27.6 C
Bengaluru
Friday, October 11, 2024

ಸದ್ಯಕ್ಕೆ ಮೂರು ಗ್ಯಾರಂಟಿ ಮಾತ್ರ ಜಾರಿ! ಸ್ವಾತಂತ್ರ್ಯ ದಿನಾಚರಣೆಗೆ ಯುವ ನಿಧಿ,ಗೌರಿ ಹಬ್ಬಕ್ಕೆ ಗೃಹಲಕ್ಷ್ಮೀ ಅನುಷ್ಠಾನ ಸಾಧ್ಯತೆ

ಬೆಂಗಳೂರು ಜೂನ್ 1: Government Ready To Implement Only Three Guarantees : ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ಸದ್ಯ ಮೂರನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಇನ್ನುಳಿದಂತೆ ಎರಡನ್ನು ಮುಂದಿನ ದಿನಗಳಲ್ಲಿ ಅನುಷ್ಠಾನ ಗೊಳಿಸಬಹುದು. ಸದ್ಯ ಉಚಿತ 200 ಯುನಿಟ್‌ ಕರೆಂಟ್‌, ಮಹಿಳೆಯರ ಉಚಿತ ಬಸ್‌ ಪ್ರಯಾಣ ಹಾಗೂ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಜಾರಿಗೊಳಿಸಬಹುದು. ಶುಕ್ರವಾರದ ಸಂಪುಟ ಸಭೆಯ ಬಳಿಕ ಈ ಬಗ್ಗೆ ಘೋಷಣೆಯಾಗಲಿದೆ.

ನೂತನ ಸರಕಾರದಿಂದ ರಾಜ್ಯದ ಜನತೆ ಕಾತರದಿಂದ ನಿರೀಕ್ಷಿಸುತ್ತಿರುವ ‘ಗ್ಯಾರಂಟಿ’ ಯೋಜನೆಗಳ ಜಾರಿ ಸಂಬಂಧ ಜೂ.2ರ ಶುಕ್ರವಾರ ಮಹತ್ವದ ತೀರ್ಮಾನ ಹೊರಬೀಳಲಿದೆ. 200 ಯೂನಿಟ್‌ ಉಚಿತ ವಿದ್ಯುತ್‌ ಪೂರೈಸುವ ‘ಗೃಹ ಜ್ಯೋತಿ’, ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ನೀಡುವ ‘ಅನ್ನಭಾಗ್ಯ’ ಹಾಗೂ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿಉಚಿತ ಪ್ರಯಾಣದ ‘ಶಕ್ತಿ’ ಈ ಮೂರು ಯೋಜನೆಗಳ ಅನುಷ್ಠಾನಕ್ಕೆ ಷರತ್ತು ಮತ್ತು ಮಾನದಂಡ ಸಹಿತದ ತೀರ್ಮಾನ ಸಚಿವ ಸಂಪುಟ ಸಭೆ ಬಳಿಕ ಪ್ರಕಟವಾಗಲಿದೆ.

ಆದರೆ, ಪಂಚ ಗ್ಯಾರಂಟಿಯಲ್ಲಿ ಪ್ರಮುಖವಾದ ‘ಗೃಹ ಲಕ್ಷ್ಮಿ’ ಯೋಜನೆಯಡಿ ಮಾಸಿಕ 2,000 ರೂ. ಪಡೆಯಲು ಮನೆಯ ಒಡತಿಯರು ಇನ್ನೂ ಎರಡು-ಮೂರು ತಿಂಗಳು ಕಾಯಲೇಬೇಕು. ಆಗಸ್ಟ್‌ನ ವರಮಹಾಲಕ್ಷ್ಮಿ ವ್ರತ ಅಥವಾ ಸೆಪ್ಟೆಂಬರ್‌ನಲ್ಲಿ ಬರುವ ಗೌರಿ ಹಬ್ಬದಂದು ಬಾಗಿನ ರೂಪದಲ್ಲಿ’ಗೃಹ ಲಕ್ಷ್ಮಿ’ ಮಹಿಳೆಯರ ಕೈಸೇರಲಿದೆ. ಉದ್ಯೋಗ ಸಿಗದ ಯುವಜನರ ದತ್ತಾಂಶ ಸಂಗ್ರಹಕ್ಕೆ ಕಾಲಾವಕಾಶದ ಅಗತ್ಯವಿರುವ ಕಾರಣಕ್ಕೆ ‘ಯುವ ನಿಧಿ’ ಯೋಜನೆಯೂ ಬಹುತೇಕ ಮೂರು ತಿಂಗಳ ಬಳಿಕವೇ ಜಾರಿಯಾಗಲಿದೆ.

