ಬೆಂಗಳೂರು, ಜ.26-ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 74ನೇ ಗಣರಾಜ್ಯೋತ್ಸವ ಅದ್ದೂರಿ ಆಚರಣೆಗೆ ಮಾಣಿಕ್ ಷಾ ಪರೇಡ್ ಮೈದಾನ ಸಂಪೂರ್ಣ ಸಜ್ಜಾಗಿದ್ದು,ಗುರುವಾರ ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಗೌರವ ರಕ್ಷೆ ಸ್ವೀಕರಿಸಿ ರಾಜ್ಯದ ಜನರಿಗೆ ಗಣರಾಜ್ಯೋತ್ಸವ ಸಂದೇಶ ಸಾರಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ 750 ಶಾಲಾ ಮಕ್ಕಳಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಗೀತೆ ಹಾಗೂ ನಾಟಕ ಮೂಡಿಬರುತ್ತಿರುವುದು ವಿಶೇಷ.ಗಣರಾಜ್ಯೋತ್ಸವ ದಿನಾಚರಣೆಯನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕಳೆದ ಮೂರು ದಿನಗಳಿಂದ ತಾಲೀಮು ನಡೆಯುತ್ತಿದೆ. ಈ ಬಾರಿ ಬರೋಬ್ಬರಿ 8ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯಮಟ್ಟದ ಸಮಾರಂಭಕ್ಕೆ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.ಪಂಥಸಂಚಲನದಲ್ಲಿ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ, ಸೇವಾದಳ, ಕೇರಳ ಮಹಿಳಾ ಪೊಲೀಸ್ ತಂಡ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡಂತೆ ಕವಾಯತು ಮತ್ತು ಬ್ಯಾಂಡ್ ನ ಒಟ್ಟು 38 ತುಕಡಿಗಳಲ್ಲಿ ಸುಮಾರು 1,520 ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಾರ್ವಜನಿಕರಿಗಾಗಿ 3೦೦೦ ಆಸನಗಳು, ಅತಿಗಣ್ಯರಿಗೆ ೨೦೦೦ ಆಸನಗಳು, ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರು, ರಕ್ಷಣಾ ಇಲಾಖೆ ಅಧಿಕಾರಿಗಳಿಗೆ 750 ಆಸನಗಳು, ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳಿಗಾಗಿ ೨೦೦೦ ಆಸನಗಳು ಸೇರಿದಂತೆ ಒಟ್ಟು ಎಂಟು ಆಸನ ವ್ಯವಸ್ಥೆ ಮಾಡಲಾಗಿದೆ ಎಂದರು.ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, ಮಾಣೆಕ್ ಷಾ ಪರೇಡ್ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಲಾಗಿದೆ. ಮೈದಾನದ ಸಮೀಪದಲ್ಲಿರುವ ಎತ್ತರದ ಕಟ್ಟಡಗಳು, ಕಾಮಗಾರಿ ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಜತೆಗೆ ನಗರದ 108 ಪೊಲೀಸ್ ಠಾಣೆಗಳ ಮೂಲಕ ಆಯಾ ವ್ಯಾಪ್ತಿಯಲ್ಲಿನ ರೈಲ್ವೆ ನಿಲ್ದಾಣ, ಹೋಟೆಲ್‌ಗಳು ಸೇರಿದಂತೆ ಎಲ್ಲೆಡೆಯೂ ಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಸುನೀತ ಅವರ ತಂಡದಿಂದ ನಾಡಗೀತೆ ಮತ್ತು ರೈತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ, ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ 750 ಮಕ್ಕಳು “ಮಹಾನಾಯಕ ಡಾ|| ಬಿ.ಆರ್.ಅಂಬೇಡ್ಕರ್” ನೃತ್ಯ ಪ್ರದರ್ಶಿಸಲಿದ್ದಾರೆ. ವಿಜಯನಗರ ಹಾಗೂ ಮಾಗಡಿ ರಸ್ತೆಯ ಬಿ.ಬಿ.ಎಂ.ಪಿ ಪ್ರೌಡಶಾಲೆ 650 ಮಕ್ಕಳು ‘ನಮ್ಮ ಭಾರತ’ ಹಾಗೂ ಲಗ್ಗೆರೆಯ ಸಿರಿ ಶಾಲೆ, ಶ್ರೀ ವಿಷ್ಣು ಇಂಟರ್ ನ್ಯಾಷನಲ್, ವಿಷ್ಣು ಶಾಲೆಯ 600 ಮಕ್ಕಳು ‘ಭಾರತಾಂಬೆ ನಿನ್ನ ಜನ್ಮ ದಿನ’ ಕಾರ್ಯಕ್ರಮವನ್ನು ನಡೆಸಿಕೊಳ್ಳಲಿದ್ದಾರೆ ಹಾಗೂ ಎಂ. ಇ. ಜಿ ಸೆಂಟರ್ ತಂಡದವರು “ಕಲರಿ ಪೈಟು” ಹಾಗೂ ದಿ ಆರ್ಮಿ ಸರ್ವೀಸ್ ಕಾರ್ಪ್ಸ್, ಬೆಂಗಳೂರು ಇವರಿಂದ “ಮೊಟರ್ ಸೈಕಲ್ ಡಿಸ್ಪಲೇ” ಸಾಹಸ ಪ್ರದರ್ಶನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೈದಾನದಲ್ಲಿ ಹೆಚ್ಚಿನ ಭದ್ರತೆ;
ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ 10 ಕೆಎಸ್ ಆರ್ ಪಿ ಮತ್ತು ಸಿಎಆರ್ ತುಕಡಿ, 3 ಅಗ್ನಿಶಾಮಕ ವಾಹನಗಳು, 2 ಆಂಬ್ಯುಲೆನ್ಸ್ ವಾಹನ, 1 ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸೂಕ್ತ ನಿಗಾ ವಹಿಸಲು ಆಯಾಕಟ್ಟಿನ ಸ್ಥಳಗಳಲ್ಲಿ 100 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ನಾಲ್ಕು ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಲಾಗಿದೆ ಎಂದು ವಿವರಿಸಿದರು.ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ೧೨ ಡಿಸಿಪಿ, ೨೨ ಎಸಿಪಿ, ೬೫ ಪಿಐ, ೧೦೧ ಪಿಎಸ್‌ಐ, ಮಹಿಳಾ ಪಿಎಸ್‌ಐ ೪೬, ೧೯೪ ಎಎಸ್‌ಐ, ೧೦೦೫ ಪೇದೆಗಳು, ೭೭ ಮಹಿಳಾ ಪೊಲೀಸ್ ಸಿಬ್ಬಂದಿಗಳು ಹಾಗೂ ೧೭೨ ಕ್ಕೂ ಹೆಚ್ಚು ಮಫ್ತಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು. ಮೈದಾನದ ಬಂದೋಬಸ್ತ್ ಗೆ ೧೦ ಕೆಎಸ್‌ಆರ್‌ಪಿ ಹಾಗೂ ಸಿಎಆರ್ ತುಕಡಿಗಳು ಕಾರ್ಯಚರಣೆ ನಡೆಸಲಿವೆ.
ಮಾಸ್ಕ್ ಕಡ್ಡಾಯ:
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಪಾಲ್ಗೊಳ್ಳುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.