ಕೊಪ್ಪಳ;ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ಫಾಜಲ್ ಎಂಬುವರು ಕಾಮಗಾರಿಗಳನ್ನು ನಿರ್ವಹಿಸಿದ್ದ ಗುತ್ತಿಗೆದಾರನಿಗೆ ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆಯಿಟ್ಟು ಅದನ್ನು ಪಡೆಯುವ ವೇಳೆ ಲೋಕಾಯುಕ್ತ ಬೆಲೆಗೆ ಸಿಕ್ಕಿ ಬಿದ್ದಿದ್ದಾರೆ
ಜಿಲ್ಲೆಯ ಕುಕನೂರು ತಾಲ್ಲೂಕಿನ ಮಂಗಳೂರಿನ ಗುತ್ತಿಗೆದಾರ ಮುತ್ತಪ್ಪ ಬಾರಿನಾರ ₹5 ಲಕ್ಷ ವೆಚ್ಚದಲ್ಲಿ ತಮ್ಮೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಂಪೌಂಡ್ ನಿರ್ಮಾಣ ಮತ್ತು ₹4.5 ಲಕ್ಷ ವೆಚ್ಚದ ಮಂಗಳೂರು-ಬೇವೂರು ರಸ್ತೆ ಸುಧಾರಣೆಗೆ ತುಂಡುಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸಿದ್ದರು. ಇದರ ಬಿಲ್ ದೃಡೀಕರಣ ಮಾಡುವಂತೆ ಕೇಳಿದಾಗ ಫಾಜಲ್ ₹25 ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದರು. ಮಾತುಕತೆಯ ಬಳಿಕ ₹15 ಸಾವಿರ ಕೊಡುವುದಾಗಿ ಹೇಳಿ ಫೆ. 24ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.ಭ್ರಷ್ಟಾಚಾರ ನಿಗ್ರಹ ದಳ (ACB) ರದ್ದಾಗಿ ಲೋಕಾಯುಕ್ತ ಮತ್ತೆ ಅಸ್ತಿತ್ವಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ನಡೆದ ಎರಡನೇ ದಾಳಿ ಇದಾಗಿದೆ.ಸೋಮವಾರ ಸಂಜೆ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ಫಾಜಲ್ ಕರ್ತವ್ಯದಲ್ಲಿದ್ದಾಗ ಮುತ್ತಪ್ಪ ಹಣ ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೊಪ್ಪಳ ಲೋಕಾಯುಕ್ತ ಉಪ ಅಧೀಕ್ಷಕ ಸಲೀಂಪಾಷಾ ನೇತೃತ್ಚದಲ್ಲಿ ಚಂದ್ರಪ್ಪ ಈಟಿ, ಸಂತೋಷ ರಾಠೋಡ,ರಾಮಣ್ಣ, ಬಸವರಾಜ,ಗಿರೀಶ್ ರೋಡ್ಕರ್,ತಾರಾಮತಿ, ಶೈಲಜಾ, ಆನಂದಕುಮಾರ, ಗುರುದೇಶಪಾಂಡೆ ಮತ್ತು ರಾಜು ಅವರ ತಂಡ ದಾಳಿ ನಡೆಸಿದೆ.