ಈ ವರ್ಷ ತೆರಿಗೆ ಕಡಿತದ ಪ್ರಯೋಜನ ಪಡೆಯಲು ಸುಲಭ ಮಾರ್ಗಗಳು

0
103

ಬೆಂಗಳೂರು, ಜ. 18 : ಪ್ರತಿ ದಿನವೂ ಕಷ್ಟ ಪಟ್ಟು ಸಂಸಾರ ತೂಗಿಸಲು ದುಡಿಯುತ್ತೇವೆ. ಆದರೆ, ದುಡಿದ ಹಣದಲ್ಲಿ ಬಹುಪಾಲು ತೆರಿಗೆ ಕಟ್ಟುತ್ತೇವೆ. ಸಂಸಾರಕ್ಕೆ ಉಪಯೋಗ ವಾಗಲಿ ಎಂದೋ ಇಲ್ಲವೇ ಭವಿಷ್ಯಕ್ಕೆ ಉಳಿತಾಯವಾಗಲೀ ಎಂದೋ ಹಣವನ್ನು ಹೆಚ್ಚು ಸಂಪಾದಿಸಲು ಪ್ರಯತ್ನಿಸುತ್ತೇವೆ. ಆದರೆ ತೆರಿಗೆ ಹಣ ಕಟ್ಟುವಾಗ ಮನಸ್ಸು ಭಾರವಾಗುತ್ತದೆ. ದುಡಿದ ಹಣವನ್ನು ತೆರಿಗೆಗ ಮೀಸಲಿಡುವುದು ತುಂಬಾ ಕಷ್ಟ ಎನ್ನುವುದಂತೂ ಸತ್ಯ. ತೆರಿಗೆ ಯೋಜನೆಯು ತೆರಿಗೆಗಳನ್ನು ಉಳಿಸಲು ಮತ್ತು ನಿಮ್ಮ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವ ವಿಧಾನಗಳಲ್ಲಿ ಒಂದಾಗಿದೆ.

ಆದಾಯ ತೆರಿಗೆ ಕಾಯಿದೆಯು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ತೆರಿಗೆದಾರರು ಮಾಡಿದ ವಿವಿಧ ಹೂಡಿಕೆಗಳು, ಉಳಿತಾಯಗಳು ಮತ್ತು ವೆಚ್ಚಗಳಿಗೆ ಕಡಿತಗಳನ್ನು ಒದಗಿಸುತ್ತದೆ. ತೆರಿಗೆಗಳನ್ನು ಉಳಿಸಲು ನಿಮಗೆ ಸಹಾಯ ಮಾಡುವ ಕೆಲವು ಮಾರ್ಗಗಳ ಬಗ್ಗೆ ತಿಳಿಯುವುದು ಒಳ್ಳೆಯದು. ಈ ವರ್ಷ ನಿಮ್ಮ ಖಾತೆಯಿಂದ ಹೆಚ್ಚನ ಮೊತ್ತ ತೆರಿಗೆ ಪಾಲಾಗದೇ, ಉಳಿತಾಯ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯಬಹುದು. ತೆರಿಗೆ ಉಳಿತಾಯಕ್ಕೆ ಕೆಲ ಸರಳ ಸಲಹೆಗಳನ್ನು ಇಲ್ಲಿ ಕೆಳಗೆ ನೀಡಲಾಗಿದೆ.

ಮನೆ ಬಾಡಿಗೆ
ನೀವು ಮನೆ ಬಾಡಿಗೆಯನ್ನು ಕಟ್ಟುತ್ತಿದ್ದರೆ, ಅದರ ರಸೀದಿಯನ್ನು ತೋರಿಸುವ ಮೂಲಕ ನಿಮ್ಮ ಸಂಬಳದಲ್ಲಿ ತೆರಿಗೆ ಕಡಿತವನ್ನು ಕಡಿಮೆ ಮಾಡಿಕೊಳ್ಳುವುದು ಸುಲಭ. ನೀವು ಬಾಡಿಗೆ ಕಟ್ಟುವ ಮಾಲೀಕರಿಂದ ಪ್ರತೀ ತಿಂಗಳು ರಸೀದಿಯನ್ನು ಮರೆಯದೇ ಪಡೆಯಿರಿ. ಇಲ್ಲದಿದ್ದರೆ, ಈ ವರ್ಷವೂ ತೆರಿಗೆ ಹೆಚ್ಚು ಕಟ್ಟಬೇಕಾಗುತ್ತದೆ.

