ಬೆಂಗಳೂರಿನಲ್ಲಿ ಮನೆ ಖರೀದಿ ಈಗ ಹಿಂದೆಂದಿಗಿತಲೂ ತುಸು ದುಬಾರಿ!

0
105

ವಸತಿ ವಹಿವಾಟು ಕ್ಷೇತ್ರದಲ್ಲಿ ಏಪ್ರಿಲ್ – ಜೂನ್‌ ತ್ರೈಮಾಸಿಕದಲ್ಲಿ ಬೇಡಿಕೆ ಹೆಚ್ಚಳವಾದ ಪರಿಣಾಮ ಎಂಟು ಮಹಾನಗರಗಳಲ್ಲಿ ಮನೆಗಳ ಬೆಲೆಯು ಶೇ 5ರಷ್ಟು ಏರಿಕೆ ದಾಖಲಿಸಿದೆ ಎಂದು ವರದಿಯೊಂದು ತಿಳಿಸಿದೆ.

ರಿಯಲ್‌ ಎಸ್ಟೇಟ್‌ ಉದ್ಯಮ ಸಂಸ್ಥೆಗಳ ಒಕ್ಕೂಟವಾದ ಕ್ರೆಡಾಯ್‌, ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ಕಾಲಿಯರ್ಸ್‌ ಇಂಡಿಯಾ ಮತ್ತು ದತ್ತಾಂಶ ವಿಶ್ಲೇಷಣಾ ಸಂಸ್ಥೆ ಲೈಸೆಸ್‌ ಫೋರಾಸ್‌ ಒಟ್ಟಾಗಿ ʻವಸತಿ ಬೆಲೆಗಳ ವಿಶ್ಲೇಷಣಾ ವರದಿ-2022ʼ ಸಿದ್ಧಪಡಿಸಿವೆ. ದೆಹಲಿ-ಎನ್‌ಸಿಆರ್, ಮುಂಬೈ ಮಹಾನಗರ ಪ್ರದೇಶವು (ಎಂಎಂಆರ್)‌, ಚೆನ್ನೈ, ಕೋಲ್ಕತ್ತ, ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್‌ ಗಳಲ್ಲಿನ ಸಮೀಕ್ಷೆಯ ಫಲಿತಾಂಶವನ್ನು ಈ ವರದಿ ಒಳಗೊಂಡಿದೆ.

ದೆಹಲಿ-ಎನ್‌ಸಿಆರ್‌ ಅತಿ ಹೆಚ್ಚು, ಅಂದರೆ ವಾರ್ಷಿಕ ಶೇ 10ರಷ್ಟು ಬೆಲೆ ಹೆಚ್ಚಳ ದಾಖಲಿಸಿದ್ದರೆ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಅಹಮದಾಬಾದ್‌ ಶೇ 9ರಷ್ಟು ಮತ್ತು ಹೈದರಾಬಾದ್‌ ಶೇ 8ರಷ್ಟು ಹೆಚ್ಚಳ ದಾಖಲಿಸಿವೆ.

ʻ2022ರ ದ್ವಿತೀಯ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್)‌ ಮನೆಗಳ ಬೆಲೆಯು ಸಾಂಕ್ರಾಮಿಕ ರೋಗ ಕಾಲದ ಪೂರ್ವ ಮಟ್ಟವನ್ನು ಮೀರಿದೆ ಮತ್ತು ಅದು ಬೇಡಿಕೆ – ಪೂರೈಕೆಯಲ್ಲಿನ ಉತ್ತಮ ಹೊಂದಾಣಿಕೆಯನ್ನು ಸೂಚಿಸುತ್ತದೆʼ ಎಂದು ವರದಿ ಹೇಳಿದೆ.

ವರದಿ ಪ್ರಕಾರ ಅಹಮದಾಬಾದ್‌ನಲ್ಲಿ ವಸತಿಗಳ ಬೆಲೆಯು ಶೇ 9ರಷ್ಟು (₹ 5,927/ ಚದರ ಅಡಿ) ಹೆಚ್ಚಳ ಕಂಡಿದೆ. ಅದೇ ವೇಳೇ ಬೆಂಗಳೂರು ಶೇ 4ರಷ್ಟು ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ ಚದರ ಅಡಿಗೆ ₹ 7,848 ಆದರೆ, ಚೆನ್ನೈನಲ್ಲಿ ಕೇವಲ ಶೇ 1ರಷ್ಟು ಏರಿಕೆ ದಾಖಲಾಗಿದೆ. ಅಲ್ಲಿ ಪ್ರತಿ ಚದರ ಅಡಿ ಜಾಗವು ₹ 7,129ಕ್ಕೆ ಮಾರಾಟವಾಗಿದೆ. ಹೈದರಾಬಾದ್‌ನಲ್ಲಿ ಶೇ 8ರಷ್ಟು ಬೆಲೆ ಏರಿಕೆ ಕಂಡಿದ್ದು, ಪ್ರತಿ ಚದರ ಅಡಿಗೆ ಸರಾಸರಿ ₹ 9,218 ಇತ್ತು.

