ಬೆಂಗಳೂರು, ಫೆ. ;ಪಾಸ್ಪೋರ್ಟ್ ಪಡೆಯಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ರೆ ಸಾಕು. ದಾಖಲೆಗಳ ಪರಿಶೀಲನೆಗೆ ದಿನಾಂಕ ನಿಗದಿ ಪಡಿಸಿ ಪಾಸ್ಪೋರ್ಟ್ ಕಚೇರಿಯಿಂದಲೇ ಭೇಟಿಯ ಸಮಯ ನಿಗದಿ ಪಡಿಸಲಾಗುತ್ತದೆ. ಸೂಚಿತ ದಿನದಂದು ಹೋಗಿದ್ರೆ ಪಾಸ್ ಪೋರ್ಟ್ ಪ್ರಕ್ರಿಯೆ ಮುಗಿದು ಹೋಗುತ್ತದೆ ಅದೇ ಮಾದರಿಯಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಿಗುವ ಎಲ್ಲಾ ಸೇವೆಗಳನ್ನು ಪಾಸ್ಪೋರ್ಟ್ ಮಾದರಿಯಲ್ಲಿ ಒದಗಿಸಲು ಕಂದಾಯ ಇಲಾಖೆ ಮುಂದಾಗಿದ್ದು ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.
ಪಾಸ್ಪೋರ್ಟ್ ಮಾದರಿಯಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿನ ನೋಂದಣಿ ಸೇವೆ ಮುಂದಿನ ವರ್ಷದಿಂದ ಸಿಗಲಿದೆ. ಇದಕ್ಕಾಗಿ ಕಾವೇರಿ 2 ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ ಬೆಳಗಾವಿ ದಕ್ಷಿಣ ಹಾಗೂ ಗುಲಬರ್ಗಾ ಜಿಲ್ಲೆಯ ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಯಶಸ್ಸು ಸಿಕ್ಕಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಕಂದಾಯ ಸೇವೆ ಆನ್ಲೈನ್ ನಲ್ಲಿಯೇ ಪಡೆಯಬಹುದಾಗಿದೆ.
ಕಾವೇರಿ 2 ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ನಂತರ ಸಾರ್ವಜನಿಕರು ತಮ್ಮ ಆಸ್ತಿ ರಿಜಿಸ್ಟ್ರೇಷನ್, ವಿವಾಹ ನೋಂದಣಿ, ಅಗ್ರಿಮೆಂಟ್ ನೋಂದಣಿ, ಜಿಪಿಎ ಕಾರ್ಯಗತ ಸೇರಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಿಗುವ ಬಹುತೇಕ ನೋಂದಣಿ ಪ್ರಕ್ರಿಯೆ ಆನ್ಲೈನ್ ನಲ್ಲಿಯೇ ಲಭ್ಯವಾಗಲಿದೆ. ಇದರಿಂದ ಸಾರ್ವಜನಿಕರು ಅನಾವಶ್ಯಕ ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆಯುವುದು ತಪ್ಪಲಿದೆ. ಜತೆಗೆ ನಿಗದಿತ ಕಾಲ ಮಿತಿಯಲ್ಲಿ ಕೆಲಸ ಆಗಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ಆಶಾಭಾವನೆ ಹೊಂದಲಾಗಿದೆ.