21.3 C
Bengaluru
Sunday, July 7, 2024

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಗಳಿಸಿದ ಆದಾಯ ಎಷ್ಟು ಸಾವಿರ ಕೋಟಿ?

ಬೆಂಗಳೂರು: ಎರಡು ವರ್ಷಗಳ ಕೊರೊನಾ ಅವಧಿಯಲ್ಲಿ ಹಿನ್ನಡೆ ಅನುಭವಿಸಿದ್ದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಈ ವರ್ಷ ಚೇತರಿಕೆ ಕಂಡಿದೆ. ಸರ್ಕಾರಕ್ಕೆ ಬರುವ ಆದಾಯದಲ್ಲಿ ಕಂದಾಯ ಇಲಾಖೆ ಸಹಿತ ವಿವಿಧ ಇಲಾಖೆಗಳಿಂದ ಆದಾಯ ಹೆಚ್ಚಳವಾಗಿದ್ದು, ರಾಜ್ಯದ ಮಟ್ಟಿಗೆ ಇದು ಖುಷಿಯ ವಿಚಾರವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿವಿಧ ಇಲಾಖೆಗಳಲ್ಲಿಆದಾಯದ ಮಟ್ಟ ಹೆಚ್ಚಳವಾಗಿದೆ. ಈ ಮಧ್ಯೆ ಕೋವಿಡ್ ಆತಂಕ, ಲಾಕ್‌ಡೌನ್ ಕಿರಿಕಿರಿ, ಮಳೆ ಪ್ರವಾಹದಂತಹ ಯಾವುದೇ ನೈಸರ್ಗಿಕ ವಿಕೋಪಗಳು ಸಂಭವಿಸಿದ ಹಿನ್ನೆಲೆಯಲ್ಲಿ ಇಲಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ.

ಕೋವಿಡ್ ಸಂದರ್ಭದಲ್ಲಿ ಜನರು ಆರ್ಥಿಕ ಮುಗ್ಗಟ್ಟು ಅನುಭವಿಸಿದ್ದರಿಂದ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿತ್ತು. ಜನರು ಹೊಸ ಮನೆ,ಜಾಗ, ಅಪಾರ್ಟ್‌ಮೆಂಟ್‌ ಖರೀದಿಗಳನ್ನು ಬಹುತೇಕ ನಿಲ್ಲಿಸಿದ್ದರು. ಇದರಿಂದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಆದಾಯಕ್ಕೆ ಹೊಡೆತ ಬಿದ್ದಿತ್ತು. ಆದರೆ, ಕಳೆದೊಂದು ವರ್ಷದಿಂದ ಬಹುತೇಕ ಕೋವಿಡ್ ಆತಂಕ ದೂರವಾಗಿದೆ. ಜನರು ಆಸ್ತಿಗಳ ನೋಂದಣಿ ಮತ್ತು ಖರೀದಿಗಾಗಿ ಸಬ್‌ರಿಜಿಸ್ಟ್ರಾರ್ ಕಚೇರಿಗಳತ್ತ ಮತ್ತೆ ಧಾವಿಸಿದ್ದಾರೆ.

ಸರ್ಕಾರಕ್ಕೆ ಆದಾಯ ನೀಡುವ ಇಲಾಖೆಗಲ್ಲಿ ವಾಣಿಜ್ಯ ಮತ್ತು ತೆರಿಗೆ ಇಲಾಖೆ, ಅಬಕಾರಿ ಮತ್ತು ಮುದ್ರಾಂಕ ಹಾಗೂ ನೋಂದಣಿ ಇಲಾಖೆ ಹಾಗೂ ಆರ್‌ಟಿಓ ಪ್ರಮುಖವಾದವು. ಇಲ್ಲಿ ಬರುವ ಆದಾಯವೇ ಸರ್ಕಾರಕ್ಕೆ ಪ್ರಮುಖ ಮೂಲಧನವಾಗಿರುತ್ತದೆ. ಆದ್ದರಿಂದ ಸರ್ಕಾರ ಈ ಇಲಾಖೆಗೆ ಪ್ರತಿ ವರ್ಷ ಹೆಚ್ಚುವರಿ ಗುರಿಗಳನ್ನು ನೀಡುತ್ತಲೇ ಇರುತ್ತದೆ. ಸರ್ಕಾರದ ಅಧಿಕ ಗುರಿಯ ಮಧ್ಯೆಯೂ ಇಲಾಖೆಗಳು ಉತ್ತಮ ಸಾಧನೆ ಮಾಡಿವೆ.

