ಬೆಂಗಳೂರು ಜೂನ್ 1:Data Science Courses in Bengaluru – ಡೇಟಾ ಸೈನ್ಸ್ ವಿಷಯಾಧಾರಿತ ಕೋರ್ಸ್ ನಡಿ ಸುಮಾರು 2,500 ವಿದ್ಯಾರ್ಥಿಗಳ ಹೆಸರಿನಲ್ಲಿ ಶೈಕ್ಷಣಿಕ ಸಾಲಗಳನ್ನು ಪಡೆದು 18 ಕೋಟಿ ರೂ. ಹಣವನ್ನು ದೋಚಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರಿನ ಜಯನಗರದಲ್ಲಿ ಡೇಟಾ ಸೈನ್ಸ್ ಉಚಿತ ಕೋರ್ಸ್ ಕೇಂದ್ರ ತೆರೆದಿದ್ದ. ತನ್ನಲ್ಲಿ ದಾಖಲಾಗಿದ್ದ ವಿದ್ಯಾರ್ಥಿಗಳು ನೀಡಿದ್ದ ದಾಖಲೆಗಳ ಮೂಲಕ ಶೈಕ್ಷಣಿಕ ಸಾಲ ಪಡೆದು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ ಎಂಬ ಆರೋಪವಿದೆ.
ಜಯನಗರದಲ್ಲಿ ಡೇಟಾ ಸೈನ್ಸ್ ಕಲಿಕಾ ಕೇಂದ್ರ ಸ್ಥಾಪಿಸಿದ್ದ ಆಂಧ್ರಪ್ರದೇಶ ಮೂಲದ ಶ್ರೀನಿವಾಸ್.
ಕೇಂದ್ರಕ್ಕೆ ದಾಖಲಾದ ಸುಮಾರು 2,5000 ವಿದ್ಯಾರ್ಥಿಗಳ ಹೆಸರಿನಲ್ಲಿ ಶೈಕ್ಷಣಿಕ ಸಾಲ.
ಬ್ಯಾಂಕುಗಳಿಂದ ತನ್ನ ಕೇಂದ್ರದ ಖಾತೆಗೆ ಬಂದ ಸಾಲವನ್ನು ತನ್ನ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ.
ಈವರೆಗೆ 18 ಕೋಟಿ ರೂ. ದೋಚಿದ ಆರೋಪ; ವಿದ್ಯಾರ್ಥಿಗಳ ದೂರಿನ ಮೇರೆಗೆ ಆರೋಪಿಯ ಬಂಧನ.
ವಿದ್ಯಾರ್ಥಿಗಳ ಉಚಿತ ಶಿಕ್ಷಣದ ಹೆಸರಿನಲ್ಲಿ ಶೈಕ್ಷಣಿಕ ಸಾಲ ಪಡೆದು ವಿವಿಧ ಬ್ಯಾಂಕುಗಳಿಗೆ ಸುಮಾರು 18 ಕೋಟಿ ರೂ.ಗಳನ್ನು ವಂಚಿಸಿದ, ಆಂಧ್ರ ಮೂಲದ ಶ್ರೀನಿವಾಸ ಎಂಬ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತ ಜಯನಗರದಲ್ಲಿ ಆನ್ ಕೋರ್ಸ್ ಗಳ ಕೇಂದ್ರವೊಂದನ್ನು ತೆರೆದು ಅಲ್ಲಿಗೆ ದಾಖಲಾದ ವಿದ್ಯಾರ್ಥಿಗಳ ಹೆಸರಿನಲ್ಲಿ ಮೋಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಈತ ಜಯನಗರದಲ್ಲಿ ಡೇಟಾ ಸೈನ್ಸ್ ವಿಷಯದಡಿ ಆನ್ ಲೈನ್ ಕೋರ್ಸ್ ಆರಂಭಿಸಿದ್ದ. ಮತ್ತೊಂದೆಡೆ, ಆತ ಗ್ರೀಕ್ ಲರ್ನಿಂಗ್ ಎಜುಕೇಷನ್ ಇನ್ಸ್ಟಿಟ್ಯೂಟ್ ಎಂಬ ಹೆಸರಿನಲ್ಲಿ ಜಯನಗರದಲ್ಲಿ ಕಚೇರಿಯನ್ನೂ ತೆರೆದಿದ್ದ. ಈ ಕೇಂದ್ರದಲ್ಲಿ 2,500 ವಿದ್ಯಾರ್ಥಿಗಳು ಸೇರಿದ್ದರು. ಈ ಕೇಂದ್ರದ ಮೂಲಕ, ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಈಗ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿರುವ ಡೇಟಾ ಸೈನ್ಸ್ ಶಿಕ್ಷಣದ ಮಹತ್ವವನ್ನು ವಿವರಿಸಿ ಹೇಳಲಾಗುತ್ತಿತ್ತು.
