ಕಾನೂನು ಮೂಲಕ ಹಿರಿಯ ನಾಗರಿಕರು ರಕ್ಷಣೆ ಪಡೆಯುವುದು ಹೇಗೆ ? ಹಿರಿಯ ನಾಗರಿಕರ ಆಸ್ತಿ ಬರೆಸಿಕೊಂಡು ಬೀದಿಗೆ ತಳ್ಳಿದ್ರೆ ಏನಾಗುತ್ತೆ ?

0
230

ಆ ಅಜ್ಜನಿಗೆ 62 ವರ್ಷ. ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಮಗನಿಗೆ ಇದ್ದ ಆಸ್ತಿಯನ್ನು ಬರೆದುಕೊಟ್ಟು ಬಿಟ್ಟರು. ಆಸ್ತಿ ಬರೆದುಕೊಟ್ಟ ಬಳಿಕ ಆ ಹಿರಿಯ ನಾಗರಿಕನನ್ನು ಮಗ ಚೆನ್ನಾಗಿ ನೋಡಿಕೊಳ್ಳಲಿಲ್ಲ. ಮನೆಯಲ್ಲಿ ಇರಬೇಡ ಎಂದು ವೃದ್ಧಾಶ್ರಮಕ್ಕೆ ಹಾಕಿದ್ದರು. ಅಲ್ಲಿ ಜೀವನ ಮಾಡಲಾಗದ ನರಕದ ಜೀವನ. ಇಂತಹ ಸಂದರ್ಭದಲ್ಲಿ ಆ ಹಿರಿಯ ನಾಗರಿಕ/ ಅಜ್ಜಕಾನೂನಾತ್ಮಕವಾಗಿ ರಕ್ಷಣೆ ಪಡೆಯಬಹುದಾ ? ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಿರಿಯ ನಾಗರಿಕರು ಏನು ಮಾಡಬೇಕು ?

ಹಿರಿಯ ನಾಗರಿಕರ ರಕ್ಷಣೆಗಾಗಿ ಹಿರಿಯ ನಾಗರಿಕರ /ಪೋಷಕರ ಕಲ್ಯಾಣ ಹಾಗೂ ನಿರ್ವಹಣಾ ಕಾಯ್ದೆ 2007 ಕಾಯ್ದೆ ಹಾಗೂ ಹಿರಿಯ ನಾಗರಿಕರ ಕಾಯ್ದೆ 2007 ಜಾರಿಗೆ ತಂದಿದೆ. ಈ ಕಾಯ್ದೆ ಪ್ರಕಾರ ಹಿರಿಯ ನಾಗರಿಕರನ್ನು ಮತ್ತು ಹೆತ್ತವರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಹೆತ್ತವರ ಆರೋಗ್ಯ, ಆಹಾರ, ವಸತಿ ಸೌಲಭ್ಯದಿಂದ ವಂಚಿತರಾದರೆ, ಅಂತಹ ಸಂದರ್ಭದಲ್ಲಿ ಈ ಕಾಯ್ದೆಗಳ ಅಡಿಯಲ್ಲಿ ಹಿರಿಯ ನಾಗರಿಕರು ರಕ್ಷಣೆ ಪಡೆಯಬಹುದು. ಹಿರಿಯ ನಾಗರಿಕ ಅಂದರೆ 60 ವರ್ಷ ಮೇಲ್ಪಟ್ಟ ಅಪ್ಪ, ಅಮ್ಮ, ಅಜ್ಜಿ, ಅಜ್ಜ, ಚಿಕ್ಕಪ್ಪ, ಚಿಕ್ಕಮ್ಮ ಎಂದರ್ಥ.

