇ ಮಾದರಿಯು ಭವಿಷ್ಯದಲ್ಲಿ ಬೆಳವಣಿಗೆ ಕಾಣಲಿದೆ. ಹೀಗಾಗಿ ಚಿಲ್ಲರೆ ಆಸ್ತಿ (ರಿಟೇಲ್ ಪ್ರಾಪರ್ಟಿ)ಯಲ್ಲಿ ಹೂಡಿಕೆ ಮಾಡುವುದು ಬುದ್ಧಿವಂತಿಕೆಯ ನಡೆ ಆಗಿದೆ,” ಎಂದು ದೇವಿಕಾ ಗ್ರೂಪ್ ರಿಯಲ್ ಎಸ್ಟೇಟ್ ಇನ್‌ವೆಸ್ಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಅಂಕಿತ್ ಅಗರ್‌ವಾಲ್ ಅಭಿಪ್ರಾಯಿಸುತ್ತಾರೆ.
“ಅಂದಹಾಗೆ ಪ್ರವೇಶ ವೆಚ್ಚವು ಸಾಮಾನ್ಯವಾಗಿ ಕಡಿಮೆ ಇರಲಿದ್ದು, ನಿಮ್ಮ ಹಣಕಾಸಿನ ಸ್ಥಿತಿಗತಿಯನ್ನು ಗಮನದಲ್ಲಿ ಇಟ್ಟುಕೊಂಡು ಹೂಡಿಕೆ ಮಾಡುವಾಗ ಅಂಗಡಿಯ ಗಾತ್ರ ಹಾಗೂ ಪ್ರದೇಶದ ಆಯ್ಕೆ ಮಾಡಿಕೊಳ್ಳಬಹುದು,” ಎಂದು ಅವರು ತಿಳಿಸಿದ್ದಾರೆ.
ಆಸ್ತಿ ಖರೀದಿ
“ನೀವು ಭೂಮಾಲಿಕರಾಗಿಲ್ಲದಿದ್ದರೂ ಆಸ್ತಿ ಹೊಂದುವ ಬಯಕೆ ಇದ್ದವರಾದರೆ ಪ್ರಾಪರ್ಟಿ ಖರೀದಿ ಉತ್ತಮ ನಿರ್ಧಾರವಾಗಬಲ್ಲುದು. ಕಡಿಮೆ ಬೆಲೆಯ ಆಸ್ತಿಯನ್ನು ಖರೀದಿಸಿ ಅವುಗಳನ್ನು ಸುವ್ಯವಸ್ಥಿತಗೊಳಿಸಿ ಬಾಡಿಗೆಗೆ ನೀಡಬಹುದು. ಇದರಿಂದಲೂ ಒಳ್ಳೆಯ ಲಾಭ ಗಳಿಸಬಹುದು,” ಎನ್ನುತ್ತಾರೆ ಆರ್‌ಪಿಎಸ್ ಗ್ರೂಪ್‌ನ ಪಾಲುದಾರರಾದ ಸುರೇನ್ ಗೋಯಲ್.
“ಕಡಿಮೆ ಬಂಡವಾಳವಿದ್ದು ಆಸ್ತಿಯನ್ನು ಅಭಿವೃದ್ಧಿಪಡಿಸಬಲ್ಲ, ಹಾಗೂ ಆ ಸ್ಥಳಕ್ಕೆ ಇನ್ನಷ್ಟು ಮೌಲ್ಯ ತಂದುಕೊಡಬಲ್ಲ ಸಾಮರ್ಥ್ಯ ಇದ್ದುವರು ಆಸ್ತಿ ಖರೀದಿಯಲ್ಲಿ ಹಣವನ್ನು ಹೂಡಿಕೆ ಮಾಡಿ ಮಾಲೀಕತ್ವ ಪಡೆಯುವುದು ಒಳ್ಳೆಯ ಆಯ್ಕೆಯೇ ಆಗಿದೆ. ತಾವು ಕಡಿಮೆ ದರಕ್ಕೆ ಆಸ್ತಿ ಕೊಂಡು ಅವುಗಳನ್ನು ಅಭಿವೃದ್ಧಿಪಡಿಸಿ ಉತ್ತಮ ಬೆಲೆಗೆ ಮಾರಾಟ ಮಾಡಿ ಲಾಭ ಪಡೆಯಬಹುದು,” ಎನ್ನುವುದು ಗೋಯಲ್ ಅಭಿಪ್ರಾಯ.