ಕೋಲ್ಕತ್ತದಲ್ಲೂ ಬೆಲೆಯು ಶೇ 8ರಷ್ಟು ಹೆಚ್ಚಳ ಕಂಡಿದ್ದು, ಪ್ರತಿ ಚದರ ಅಡಿಯು ₹6,362ಕ್ಕೆ ಮಾರಾಟವಾಗಿದೆ. ಮುಂಬೈ ಮಹಾನಗರ ಪ್ರದೇಶದ ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಕೇವಲ ಶೇ 1ರಷ್ಟು ಪ್ರಗತಿ ದಾಖಲಿಸಿದ್ದು, ಪ್ರತಿ ಚದರ ಅಡಿ ಜಾಗವು ₹19,677ಕ್ಕೆ ಮಾರಾಟವಾಗಿದೆ.

ದೆಹಲಿ-ಎನ್‌ಸಿಆರ್‌ ವಲಯದಲ್ಲಿ ಅತಿಹೆಚ್ಚು, ಅಂದರೆ ಶೇ 10ರಷ್ಟು (ಪ್ರತಿ ಚದರ ಅಡಿಗೆ ₹7,434) ಬೆಲೆ ಏರಿಕೆ ದಾಖಲಾಗಿದೆ. ಪುಣೆಯಲ್ಲಿ ಶೇ 5ರಷ್ಟು ಪ್ರಗತಿಯೊಂದಿಗೆ ಚದರ ಅಡಿ ಬೆಲೆ ₹7,681 ಆಗಿದೆ.

ಗಮನಾರ್ಹ ಅಂಶವೆಂದರೆ, ಹೆಚ್ಚುತ್ತಿರುವ ಬೆಲೆ ಮತ್ತು ಹೊಸ ವಸತಿ ಆಯ್ಕೆಗಳ ನಡುವೆಯೂ ಹೆಚ್ಚಿನ ನಗರಗಳಲ್ಲಿ ಮಾರಾಟವಾಗದೇ ಉಳಿಯುತ್ತಿದ್ದ ಆಸ್ತಿಗಳ ಪ್ರಮಾಣವೂ ತಗ್ಗಿದೆ.

ಬೆಂಗಳೂರಿನಲ್ಲಿ ಆಸ್ತಿ ಮಾರಾಟವಾಗದೆ ಉಳಿಯುವ ಪ್ರಮಾಣ ವಾರ್ಷಿಕ ಶೇ 21ರಷ್ಟು, ಅಂದರೆ ಬೇರೆಲ್ಲ ನಗರಗಳಿಗಿಂತ ಅತಿಹೆಚ್ಚು ತಗ್ಗಿದೆ.

ಹೈದರಾಬಾದ್‌, ಎಂಎಂಆರ್‌ ಮತ್ತು ಅಹಮದಾಬಾದ್‌ಗಳಲ್ಲಿ ಮಾತ್ರ ಮಾರಾಟವಾಗದೆ ಉಳಿದಿರುವ ಆಸ್ತಿಗಳ ಸಂಖ್ಯೆ ಹೆಚ್ಚಾಗಿದೆ. ಹೊಸ ವಸತಿ ಆಯ್ಕೆಗಳು ಹೆಚ್ಚುತ್ತಿರುವುದೂ ಇದಕ್ಕೆ ಕಾರಣವಾಗಿದೆ. ಮಾರಾಟವಾಗದ ಆಸ್ತಿಗಳಲ್ಲಿ ಅತಿಹೆಚ್ಚು ಪಾಲು, ಅಂದರೆ ಶೇ 36ರಷ್ಟು ಎಂಎಂಆರ್‌ಗೆ ಸೇರಿದೆ. ನಂತರದ ಜಾಗದಲ್ಲಿ ದೆಹಲಿ-ಎನ್‌ಸಿಆರ್‌ (ಶೇ 14) ಮತ್ತು ಪುಣೆ (ಶೇ 13) ಇವೆ.

ʻಬೆಲೆಯು ಇದೇ ಮಟ್ಟದಲ್ಲೇ ಮುಂದುವರಿಯಲಿದೆʼ ಎಂದು ಲೈಸೆಸ್‌ ಫೋರಾಸ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕಪೂರ್‌ ಅಭಿಪ್ರಾಯಪಡುತ್ತಾರೆ.