ಸಾರ್ವಜನಿಕ ಭವಿಷ್ಯ ನಿಧಿ
ತೆರಿಗೆ ಉಳಿತಾಯಕ್ಕೆ ಪಿಪಿಎಫ್ ಹೂಡಿಕೆ‌ ಉತ್ತಮವಾದ ಆಯ್ಕೆಯಾಗಿದೆ. ಇದು ನಿಮಗೆ ದೀರ್ಘಕಾಲದ ಉಳಿತಾಯದ ಜೊತೆಗೆ ತೆರಿಗೆ ಕಡಿತದ ಪ್ರಯೋಜನವನ್ನು ಪಡೆಯಬಹುದು. ಸಾರ್ವಜನಿಕ ಭವಿಷ್ಯ ನಿಧಿ ಖಾತೆಯನ್ನು ಯಾವುದೇ ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್ ಶಾಖೆಗಳಲ್ಲಿ ತೆರೆಯಬಹುದು. ಇದರ ಮೆಚ್ಯುರಿಟಿ ಅವಧಿ 15 ವರ್ಷಗಳಾಗಿರುತ್ತದೆ. ನಿಮಗೆ ಉಳಿತಾಯವೂ ಆಗುತ್ತದೆ ಜೊತೆಗೆ, ತೆರಿಗೆ ಕಡಿತವೂ ಸಿಗುತ್ತದೆ. ಪ್ರತಿ ಆರ್ಥಿಕ ಸಾಲಿನಲ್ಲಿ 1.5ಲಕ್ಷ ರೂ. ವರೆಗೂ ನೀವು ತೆರಿಗೆ ಕಡಿತದ ಪ್ರಯೋಜನವನ್ನು ಪಡೆಯಬಹುದು.

ಸ್ಥಿರ ಠೇವಣಿ
ತೆರಿಗೆ ಉಳಿತಾಯಕ್ಕಾಗಿ ಸ್ಥಿರ ಠೇವಣಿಗಳಲ್ಲಿ ಹಣ ಹೂಡಿಕೆ ಮಾಡಬಹುದು. ಆಗ ನಿಮ್ಮ ತೆರಿಗೆ ಭಾರ ಕೊಂಚ ತಗ್ಗುತ್ತದೆ. ಐದು ವರ್ಷಗಳ ಲಾಕ್ ಇನ್ ಅವಧಿಗೆ ಎಫ್‌ಡಿ ತೆರೆಯಬಹುದು. ಇನ್ನು ನಿಮಗೆ ಎಫ್ ಡಿ ಮೇಲಿನ ಬಡ್ಡಿಗೆ ತೆರಿಗೆಯನ್ನು ವಿಧಿಸಲಾಗುತ್ತದೆ. ತೆರಿಗೆ ಉಳಿತಾಯದ ಎಫ್ ಡಿಗಳ ಮೇಲೆ ಸರ್ಕಾರ ಶೇ.5.5ರಿಂದ ಶೇ.7.75ರ ವರೆಗೂ ಬಡ್ಡಿದರ ನಿಗಧಿಪಡಿಸಿರುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ

ಇದು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅನ್ವಯವಾಗುತ್ತದೆ. ಸರ್ಕಾರಿ ಸಹಭಾಗಿತ್ವದಲ್ಲಿ ಉಳಿತಾಯ ಯೋಜನೆ ಇದಾಗಿದ್ದು, ನಿವೃತ್ತಿ ನಂತರದ ಬದುಕಿಗಾಗಿ ಈ ಹೂಡಿಕೆಐು ಆದಾಯದ ಮೂಲವಾಗಿರುತ್ತದೆ. ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿವೃತ್ತಿ ಹೊಂದಿದ ಬಳಿಕ ಉತ್ತಮ ರಿಟರ್ನ್ ಕೂಡ ಸಿಗುತ್ತದೆ. ಅಲ್ಲದೇ, ತೆರಿಗೆ ಕಡಿತದ ಪ್ರಯೋಜನವೂ ಇರಲಿದೆ.

ಜೀವ ವಿಮೆ
ಪ್ರತಿಯೊಬ್ಬ ವ್ಯಕ್ತಿಗೂ ಜೀವ ವಿಮೆ ಅತ್ಯಗತ್ಯವಾಗಿದೆ. ಇದರಿಂದ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ. ಜೀವ ವಿಮಾ ಪಾಲಿಸಿಗಳಲ್ಲಿ ಹಲವಾರು ಯೋಜನೆಗಳಿವೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆ ಉಳಿತಾಯ ಮಾಡಬಹುದು.

ಪಿಂಚಣಿ ಯೋಜನೆಗಳು
ಪಿಂಚಣಿ ಯೋಜನೆಗಳು ವ್ಯಕ್ತಿ ಹಾಗೂ ಆತನ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಈ ಯೋಜನೆಯಿಂದಾಗಿ ನಿವೃತ್ತಿ ಬದುಕು ಸುಗಮವಾಗಿರುತ್ತದೆ. ಜೊತೆಗೆ ತೆರಿಗೆ ಉಳಿತಾಯಕ್ಕೂ ಸಹಕಾರಿಯಾಗಲಿದೆ.