ಡೇಟಾ ಸೈನ್ಸ್ ಶಿಕ್ಷಣ ಪಡೆಯುವ ಮೂಲಕ ಉತ್ತಮ ಉದ್ಯೋಗಾವಕಾಶಗಳು, ಹೆಚ್ಚಿನ ಸಂಬಳದ ಆಮಿಷ ಒಡ್ಡಲಾಗುತ್ತಿತ್ತು. ಇದು ನಿಜವೂ ಆಗಿದ್ದರಿಂದಾಗಿ, ಅನೇಕ ವಿದ್ಯಾರ್ಥಿಗಳು ಈತನ ಶಿಕ್ಷಣ ಸಂಸ್ಥೆಗೆ ಬಂದು ಸೇರಿಕೊಂಡಿದ್ದು. ತನ್ನಲ್ಲಿ ದಾಖಲಾದ ಸುಮಾರು 2,500 ವಿದ್ಯಾರ್ಥಿಗಳಿಂದ ಆತ ಸೂಕ್ತ ದಾಖಲೆಗಳನ್ನು ಪಡೆದು ಆತ ಅವರನ್ನು ಕೋರ್ಸ್ ಗೆ ಸೇರಿಸಿಕೊಂಡಿದ್ದ ಎಂದು ಹೇಳಲಾಗಿದೆ.
ಡೇಟಾ ಸೈನ್ಸ್ ಕೋರ್ಸ್ ಗಾಗಿ ಸೇರಿದ ವಿದ್ಯಾರ್ಥಿಗಳ ದಾಖಲೆಗಳನ್ನು ಬಳಸಿ ಆತ ವಿವಿಧ ಬ್ಯಾಂಕುಗಳಲ್ಲಿ ಶೈಕ್ಷಣಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದ. ಅವರಿಗೆ ಮಂಜೂರಾದ ಸಾಲದ ಮೊತ್ತವನ್ನು ತನ್ನ ಕಚೇರಿಯ ಬ್ಯಾಂಕ್ ಖಾತೆಗೆ ಬರುವಂತೆ ಮಾಡಿಕೊಳ್ಳುತ್ತಿದ್ದ. ಆನಂತರ, ತನ್ನ ಸಂಸ್ಥೆಯ ಬ್ಯಾಂಕ್ ಖಾತೆಯಿಂದ ತನ್ನ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿಕೊಳ್ಳುತ್ತಿದ್ದ ಎಂಬ ಆರೋಪಗಳು ಆತನ ಮೇಲಿವೆ.
ತಮ್ಮ ಹೆಸರಿನಲ್ಲಿ ಈತ ಎಜುಕೇಷನ್ ಲೋನ್ ಪಡೆಯುತ್ತಿರುವ ಬಗ್ಗೆ ಕೆಲವು ವಿದ್ಯಾರ್ಥಿಗಳಷ್ಟೇ ಮಾಹಿತಿ ಇತ್ತು. ಆದರೆ, ತಮ್ಮ ಹೆಸರಿನಲ್ಲಿ ಆತ ಸಾಲ ಪಡೆದ ನಂತರ ಬ್ಯಾಂಕುಗಳಿಗೆ ಸಾಲ ಮರುಪಾವತಿ ಕಂತುಗಳನ್ನು ಕಟ್ಟದೇ ಇದ್ದಾಗ ಅಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು. ಇದರಿಂದ ಸಿಟ್ಟಿಗೆದ್ದ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವಿದ್ಯಾರ್ಥಿಗಳ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು, ಈತನ ಜಾಲವನ್ನು, ಕರ್ಮಕಾಂಡವನ್ನು ತನಿಖೆ ನಡೆಸಿ ಮಹತ್ವದ ವಿಚಾರಗಳನ್ನು ಬಯಲಿಗೆಳೆದಿದ್ದಾರೆ. ವಿವಿಧ ಬ್ಯಾಂಕುಗಳಿಂದ ಈವರೆಗೆ ಆತ 18 ಕೋಟಿ ರೂ.ಗಳನ್ನು ಲಪಟಾಯಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶ್ರೀನಿವಾಸ್ ನನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿಸಲಾಗಿದ್ದು, ಇನ್ನೂ ಎಷ್ಟು ವಿದ್ಯಾರ್ಥಿಗಳಿಗೆ ಹಾಗೂ ಇನ್ನೂ ಎಷ್ಟು ಕಡೆ ಈತ ಇಂಥ ಕೃತ್ಯಗಳನ್ನು ಮಾಡಿದ್ದಾನೆ ಎಂಬುದು ನಂತರ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.