ಕೊಡಗು;ಮಡಿಕೇರಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಡಿಕೇರಿ ಕಚೇರಿ ಸಿಬ್ಬಂದಿಗಳಾದ ಕಚೇರಿ ನಿರ್ದೇಶಕಿ ಚೆಲುವಾಂಬ ಮತ್ತು ವಾಹನ ಚಾಲಕ ತಿರುಮಲೇಶ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದದೂರುದಾರರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯೋಜನೆಯೊಂದರಲ್ಲಿ 3 ಲಕ್ಷ ರೂ.ಗಳ ಸಬ್ಸಿಡಿ ಆಧಾರಿತ ಸಾಲ ಯೋಜನೆಗೆ ಅಂಬೇಡ್ಕರ್ ಅಭಿವೃದ್ದಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಮೊದಲ ಹಂತದ ಹಣ ಪಾವತಿಯಾಗಿದ್ದು, 2ನೇ ಹಂತದ ಹಣ ಪಾವತಿಗೆ ಈ 3 ಮಂದಿ 10 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಯೋಜನೆಯ ಫಲಾನುಭವಿ ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಈ ಪ್ರಕರಣದ ಕುರಿತು ಲೋಕಾಯುಕ್ತದ ಹಿರಿಯ ಅಧಿಕಾರಿಗಳಿಗೆ ಸಮಗ್ರ ವಿವರ ನೀಡಲಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಮೈಸೂರು ಲೋಕಾಯುಕ್ತ ಎಸ್.ಪಿ.ಸುರೇಶ್ ಬಾಬು ತಿಳಿಸಿದ್ದಾರೆ.
ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಐ.ಜಿ.ಪಿ. ಸುಬ್ರಮಣ್ಯೇಶ್ವರ ರಾವ್ ನಿರ್ದೇಶನದಂತೆ ಮೈಸೂರು ಲೋಕಾಯುಕ್ತ ಎಸ್.ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಕೊಡಗು ಲೋಕಾಯುಕ್ತ ಡಿವೈಎಸ್‍ಪಿ ಪವನ್ ಕುಮಾರ್, ಮಡಿಕೇರಿ ಲೋಕಾಯುಕ್ತ ಇನ್ಸ್‍ಪೆಕ್ಟರ್ ಲೋಕೇಶ್, ಮೈಸೂರು ಲೋಕಾಯುಕ್ತ ಇನ್ಸ್ಪೆಕ್ಟರ್ ರೂಪಾಶ್ರೀ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.