ಹಣ ಹೊಂದಿಸುವ ಸವಾಲು; ಸಾಲು ಸಾಲು ಸಭೆ
ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಯಿತು. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಎಷ್ಟೇ ಕಷ್ಟವಾದರೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲೇಬೇಕಾದ ಅನಿವಾರ್ಯತೆಯನ್ನು ಬಹುತೇಕ ಎಲ್ಲಸಚಿವರು ಪ್ರತಿಪಾದಿಸಿದರು. ಆದರೆ, ಬಜೆಟ್‌ನಲ್ಲಿಅವಕಾಶವೇ ಇಲ್ಲದ ಕಾರಣ ಗ್ಯಾರಂಟಿ ಯೋಜನೆಗಳು ರಾಜ್ಯದ ಬೊಕ್ಕಸಕ್ಕೆ ದುಬಾರಿ ಹೊರೆಯಾಗಲಿವೆ ಎಂಬ ವಾಸ್ತವ ಸಂಗತಿಯನ್ನು ಹಣಕಾಸು ಇಲಾಖೆ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.

ಅಂತಿಮವಾಗಿ, ಜುಲೈನಲ್ಲಿ ಹೊಸದಾಗಿ ಮಂಡನೆ ಮಾಡಲಿರುವ ಬಜೆಟ್ ‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳುವ ಆಶಾವಾದದೊಂದಿಗೆ ಮೂರು ಯೋಜನೆಗಳ ಜಾರಿಗೆ ಸಭೆ ಒಪ್ಪಿಗೆ ಸೂಚಿಸಿತು.

ಗ್ಯಾರಂಟಿ ಯೋಜನೆ ಜಾರಿಗೆ ಸಿದ್ಧತೆ ಅಧಿಕಾರಿಗಳಿಗೆ ಮತ್ತೊಂದು ಟಾಸ್ಕ್?

​ನೂತನ ಸರಕಾರದ ‘ಫ್ಲಾಗ್‌ಶಿಪ್‌’ ಸ್ಕೀಂಗಳಾದ ಗ್ಯಾರಂಟಿಗಳಿಂದ ಬೊಕ್ಕಸದ ಮೇಲಾಗುವ ಪರಿಣಾಮಗಳ ಬಗ್ಗೆ ಸಚಿವರ ಸಭೆಗೆ ಹಣಕಾಸು ಇಲಾಖೆ ಅಧಿಕಾರಿಗಳು ಅಂಕಿಅಂಶ ಸಹಿತ ಸ್ಪಷ್ಟ ವಿವರಣೆ ನೀಡಿದರು. ಯಾರು ಫಲಾನುಭವಿಗಳಾಗಬೇಕು, ಯಾವೆಲ್ಲಾಷರತ್ತು ಹಾಗೂ ಮಾನದಂಡಗಳನ್ನು ನಿಗದಿಪಡಿಸಬೇಕು ಎಂಬ ಸಲಹೆ ರೂಪದ ಆಯ್ಕೆಗಳನ್ನೂ ಅಧಿಕಾರಿಗಳು ಸಭೆ ಮುಂದಿಟ್ಟರು. ಆದರೆ, ಈ ಲೆಕ್ಕಾಚಾರಗಳು ಮಧ್ಯಮ ವರ್ಗದ ಜನರನ್ನು ನಿರಾಶೆಗೆ ದೂಡಲಿವೆ ಎಂದು ಬಹಳಷ್ಟು ಸಚಿವರು ವಾದಿಸಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವರ್ಕ್ಔಟ್ ‌ ಮಾಡಲು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.


