ಬೆಂಗಳೂರು, ಫೆ. 12: ಸಂಚಾರ ನಿಯಮ ಉಲ್ಲಂಘನೆ ವಿಚಾರದಲ್ಲಿ ಯಾವಾಗಲೂ ಸಾರ್ವಜನಿಕರಿಗೂ ಹಾಗೂ ಸಂಚಾರಿ ಪೊಲೀಸರಿಗೂ ಜಟಾಪಟಿ ನಡೆಯುತ್ತಿತ್ತು! ದುಬಾರಿ ದಂಡ ಕಟ್ಟಲಾಗದೇ ಜನರದ್ದು ಅಸಾಯಕ ಪರಿಸ್ಥಿತಿ. ಮೇಲಾಧಿಕಾರಿಗಳ ಟಾರ್ಗೆಟ್ ಮುಗಿಸಲಾಗದೇ ಸಂಚಾರ ಪೊಲೀಸರ ಸವಾರರೊಂದಿಗೆ ಜಗಳ, ಪರದಾಟ. ಹೈಕೋರ್ಟ್ ನ್ಯಾಯಮೂರ್ತಿಗಳ ಒಂದು ಜನ ಸ್ನೇಹಿ ಆದೇಶ ಸಂಚಾರ ಪೊಲೀಸರ ವರ್ಷಗಳ ಬಾಕಿ ಕೆಲಸವನ್ನು ಒಂದು ವಾರದಲ್ಲಿ ಪೂರ್ಣಗೊಳಿಸಿದೆ. ಯಾವತ್ತು ಪೊಲೀಸರಿಗೆ ದಂಡ ಕಟ್ಟದ ಜನರು ಸ್ವಯಂ ಪ್ರೇರಿತವಾಗಿ ಒಂದು ವಾರದಲ್ಲಿ ಪಾವತಿ ಮಾಡಿದ್ದಾರೆ. ಸರ್ಕಾರದ ಖಜಾನೆಗೆ 102 ಕೋಟಿ ರೂ. ದಂಡ ಹರಿದು ಬಂದಿದೆ.
ಜನರಿಗೆ ಅರ್ಧ ದಂಡ ವಿನಾಯ್ತಿ ಸಿಕ್ಕಿದ ಸಂತಸ. ಸಂಚಾರಿ ಪೊಲೀಸರಿಗೆ ಜನರ ಜತೆ ಜಟಾಪಟಿ ಮಾಡುವ ಕೆಲಸಕ್ಕೆ ಮುಕ್ತಿ ಸಿಕ್ಕಿದ ಖುಷಿ. ಸರ್ಕಾರಕ್ಕೆ ವರ್ಷಗಳಿಂದ ಬಾಕಿ ಇದ್ದ ದಂಡದ ಮೊತ್ತ ವಸೂಲಿಯಾದ ಪರಮ ಸಂತೋಷ! ಮೂರು ವರ್ಗಕ್ಕೂ ನ್ಯಾಯ ಕೊಟ್ಟಿಸಿದ್ದು ನ್ಯಾಯಮೂರ್ತಿಗಳ ಹೃದಯ ಶ್ರೀಮಂತಿಕೆ ಆದೇಶ! ಆ ಅದೇಶ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ಯಾರು ? ಅವರ ಈ ಜನ ಪ್ರೀತಿ ಆದೇಶ ಏನು ? ಇದರಿಂದ ಸಂಚಾರ ದಂಡ ಪಾವತಿ ಯಾದ ವಿವರ ರೆವಿನ್ಯೂಫ್ಯಾಕ್ಟ್ಸ್ ಇಲ್ಲಿ ವಿವರಿಸಿದೆ.
ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಂಘನೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ ಹೈಕೋರ್ಟ್ ನ್ಯಾಯಮೂತಿ್ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ. ಬಿ. ವೀರಪ್ಪ ಅವರು ಮಹತ್ವದ ಆದೇಶ ನೀಡಿದ್ದರು. ರಾಜ್ಯ ಸಾರಿಗೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರ ಜತೆ ಚರ್ಚಿಸಿ ಸಂಚಾರಿ ನಿಯಮ ಉಲ್ಲಂಘಟನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ವಿನಾಯಿತಿ ನೀಡಲು ಸೂಚಿಸಿದ್ದರು. ನ್ಯಾಯಮೂರ್ತಿಗಳ ಈ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಿ ಕಾನೂನು ಇಲಾಖೆಯ ಅನುಮತಿ ಪಡೆದು ಸಾರ್ವಜನಿಕರಿಗೆ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತದಲ್ಲಿ ಶೇ. 50 ರಷ್ಟು ವಿನಾಯಿತಿ ನೀಡಿ ಫೆ. 11 ರ ವರೆಗೂ ಕಾಲಾವಕಾಶ ನೀಡಿತ್ತು.
102 ಕೋಟಿ ರೂ. ದಂಡ ವಸೂಲಿ: ಫೆ. 3 ರಿಂದ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದಲ್ಲಿ ಶೇ. 50 ರಷ್ಟು ರಿಯಾಯಿತಿ ಸಿಕ್ಕಿದ್ದೇ ತಡ ಸಾರ್ವಜನಿಕರೇ ಖಷಿಯಾಗಿ ತಮ್ಮ ವಾಹನಗಳ ಉಲ್ಲಂಘನೆ ದಂಡ ಮೊತ್ತವನ್ನು ಪಾವತಿ ಮಾಡಿದ್ದಾರೆ. ಫೆ. 03 ರಂದು ಏಳು ಕೋಟಿ ರೂಪಾಯಿ ದಂಡ ವಸೂಲಿಯಾಗಿತ್ತು. ಸರಾಸರಿ ಹೀಗೆ ವಸೂಲಿಯಾದ ದಂಡದ ಮೊತ್ತ ಫೆ. 11 ಕೊನೆ ದಿನಕ್ಕೆ 102 ಕೋಟಿ ರೂ. ವಸೂಲಿಯಾಗಿದೆ. ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 35 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತ ಪೂರ್ಣ ವಸೂಲಿಯಾಗಿದೆ.