ಇಲಾಖೆಗೆ ಬಂದ ಆದಾಯ ಎಷ್ಟು?
ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು 2022-23ನೇ ಸಾಲಿನಲ್ಲಿ 8,229 ಕೋಟಿ ರೂ. ಆದಾಯ ಸಂಗ್ರಹ ಮಾಡಿದೆ. ಕಳೆದ ವರ್ಷ ಇದೇ ಇಲಾಖೆ 5,949 ಕೋಟಿ ರೂ., ಸಂಗ್ರಹ ಮಾಡಿತ್ತು. ಆದಾಯದಲ್ಲಿ ಸುಮಾರು ಎರಡೂವರೆ ಸಾವಿರ ಕೋಟಿ ರೂ. ಹೆಚ್ಚಳ ಮಾಡಿದೆ. ಇದು ಇಲಾಖೆಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯಲ್ಲಿ ಸಂತಸ ಉಂಟು ಮಾಡಿದೆ.

ಅದೇ ರೀತಿ ಎಲ್ಲಾ ಇಲಾಖೆಗಳ ಆದಾಯ ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸೆಪ್ಟಂಬರ್ ಅಂತ್ಯದ ವೇಳೆಗೆ ಶೇ 25ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಶೇ.48ರಷ್ಟಿದ್ದ ಆದಾಯ ಕ್ರೋಡೀಕರಣ ಈ ಬಾರಿ ಶೇ.60ಕ್ಕೆ ಹೆಚ್ಚಳ ವಾಗಿದೆ.

ಯಾವ ಇಲಾಖೆಗೆ ಎಷ್ಟು ಆದಾಯ?:
ಆದಾಯ ಸಂಗ್ರಹಣೆಯಲ್ಲಿ ಪ್ರಮುಖ ಇಲಾಖೆಯಾದ ವಾಣಿಜ್ಯ ಮತ್ತು ತೆರಿಗೆ ಇಲಾಖೆ 38,935 ಕೋಟಿ ರೂ. ಸಂಗ್ರಹ ಮಾಡಿದೆ. ಕಳೆದ ವರ್ಷ ಇದೇ ಇಲಾಖೆ 32,439 ಕೋಟಿ ರೂ. ಸಂಗ್ರಹ ಮಾಡಿತ್ತು. ಕಳೆದ ವರ್ಷ 12,636 ಕೋಟಿ ರೂ. ಆದಾಯ ಸಂಗ್ರಹಿಸಿದ್ದ ಅಬಕಾರಿ ಇಲಾಖೆ ಈ ವರ್ಷ 14,711 ಕೋಟಿ ರೂ. ಸಂಗ್ರಹಿಸುವ ಮೂಲಕ ಅಬಕಾರಿ ಆದಾಯ ಹೆಚ್ಚಿಸಿಕೊಂಡಿದೆ.

ಇನ್ನು ಮೋಟಾರು ವಾಹನಗಳನ್ನ ನೋಂದಣಿ ಮಾಡುವ ಆರ್‌ಟಿಓ ಕಳೆದ ವರ್ಷದ 2,835 ಕೋಟಿ ರೂ.ಗಳಿಂದ ಈ ಬಾರಿ 4,479 ಕೋಟಿ ರೂ. ಗೆ ಆದಾಯ ಹೆಚ್ಚಿಸಿಕೊಂಡು ಬೀಗುತ್ತಿದೆ.

Related News

spot_img

Revenue Alerts

spot_img

News

spot_img