ಹಿರಿಯ ನಾಗರಿಕರ ಅಥವಾ ಪೋಷಕರ ಆಸ್ತಿಯನ್ನು ಬರೆಸಿಕೊಂಡು ಆನಂತರ ಅವರನ್ನು ಬೀದಿಗೆ ತಳ್ಳುವಂತಿಲ್ಲ. ಒಂದು ವೇಳೆ ಹಿರಿಯ ನಾಗರಿಕರ ಹೆಸರಿನಲ್ಲಿ ಆಸ್ತಿ ಇಲ್ಲದಿದ್ದರೂ ಅವರ ಯೋಗ ಕ್ಷೇಮ ನೋಡಿಕೋಳ್ಳುವುದು ಮಕ್ಕಳ ಜವಾಬ್ದಾರಿ. ಒಂದು ವೇಳೆ ಮಕ್ಕಳು ಹಿರಿಯ ನಾಗರಿಕರು ಬೀದಿಗೆ ತಳ್ಳಿದರೆ ಅಥವಾ ಅವರ ಯೋಗ ಕ್ಷೇಮ ನೋಡಿಕೊಳ್ಳದೇ ಹೋದ್ರೆ ಹಿರಿಯ ನಾಗರಿಕರ ಕಾಯ್ದೆ 2007 ಹಾಗೂ ಹಿರಿಯ ನಾಗರಿಕರು ಮತ್ತು ಪೋಷಕರ ಕಲ್ಯಾಣ ಮತ್ತು ನಿರ್ವಹಣಾ ಕಾಯ್ದೆ 2007 ಅಸ್ತ್ರ ಬಳಿಸಿ ರಕ್ಷಣೆ ಪಡೆಯಬಹುದು.

ಆಸ್ತಿ ಬರೆದ ನಂತರ ವಾಪಸು ಪಡೆಯೋದು ಹೇಗೆ : ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂಬ ಭಾವನೆಯಿಂದ ಇದ್ದ ಆಸ್ತಿಯನ್ನು ಬರೆದುಕೊಟ್ಟು ಬೀದಿಗೆ ಬಿದ್ದರೆ, ಪುನಃ ಆ ಆಸ್ತಿಯನ್ನು ಹಿರಿಯ ನಾಗರಿಕರು ತಮ್ಮ ಹೆಸರಿಗೆ ವಾಪಸು ಪಡೆದುಕೊಳ್ಳಲು ಅವಕಾಶವಿದೆ.
ಹಿರಿಯ ನಾಗರಿಕರು ಬರೆದುಕೊಟ್ಟ ಆಸ್ತಿಯನ್ನು ವಾಪಸು ಪಡೆಯಲು ಮೊದಲು ಆಸ್ತಿಯ ದಾಖಲೆ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ಮಗ/ ಮಗಳ ವಾಸಸ್ಥಳ, ಇಲ್ಲವೇ ಆಸ್ತಿಯ ವ್ಯಾಪ್ತಿಗೆ ಬರುವ ವಾಸಸ್ಥಳದಲ್ಲಿ ದಾಖಲೆ ಪಡೆದುಕೊಳ್ಳಬೇಕು.

ಆನಂತರ ಕರ್ನಾಟಕ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಾಧಿಕಾರ ಪೀಠದಲ್ಲಿ ದಾವೆ ಸಲ್ಲಿಸಬಹುದು. ಇಲ್ಲಿ ಹಿರಿಯ ನಾಗರಿಕರಿಗೆ ಸಹಾಯ ಮಾಡಲೆಂದು ನಿರ್ವಹಣಾ ಅಧಿಕಾರಿ ಇರುತ್ತಾರೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿರ್ವಹಣಾ ಅಧಿಕಾರಿ ( ಮೈಂಟೇನನ್ಸ್ ಆಫೀಸರ್) ಇರುತ್ತಾರೆ. ಅವರನ್ನು ಸಂಪರ್ಕಿಸಿ ದೂರು ಕೊಟ್ಟರೆ ಸಾಕು. ಅರೆ ನ್ಯಾಯಿಕ ಪದ್ಧತಿಯಲ್ಲಿ ದೂರನ್ನು ವಿಚಾರಣೆ ನಡೆಸಿ ಆಸ್ತಿಯನ್ನು ವಾಪಸು ಹಿರಿಯರ ಹೆಸರಿಗೆ ವರ್ಗಾವಣೆ ಮಾಡುತ್ತಾರೆ.