ಶುಕ್ರವಾರವೇ ಶುಭ ಮಹೂರ್ತ​​

ಗುರುವಾರ ಸಚಿವ ಸಂಪುಟ ಸಭೆ ನಿಗದಿಯಾಗಿತ್ತಾದರೂ, ಗ್ಯಾರಂಟಿ ಸ್ಕೀಂಗಳ ಮಾನದಂಡ ನಿರ್ಧರಿಸಲು ಇನ್ನಷ್ಟು ಹೆಚ್ಚು ಕಾಲಾವಕಾಶವನ್ನು ಹಣಕಾಸು ಇಲಾಖೆ ಬಯಸಿದ ಹಿನ್ನೆಲೆಯಲ್ಲಿಕ್ಯಾಬಿನೆಟ್ ‌ ಅನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು. ಬಡವರು ಮಾತ್ರವಲ್ಲದೆ, ಮಧ್ಯಮ ವರ್ಗದ ಜನರಿಗೂ ಗ್ಯಾರಂಟಿ ಸ್ಕೀಂಗಳ ಲಾಭ ಸಿಗುವಂತೆ ಪ್ರಸ್ತಾವಿತ ಮಾನದಂಡಗಳನ್ನು ಇನ್ನಷ್ಟು ಸರಳೀಕರಣಗೊಳಿಸಿ ಶುಕ್ರವಾರ ಸಂಪುಟದ ಮುಂದೆ ಇಡಲಾಗುತ್ತಿದೆ. ಮೂರು ಯೋಜನೆಗಳ ಅನುಷ್ಠಾನದ ತೀರ್ಮಾನ ಶುಕ್ರವಾರವೇಪ್ರಕಟವಾಗಲಿದೆ.

​ರಾಜ್ಯ ಮಧ್ಯಭಾಗದ ದಾವಣಗೆರೆಯಲ್ಲಿ’ಗೃಹ ಲಕ್ಷ್ಮಿ’ ಸಮಾವೇಶವನ್ನು ಆಯೋಜಿಸಿ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಸೇರಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಹಣಕಾಸು ಲೆಕ್ಕಾಚಾರ​​

ಗ್ಯಾರಂಟಿ ಯೋಜನೆಗಳಿಗೆ ಸದ್ಯಕ್ಕೆ ಅನುದಾನದ ಲಭ್ಯತೆ ಇಲ್ಲ. ನೂತನ ಸರಕಾರ ಜುಲೈನಲ್ಲಿಹೊಸದಾಗಿ ಮಂಡಿಸಲಿರುವ ಬಜೆಟ್‌ನಲ್ಲಿಅದಕ್ಕೆ ಅವಕಾಶ ಮಾಡಿಕೊಳ್ಳಲು ಸೂಚಿಸಲಾಗಿದೆ. ಶುಕ್ರವಾರ ಘೋಷಣೆಯಾಗುವ ಮೂರು ಗ್ಯಾರಂಟಿ ಯೋಜನೆಗಳಿಗೆ ಸದ್ಯಕ್ಕೆ ಹೆಚ್ಚಿನ ಹೊರೆ ಬರುವುದಿಲ್ಲಎಂಬ ಲೆಕ್ಕಾಚಾರಕ್ಕೆ ಬರಲಾಗಿದೆ. ಗೃಹಜ್ಯೋತಿ ಯೋಜನೆಯನ್ನು ಇಂಧನ ಇಲಾಖೆ ಸದ್ಯದ ಅನುದಾನ ಬಳಸಿಯೇ ಜಾರಿ ಮಾಡುವುದು.
ಉಚಿತ ಬಸ್‌ ಪ್ರಯಾಣ ಮತ್ತು ಅನ್ನಭಾಗ್ಯ ಯೋಜನೆ ವೆಚ್ಚ ಸೇರಿದಂತೆ ಸುಮಾರು 6,000 ಕೋಟಿ ರೂ. ಹೆಚ್ಚುವರಿ ಹೊರೆ ಭರಿಸಬಹುದು. ಬಹುತೇಕ ಗ್ಯಾರಂಟಿ ಯೋಜನೆಗಳಿಗೆ ಆಗಸ್ಟ್‌ನಲ್ಲಿಅನುದಾನದ ಅಗತ್ಯ ಉದ್ಭವಿಸುವ ಕಾರಣ ಮೊದಲು ಘೋಷಣೆ ಮಾಡಿ, ಬಳಿಕ ಸಾಲ ಎತ್ತುವಳಿ ಒಳಗೊಂಡು ಪರ್ಯಾಯವಾಗಿ ಸಂಪನ್ಮೂಲ ಹೊಂದಿಸಿಕೊಳ್ಳಲು ಬಯಸಲಾಗಿದೆ.

Related News

spot_img

Revenue Alerts

spot_img

News

spot_img