ಬೆಂಗಳೂರು: ಐದನೇ ತರಗತಿ ಹಾಗೂ 8 ನೇ ತರಗತಿಗೆ ಈ ವರ್ಷದಿಂದ ಜಾರಿಗೆ ತಂದಿದ್ದ ಪಬ್ಲಿಕ್ ಪರೀಕ್ಷೆ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದು ಪಡಿಸಿದೆ. ಮಾ. 13 ರಿಂದ ಐದು ಮತ್ತು ಎಂಟನೇ ತರಗತಿಗೆ ನಡೆಯಬೇಕಿದ್ದ ಪಬ್ಲಿಕ್ ಪರೀಕ್ಷೆ ರದ್ದಾಗಲಿದ್ದು, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪರೀಕ್ಷೆ ರದ್ದತಿ ಮತ್ತೊಂದು ಸುತ್ತೋಲೆ ಹೊರಡಿಸಲು ತಯಾರಿ ನಡೆಸಿದೆ.
ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ಐದನೇ ತರಗತಿ ಮತ್ತು ಎಂಟನೇ ತರಗತಿಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಘೋಷಣೆ ಮಾಡಿತ್ತು. ರಾಜ್ಯ ಪಠ್ಯ ಕ್ರಮದಲ್ಲಿ ಓದುತ್ತಿರುವ ಎಂಟು ಮತ್ತು ಐದನೇ ತರಗತಿ ಮಕ್ಕಳು ಈ ವರ್ಷದಿಂದ ಕಡ್ಡಾಯವಾಗಿ ಪಬ್ಲಿಕ್ ಪರೀಕ್ಷೆ ಬರೆಯಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಐದನೇ ತರಗತಿ ಮತ್ತು ಎಂಟನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ದಿನಾಂಕವನ್ನು ನಿಗದಿ ಪಡಿಸಿ ತಯಾರಿ ನಡೆಸಿತ್ತು. ಮಾ. 13 ರಿಂದ ಆಯಾ ಶಾಲೆಗಳಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿತ್ತು.
ಆದ್ರೆ, ಆತುರದ ತೀರ್ಮಾನ ತೆಗೆದುಕೊಂಡು ವರ್ಷದ ಮಧ್ಯದಲ್ಲಿ ಪಬ್ಲಿಕ್ ಪರೀಕ್ಷೆ ಘೋಷಣೆ ಮಾಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಹಲವು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ರಿಟ್ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಐದು ಮತ್ತು ಎಂಟನೇ ತರಗತಿಗೆ ಈ ವರ್ಷ ಪರಿಚಯಿಸಿದ್ದ ಪಬ್ಲಿಕ್ ಪರೀಕ್ಷೆಯನ್ನು ರದ್ದು ಪಡಿಸಿ ಆದೇಶ ಹೊರಡಿಸಿದೆ. ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಆದ್ರೆ, ಮುಂದಿನ ಎರಡು ದಿನ ಸರ್ಕಾರಿ ರಜೆ ಇರುವುದರಿಂದ ಮೇಲ್ಮನವಿ ಸಲ್ಲಿಸವುದಾದರೂ ಅದು ಸೋಮವಾರದಿಂದ ಮಾತ್ರ. ಮಾ. 13 ಆಗಿರುವುದರಿಂದ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಐದು ಮತ್ತು ಎಂಟನೇ ತರಗತಿಗೆ ಮಾಡಬೇಕಿದ್ದ ಮೌಲ್ಯಾಂಕನ ಪರೀಕ್ಷೆ ನಡೆಸುವುದು ಸಾಧ್ಯವೇ ಇಲ್ಲ. ಹೀಗಾಗಿ ಮಾ. 13 ರಿಂದ ನಡೆಯಬೇಕಿದ್ದ ಪರೀಕ್ಷೆ ರದ್ದಾಗಿದ್ದು, ಬಹುಶಃ ಮುಂದೂಡುವ ಅಥವಾ ರದ್ದು ಪಡಿಸುವ ಸರ್ಕಾರದ ತೀರ್ಮಾನ ಶಿಕ್ಷಣ ಇಲಾಖೆಯಿಂದಲೇ ಬರಬೇಕಿದೆ.
ಹುಚ್ಚರಾದ ಶಿಕ್ಷಕರು:
ಇನ್ನು ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಪೂರ್ವ ತಯಾರಿ ನಡೆಸುವ ಬೆನ್ನಲ್ಲೇ ಐದು ಮತ್ತು ಎಂಟನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ಪರಿಚಯಿಸಿದ ಸರ್ಕಾರದ ಆದೇಶದಿಂದ ಕೆಲಸ ಮಾಡಲು ಪುರುಸೊತ್ತು ಇಲ್ಲದೇ ಶಿಕ್ಷಕರು ಒದ್ದಾಡುತ್ತಿದ್ದರು. ಶಾಲೆಗಳನ್ನು ಗುರುತಿಸುವುದು. ಮಕ್ಕಳ ಹಾಜರಾತಿ ನಿರ್ವಹಣೆ, ಅವರಿಗೆ ಪ್ರವೇಶ ಪತ್ರ ನಿರ್ವಹಣೆ, ಪರೀಕ್ಷಾ ಕೇಂದ್ರಗಳ ಮ್ಯಾಪಿಂಗ್ ಮತ್ತಿತರ ಕಾರ್ಯದಲ್ಲಿ ತೊಡಗಿದ್ದರು. ಇದೀಗ ದಿಢೀರ್ ಪರೀಕ್ಷೆ ರದ್ದು ಮಾಡಿ ಹೈಕೋರ್ಟ್ ಆದೇಶ ನೀಡಿದೆ. ಈಗಾಗಲೇ ಪ್ರಶ್ನೆ ಪತ್ರಿಕೆಗಳನ್ನು ಸಹ ಶಿಕ್ಷಣ ಇಲಾಖೆ ಮುದ್ರಿಸಿತ್ತು. ಹೈಕೋರ್ಟ್ ಆದೇಶ ನೀಡಿರುವುದರಿಂದ ಈವರೆಗೂ ನಡೆದಿದ್ದ ಮೌಲ್ಯಾಂಕನ ಪರೀಕ್ಷೆ ತಯಾರಿ ಕೆಲಸ ನೀರಿನಲ್ಲಿ ಹೋಮ ಮಾಡಿದಂತಾಗಿದೆ.