ಉಪ ವಿಭಾಗಾಧಿಕಾರಿಗಳು ನೋಂದಣಿ ಮಾಡಿರುವ ದಾನಪತ್ರವನ್ನು ರದ್ದು ಪಡಿಸಿ ಉಪ ನೋಂದಣಾಧಿಕಾರಿಗಳಿಗೆ ಸೂಕ್ತ ಆದೇಶ ಮಾಡುತ್ತಾರೆ. ಅದನ್ನು ಉಪ ನೋಂದಣಾಧಿಕಾರಿ ಹಿರಿಯ ನಾಗರಿಕರ ಹೆಸರಿಗೆ ಖಾತೆ ವರ್ಗಾವಣೆ ಮಾಡಿ ಇನ್ನಿತರೆ ದಾಖಲೆಗಳನ್ನು ಮಾಡಿ ವೃದ್ಧರ ಹೆಸರಿಗೆ ಆಸ್ತಿ ಮಾಡಲಾಗುತ್ತದೆ.
ದಾನ ಪತ್ರ ಬೇಡ: ವಿಲ್ ಸೂಕ್ತ : ಹಿರಿಯ ನಾಗರಿಕರು ಆಸ್ತಿ ಇದ್ದರೆ ಅವರು ದಾನ ಪತ್ರದ ಮೂಲಕ ನೀಡಬಾರದು. ಅದರ ಬದಲಿಗೆ ವಿಲ್ ಪತ್ರ ಬರೆದು ಮರಣದ ನಂತರ ಜಾರಿಗೆ ಬರಲು ಅವಕಾಶ ಕೊಡುವುದು ಒಳಿತು. ಯಾಕೆಂದರೆ ಸಂಧ್ಯಾಕಾಲದಲ್ಲಿ ಮಕ್ಕಳು ಆಸ್ತಿಗಾಗಿಯಾದರೂ ಚೆನ್ನಾಗಿ ನೋಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ನಿರ್ವಹಣಾ ವೆಚ್ಚ ಪಡೆಯೋದು ಹೇಗೆ ? ಇನ್ನು ಹಿರಿಯ ನಾಗರಿಕರು ತಮ್ಮ ಬಳಿ ಆಸ್ತಿ ಇರಲಿ ಇಲ್ಲದೇ ಇರಲೀ , ತಮ್ಮ ಮಕ್ಕಳು ಚೆನ್ನಾಗಿ ನೋಡಿಕೊಳ್ಳದೇ ಬೀದಿಗೆ ತಳ್ಳಿದರೆ, ಜೀವನದ ನಿರ್ವಹಣಾ ವೆಚ್ಚವನ್ನು ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಹಿಂದೂ ವಾರಸ ಕಾಯದೆ ಅನ್ವಯ ಲೀಗಲೇಯರ್ಸ್ ವಿರುದ್ಧ ನಿರ್ವಹಣಾ ವೆಚ್ಚಕ್ಕಾಗಿ ನ್ಯಾಯಾಧಿಕರಣ ಪೀಠದ ಮುಂದೆ ದಾವೆ ಹೂಡಬಹುದು. ಹಿರಿಯ ನಾಗರಿಕರ ಊಟ, ವಸತಿ, ಬಟ್ಟೆ ಹಾಗೂ ಮೆಡಿಸಿನ್ ಗೆ ಅಗತ್ಯ ಇರುವಷ್ಟು ನಿರ್ವಹಣಾ ವೆಚ್ಚವನ್ನ ಕಟ್ಟಿಕೊಡಬೇಕಾಗುತ್ತದೆ. ಸಂದರ್ಭಾನುಸಾರ ಕನಿಷ್ಠ 10 ಸಾವಿರ ರೂ. ನಿಂದ ಹೆಚ್ಚು ಕೊಡಬಹುದು. ನ್ಯಾಯಾಧೀಕರಣ ಆದೇಶವನ್ನು ಕಾನೂನು ಪ್ರಕಾರ ಒಂದು ತಿಂಗಳೊಳಗೆ ಪಾಲಿಸಬೇಕು. ಇಲ್ಲದಿದ್ದರೆ ಒಂದು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಒಂದು ವೇಳೆ ನ್ಯಾಯಾಧೀಕರಣದಲ್ಲಿ ದಾವೆ ಹೂಡಿದ್ದಕ್ಕೆ ಹಿರಿಯ ನಾಗರಿಕರಿಗೆ ಹಿಂಸೆ ನೀಡಿದರೆ ಅದರ ಬಗ್ಗೆ ದಾವೆ ಹೂಡಿದರೆ ವಿಚಾರಣೆ ನಡೆಸಿ ನ್ಯಾಯಾಧೀಕರಣ ಪೀಠ ಶಿಕ್ಷೆ ನೀಡಬಹುದು. ಮೂರು ತಿಂಗಳ ಶಿಕ್ಷೆ ಅನುಭವಿಸಬೇಕಾಗುತ್ತದೆ.