ಬೆಂಗಳೂರು, ಫೆ. 24 : ಕಳೆದ ಆರೇಳು ತಿಂಗಳಿನಿಂದ ಖಾಲಿ ಇರುವ ಉಪ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡುವಂತೆ ಹೈ ಕೋರ್ಟ್ ಆದೇಶಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈ ಖೋರ್ಟ್ ಇಂದು ನೋಟಿಸ್ ಜಾರಿ ಮಾಡುವಂತೆ ಆದೇಶ ನೀಡಿದೆ.
ಸಮಾಜ ಪರಿವರ್ತನಾ ಸಮುದಾಯ ಈ ಬಗ್ಗೆ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿತ್ತು. ಸಮುದಾಯದ ಸ್ಥಾಪಕ ಅಧ್ಯಕ್ಷರಾದ ಎಸ್.ಆರ್.ಹಿರೇಮಠ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಇಂದು ವಿಚಾರಣೆ ನಡೆಸಿತು. ಬಳಿಕ ಆದಷ್ಟು ಬೇಗ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡುವಂತೆ ಆದೇಶಿಸಿದೆ.
ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಎರಡನೇ ಉಪ ಲೋಕಾಯುಕ್ತರಾಗಿ 2019ರ ನವೆಂಬರ್ 20ರಂದು ನೇಮಕವಾಗಿದ್ದರು. ಬಳಿಕ 2022ರ ಜೂನ್ 14ರಂದು ಬಿಎಸ್ ಪಾಟೀಲ್ ಅವರು ಲೋಕಾಯುಕ್ತರಾಗಿ ಪದೋನ್ನತಿ ಪಡೆದರು. ಕಳೆದ ವರ್ಷದಿಂದ ಎರಡನೇ ಉಪ ಲೋಕಾಯುಕ್ತ ಹುದ್ದೆ ಖಾಲಿಯಾಗಿಯೇ ಉಳಿದಿದೆ. ಇದುವರೆಗೂ ಈ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ ಎಂದು ಅರ್ಜಿದಾರರಾದ ಎಸ್.ಆರ್.ಹಿರೇಮಠ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಹುದ್ದೆ ಖಾಲಿ ಉಳಿದಿರುವುದರಿಂದ ಲೋಕಾಯುಕ್ತದಲ್ಲಿ ಬಾಕಿಯಿರುವ ಪ್ರಕರಣಗಳು ಹೆಚ್ಚಾಗುತ್ತುದೆ. 2020ರ ಡಿಸೆಂಬರ್ ಅಂತ್ಯಕ್ಕೆ ಲೋಕಾಯುಕ್ತದಲ್ಲಿ ಒಟ್ಟು 11,448 ಪ್ರಕರಣ ಇತ್ಯರ್ಥಕ್ಕೆ ಬಾಕಿ ಉಳಿದಿದ್ದವು. ಅದರಲ್ಲಿ ಎರಡನೇ ಉಪ ಲೋಕಾಯುಕ್ತರ ಮುಂದೆಯೇ ಒಟ್ಟು 4,232 ಪ್ರಕರಣಗಳು ಬಾಕಿ ಇವೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ-1984ರ ಅನುಸಾರ ಎರಡನೇ ಉಪ ಲೋಕಾಯುಕ್ತ ಹುದ್ದೆ ಭರ್ತಿ ಮಾಡುವುದು ಕಡ್ಡಾಯ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಆದ್ದರಿಂದ, ಕೂಡಲೇ ಈ ಹುದ್ದೆಯನ್ನು ಭರ್ತಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಎಸ್ ಆರ್ ಹಿರೇಮಠ ಅವರು ಅರ್ಜಿಯಲ್ಲಿ ಕೋರಿದ್ದರು.