ʻರಿಯಾಯಿತಿ ಇಎಂಐ ಕೊಡುಗೆಗಳ ಯೋಜನೆಯೊಂದಿಗೆ ಹೆಚ್ಚುತ್ತಿರುವ ಬಡ್ಡಿ ದರದ ಪರಿಣಾಮಗಳನ್ನು ಡೆವಲಪರ್‌ಗಳು ತಡೆದುಕೊಳ್ಳುವ ಆರಂಭಿಕ ಲಕ್ಷಣಗಳನ್ನು ನಾವು ಕಾಣುತ್ತಿದ್ದೇವೆʼ ಎಂದು ಕಪೂರ್‌ ತಿಳಿಸುತ್ತಾರೆ.

ʻಕೆಲವು ಮೂಲಭೂತ ಅಂಶಗಳಷ್ಟೇ ಅಲ್ಲದೆ ಹೆಚ್ಚುತ್ತಿರುವ ಕಟ್ಟಡ ಸಾಮಗ್ರಿ ಬೆಲೆ ಮತ್ತು ಕಾರ್ಮಿಕರ ವೇತನದ ಕಾರಣಕ್ಕೆ ವಸತಿಗಳ ಬೆಲೆ ಏರಿಕೆ ಕಂಡಿದೆ. ಗೃಹಸಾಲಗಳ ಮೇಲಿನ ಬಡ್ಡಿದರದ ಏರಿಕೆಯಿಂದಾಗಿ ಬೇಡಿಕೆಯ ಮೇಲೆ ಗಣನೀಯ ಪ್ರಭಾವ ಬೀರಬಹುದು. ಆದರೆ ಸೆಪ್ಟೆಂಬರ್‌ ನಂತರ ಮಾರಾಟದಲ್ಲಿ ನಿರಂತರ ಹೆಚ್ಚಳ ಆಗಲಿದೆʼ ಎಂದು ಕ್ರೆಡಾಯ್‌ ರಾಷ್ಟ್ರೀಯ ಅಧ್ಯಕ್ಷ ಹರ್ಷವರ್ಧನ್‌ ಪಟೌಡಿ ಹೇಳುತ್ತಾರೆ.

ಇದಕ್ಕೆ ಪೂರಕವಾಗಿ ಕಾಲಿಯರ್ಸ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ನಾಯರ್‌ ಅವರು, ʻಬಡ್ಡಿದರ ಹೆಚ್ಚಳದ ಹೊರತಾಗಿಯೂ ಹಬ್ಬದ ಋತುವಿನಲ್ಲಿ ಮಾರಾಟದಲ್ಲಿ ಏರಿಕೆ ದಾಖಲಿಸಲಿದೆʼ ಎನ್ನುತ್ತಾರೆ.

ʻಕಳೆದ ಒಂದು ದಶಕದಲ್ಲಿ ವಸತಿಗಳ ದರವು ತೀವ್ರ ಹೆಚ್ಚಳ ಕಂಡಿಲ್ಲ. ಬಿಲ್ಡರ್‌ಗಳು ಕಡಿಮೆ ಲಾಭದೊಂದಿಗೆ ಕಾರ್ಯಾಚರಣೆ ನಡೆಸುವಂತಾಗಿತ್ತು. ಈಗ ಕಟ್ಟಡ ನಿರ್ಮಾಣ ಸಾಮಗ್ರಿ ಬೆಲೆ ಏರಿಕೆಯಿಂದಾಗಿ ಡೆವಲಪರ್‌ಗಳು ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸದೆ ಪರ್ಯಾಯವಿಲ್ಲ. ಆದಾಗ್ಯೂ ಬೃಹತ್‌ ಮತ್ತು ವಿಶ್ವಾಸಾರ್ಹ ಮಾರಾಟಗಾರರು ಬೇರೆಲ್ಲರಿಗಿಂತ ಹೆಚ್ಚಾಗಿ ಬೇಡಿಕೆ ಉಳಿಸಿಕೊಂಡಿದ್ದಾರೆ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶವನ್ನೂ ಕಂಡಿದ್ದಾರೆʼ ಎಂಬುದು ಎಐಪಿಎಲ್‌ ರಿಯಲ್‌ ಎಸ್ಟೇಟ್ ಸಂಸ್ಥೆಯ ಸಮೂಹ ಕಾರ್ಯಕಾರಿ ನಿರ್ದೇಶಕ ಪಂಕಜ್‌ ಪಾಲ್ ಅಭಿಪ್ರಾಯ.