ಬೆಂಗಳೂರು, ಫೆ. 08 : ಪ್ರತಿಷ್ಠಿತ AMRTPEX-2023 ಅಂಗವಾಗಿ ಇದೇ ಫೆಬ್ರವರಿ 9 ಮತ್ತು 10 ರಂದು ಅಂಚೆ ಕಚೇರಿಯಲ್ಲಿ ಸಮೃದ್ಧಿ ಯೋಜನೆ ಖಾತೆ ಮೇಳ ನಡೆಯಲಿದೆ. ಈ ಬಗ್ಗೆ ಅಂಚೆ ಇಲಾಖೆ ಮಾಹಿತಿ ನೀಡಿದ್ದು, ಅಮೃತ್ ಮಹೋತ್ಸವ್-2023 ಹಿನ್ನೆಲೆ ಪ್ರತೀ ಜಿಲ್ಲೆಯಲ್ಲೂ ಅಂಚೆ ಕಚೇರಿಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗಳನ್ನು ತೆರೆಯಬಹುದಾಗಿದೆ. ಈಗಾಗಲೇ ಪ್ರತೀ ಜಿಲ್ಲೆಯಲ್ಲೂ ಈ ಖಾತೆಯನ್ನು ಗ್ರಾಹಕರು ತೆರೆದಿದ್‌ದಾರೆ. ಇನ್ನು 7.5 ಲಕ್ಷ ಖಾತೆಗಳನ್ನು ತೆರೆಯುವ ಗುರಿಯನ್ನು ಅಂಚೆ ಇಲಾಖೆ ಹೊಂದಿದೆ. ಹಾಗಾಗಿ ಈಗ ಅಮೃತ ಮಹೋತ್ಸವ ಹಿನ್ನೆಲೆ ಸುಕನ್ಯಾ ಸಮೃದ್ಧಿ ಯೋಜನೆಯ ಮೇಳವನ್ನು ಆಯೋಜಿಸಿದೆ.
ಸುಕನ್ಯಾ ಸಮೃದ್ಧಿ ಯೋಜನೆಯಡಿ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಖಾತೆಯನ್ನು ಅವರ ಪೋಷಕರ ಹೆಸರಿನಲ್ಲಿ ಮಾತ್ರ ತೆರೆಯಲಾಗುತ್ತದೆ. ಈ ಯೋಜನೆಯಡಿ, ನೀವು ವಾರ್ಷಿಕವಾಗಿ ರೂ 250 ರಿಂದ ರೂ 1.50 ಲಕ್ಷದ ವರೆಗೆ ಹೂಡಿಕೆ ಮಾಡಬಹುದು. ಒಂದು ಕುಟುಂಬದಿಂದ ಕೇವಲ ಇಬ್ಬರು ಹೆಣ್ಣು ಮಕ್ಕಳ ಖಾತೆಗೆ 80C ಅಡಿಯಲ್ಲಿ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಈಗ ಅದು ಬದಲಾಗಿದ್ದು, ನಿಯಮದ ಪ್ರಕಾರ ಒಂದು ಹೆಣ್ಣು ಮಗುವಿನ ನಂತರ ಇಬ್ಬರು ಅವಳಿ ಹೆಣ್ಣು ಮಕ್ಕಳು ಜನಿಸಿದರೆ ಅವರ ಖಾತೆಗೂ ತೆರಿಗೆ ವಿನಾಯಿತಿ ಸಿಗಲಿದೆ.
ಈ ಯೋಜನೆಯ ಪ್ರಯೋಜನವನ್ನು ಪಡೆಯಲು, ನೀವು ಯಾವುದೇ ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ಖಾತೆಯನ್ನು ತೆರೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆಯು 21 ವರ್ಷಗಳಲ್ಲಿ ಮೆಚ್ಯುರ್ ಆಗುತ್ತದೆ. ಆದಾಗ್ಯೂ, ಹುಡುಗಿಯ ವಯಸ್ಸು 18 ವರ್ಷಗಳ ನಂತರ, ಅಧ್ಯಯನಕ್ಕಾಗಿ ಈ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಪೂರ್ಣ ಮೊತ್ತವು 21 ವರ್ಷಗಳ ನಂತರ ಮಾತ್ರ ಲಭ್ಯವಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಯನ್ನು ತೆರೆಯುವ ಸಮಯದಲ್ಲಿ, ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ನಲ್ಲಿ ಹುಡುಗಿಯ ಜನನ ಪ್ರಮಾಣಪತ್ರವನ್ನು ನೀಡುವುದು ಅವಶ್ಯಕ. ಅಲ್ಲದೆ, ಹುಡುಗಿ ಮತ್ತು ಆಕೆಯ ಪೋಷಕರ ಗುರುತಿನ ಚೀಟಿ, ಫೋಟೋ ಮತ್ತು ವಿಳಾಸ ಪುರಾವೆ ಅಗತ್ಯವಿದೆ.
ಪ್ರಸ್ತುತ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆಗೆ 7.6% ದರದಲ್ಲಿ ಬಡ್ಡಿ ಸಿಗುತ್ತಿದೆ. ಈ ಯೋಜನೆಯಡಿ, ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ, ನೀವು ಲಕ್ಷ ರೂಪಾಯಿಗಳನ್ನು ಸೇರಿಸಬಹುದು. ಬ್ಯಾಂಕ್ ಅಥವಾ ಅಂಚೆ ಕಚೇರಿಯ ಎಲ್ಲಾ ಉಳಿತಾಯ ಯೋಜನೆಗಳಿಗಿಂತ ಸುಕನ್ಯಾ ಸಮೃದ್ಧಿ ಯೋಜನೆಗೆ ಹೆಚ್ಚಿನ ಬಡ್ಡಿ ಸಿಗುತ್ತಿದೆ. ಈ ಯೋಜನೆಯಡಿಯಲ್ಲಿ ನೀವು ಪ್ರತಿ ತಿಂಗಳು 1000 ರೂಪಾಯಿಗಳವರೆಗೆ ಹೂಡಿಕೆ ಮಾಡಿದರೆ, ನಂತರ 7.6% ಬಡ್ಡಿದರದ ಪ್ರಕಾರ, ರೂ. 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆಯುತ್ತೀರಿ. ಇನ್ನು ತಿಂಗಳಿಗೆ 5000ರೂಪಾಯಿ ಠೇವಣಿ ಮಾಡಿದಲ್ಲಿ, ಮೆಚ್ಯುರಿಟಿ ವೇಳೆಗೆ 25 ಲಕ್ಷ ರೂಪಾಯಿ ಹಣ ಕೈ ಸೇರುತ್ತದೆ.