ಬಹುತೇಕ ವಾಹನ ಸವಾರರು ಸ್ವಯಂ ಪ್ರೇರಿತವಾಗಿ ಸಂಚಾರ ಪೊಲೀಸರನ್ನು ಭೇಟಿ ಮಾಡಿ ದಂಡ ಪಾವತಿ ಮಾಡಿದ್ದಾರೆ. ದಂಡ ಪಾವತಿಸುವಂತೆ ವಾಹನ ಸವಾರರಿಗೆ ನೋಟಿಸ್ ಜಾರಿಗೊಳಿಸುವಲ್ಲಿ ಮುಳಗಿದ್ದ ಸಂಚಾರ ಪೊಲೀಸರ ದಂಡ ವಸೂಲಿ ಕಾರ್ಯ ಒತ್ತಡದಲ್ಲಿ ಮುಳಗಿದ್ದರು. ಬಹುತೇಕ ಬಾಡಿಗೆ ಮನೆಯಲ್ಲಿದ್ದವರಿಗೆ ಸಂಚಾರ ಪೊಲೀಸರ ನೋಟಿಸ್ ಕೂಡ ತಲುಪುತ್ತಿರಲಿಲ್ಲ. ಇನ್ನು ದುಬಾರಿ ದಂಡ ಕಟ್ಟಲಾಗದೇ ಸಾವಿರ ಘಟ್ಟಲೇ ದಂಡ ಉಳಿಸಿಕೊಂಡಿದ್ದವರು ಈ ಅವಕಾಶ ಬಳಿಸಿಕೊಂಡು ಸ್ವಯಂ ಪ್ರೇರಿತವಾಗಿ ದಂಡ ಪಾವತಿಸಿದ್ದಾರೆ. ಮಾತ್ರವಲ್ಲ ಇಂತಹ ಅವಕಾಶ ಕೊಟ್ಟ ನ್ಯಾಯಮೂರ್ತಿ ಗಳ ಹೃದಯ ಶ್ರೀಮಂತಿಕೆ ಆದೇಶವನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಕೋಲಾರದ ಈ ನ್ಯಾಯಮೂರ್ತಿ ಓದಿದ್ದು ಸರ್ಕಾರಿ ಶಾಲೆಯಲ್ಲಿ! :
ಸಂಚಾರ ದಂಡ ಪ್ರಕರಣಗಳಿಗೆ ಮುಕ್ತಿ ನೀಡಿದ ನ್ಯಾ. ಬಿ. ವೀರಪ್ಪ ಅವರು ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಪುಟ್ಟ ಹಳ್ಳಿಯಲ್ಲಿ ಜನಿಸಿದವರು. 1961 ಜೂನ್ 1 ರಂದು ಜನಿಸಿದ ಇವರು ಸರ್ಕಾರಿ ಶಾಲೆಯಲ್ಲಿ ಓದಿದ್ದು. ಅಂದಹಾಗೆ ಕಾಲೇಜು ಶಿಕ್ಷಣ ಕೂಡ ಶ್ರೀನಿವಾಸಪುರದ ಸರ್ಕಾರಿ ಕಾಲೇಜಿನಲ್ಲಿ ಪಡೆದಿದ್ದು. ಕೋಲಾರದಲ್ಲಿ ಪದವಿ ಮುಗಿಸಿ ಬೆಂಗಳೂರಿನ ರೇಣುಕಾ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. 1988 ರಿಂದಲೂ ಹೈಕೋರ್ಟ್ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದರು. 1995 ರಿಂದ 2000 ರ ವರೆಗೂ ಗೌರ್ನಮೆಂಟ್ ಪ್ಲೀಡರ್ ಆಗಿ ಕೆಲಸ ಮಾಡಿದ್ದು, 2005 ರಿಂದ 2015 ರ ವರೆಗೆ ಸರ್ಕಾರಿ ಅಭಿಯೋಜಕರಾಗಿ ಕೆಲಸ ಮಾಡಿದ್ದಾರೆ. 2015 ರಿಂದ ಹೈಕೋರ್ಟ್ ಜಡ್ಜ್ ಆಗಿ ನೇಮಕವಾಗಿದ್ದರು. ಹೈಕೋರ್ಟ್ ನಲ್ಲಿ ನ್ಯಾಯ ಸಮ್ಮತ ತೀರ್ಪುಗಳ ಮೂಲಕ ಪದೇ ಪದೇ ಸುದ್ದಿಯಾಗುತ್ತಿದ್ದ ನ್ಯಾ .ವೀರಪ್ಪ ಅವರ ಜನ ಸ್ನೇಹಿ ಆದೇಶದಿಂದ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರು ದಂಡ ಮುಕ್ತರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಅವಕಾಶ ಕೊಟ್ಟಿದ ನ್ಯಾಯಾಧೀಶರನ್ನು ಸ್ಮರಿಸುತ್ತಿದ್ದಾರೆ.