ವಾಣಿಜ್ಯ ಉದ್ದೇಶದ ರಿಯಲ್ ಎಸ್ಟೇಟ್
ಇದು ಅನುಕೂಲಕರ ಹೂಡಿಕೆಯ ಆಯ್ಕೆಯಾಗಿದೆ. ಬಾಡಿಗೆಯಿಂದಾಗಿ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ವಾಣಿಜ್ಯ ಉದ್ದೇಶಿತ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಅತ್ಯುತ್ತಮವಾಗಿ ಅಭಿವೃದ್ಧಿ ಕಾಣುತ್ತಿದ್ದು ಕೆಲಸ ಪ್ರಾರಂಭಿಸುವ ಸ್ಥಳವಾಗಿ ಹಾಗೂ ಆರ್ಥಿಕತೆಯನ್ನು ಎತ್ತಿಹಿಡಿಯುವ ವಿಷಯದಲ್ಲಿ ಪ್ರಗತಿಯತ್ತ ಮುನ್ನುಗ್ಗುತ್ತಿದೆ.
“ಹೆಚ್ಚಿನ ಕೆಲಸಗಾರರು ಕೆಲಸದ ಸ್ಥಳಗಳಿಗೆ ಮರಳುತ್ತಿದ್ದಾರೆ. ಐಟಿ ಸಂಸ್ಥೆಗಳು ಹಾಗೂ ಹೊಸ ಹೊಸ ಉದ್ಯಮ ಸಂಸ್ಥೆಗಳು ಕೆಲಸದ ಪ್ರದೇಶಗಳನ್ನು ಅನ್ವೇಷಿಸುತ್ತಿವೆ. ಅಲ್ಲದೆ ಇ ಕಾಮರ್ಸ್ ಕಂಪೆನಿಗಳು ತಮ್ಮ ದಾಸ್ತಾನುಗಳನ್ನು ಸಂಗ್ರಹಿಸಲು ಬೇಕಾದ ಉಗ್ರಾಣ ಸ್ಥಳಗಳನ್ನು ಅನ್ವೇಷಿಸುತ್ತಿವೆ. ಬಿಲ್ಡರ್‌ಗಳು ಈ ಹೊಸ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದು ವಾಣಿಜ್ಯ ಭೂಮಿ ಮಾರುಕಟ್ಟೆ ನಿರ್ಣಾಯಕವಾಗಿ ಅಭಿವೃದ್ಧಿಗೊಳ್ಳುತ್ತಿದೆ,” ಎನ್ನುತ್ತಾರೆ ಅವಂತಾ ಇಂಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ನಕುಲ್ ಮಾಥುರ್.
REITನಲ್ಲಿ ಹೂಡಿಕೆ
ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ (REIT) ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುತ್ತದೆ. REITಗಳು ಹೂಡಿಕೆದಾರರಿಗೆ ಆಸ್ತಿಯ ಷೇರುಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ವ್ಯಾಪಾರದ ಸ್ಥಳಗಳು, ಚಿಲ್ಲರೆ ವ್ಯಾಪಾರ ಸ್ಥಳಗಳು, ಅಪಾರ್ಟ್‌ಮೆಂಟ್‌ಗಳು, ವಸತಿ ಗೃಹಗಳು ಮುಂತಾದ ವಾಣಿಜ್ಯ ಉದ್ದೇಶಿತ ಭೂಮಿಯ ಮಾಲೀಕತ್ವ ಹೊಂದಿರುವ ಸಂಸ್ಥೆಗಳಾಗಿವೆ ಈ REIT.
ಗೋಯಲ್ ಗಂಗಾ ಡೆವಲಪ್‌ಮೆಂಟ್ಸ್‌ನ ನಿರ್ದೇಶಕರಾದ ಅನುರಾಗ್ ಗೋಯೆಲ್, “REITಗಳು ಆಗಾಗ್ಗೆ ಒಳ್ಳೆಯ ಲಾಭವನ್ನು ನೀಡುತ್ತವೆ. ನಿಯಮಿತ ವೇತನದ ಅಗತ್ಯವಿಲ್ಲದ ಅಥವಾ ಬಯಸದ ಆರ್ಥಿಕ ಬೆಂಬಲಿಗರು ತಮ್ಮ ಹೂಡಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಬಂದ ಲಾಭವನ್ನು ಮರುಹೂಡಿಕೆ ಮಾಡಿಕೊಳ್ಳಬಹುದು” ಎಂದು ಸಲಹೆ ನೀಡುತ್ತಾರೆ.