ಕಡಿಮೆ ದರದಲ್ಲಿ ಫ್ಲಾಟ್‌ ನೀಡುವುದಾಗಿ ₹ 11 ಕೋಟಿ ವಂಚಿಸಿದ ಡೆವಲಪರ್ ಬಂಧನ

0
115

ಲಖನೌ: ಕಡಿಮೆ ದರದಲ್ಲಿ ಫ್ಲಾಟ್‌ಗಳನ್ನು ನೀಡುವುದಾಗಿ ಹೇಳಿ ₹ 11 ಕೋಟಿ ವಂಚಿಸಿದ ರಿಯಲ್ ಎಸ್ಟೇಟ್ ಡೆವಲಪರ್ ಒಬ್ಬರನ್ನು ಲಖನೌ ಅಪರಾಧ ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆರೋಪಿಯನ್ನು ಪ್ರಯಾಗರಾಜ್ ಮೂಲದ ಅನಿಲ್ ಕುಮಾರ್ ತುಳಸಿಯಾನಿ (58) ಎಂದು ಗುರುತಿಸಲಾಗಿದೆ. ಅನೇಕ ದಿನಗಳಿಂದ ತಲೆ ಮರೆಸಿಕೊಂಡಿದ್ದ ಈತನನ್ನು ಲಕ್ನೋದ ವಿಭೂತಿಖಂಡ ಕ್ರಾಸಿಂಗ್‌ ಬಳಿ ಬಂಧಿಸಲಾಗಿದೆ.

‘ಅಪ್ರಾಮಾಣಿಕತೆ, ವಂಚನೆ ಮತ್ತು ವಿವಿಧ ಅಪರಾಧ ಪ್ರಕರಣಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಆತನ ವಿರುದ್ಧ ಜಾಮೀನು ರಹಿತ ವಾರೆಂಟ್ ಸಹ ಹೊರಡಿಸಲಾಗಿದೆ’ ಎಂದು ಅಪರಾಧ ವಿಭಾಗದ ಡಿಸಿಪಿ ಪ್ರಾಚಿ ಸಿಂಗ್ ಹೇಳಿದ್ದಾರೆ.

‘ಆರೋಪಿಯು ಸರ್ಕಾರದ ಆಸ್ತಿಯನ್ನು ತನ್ನದೆಂದು ತೋರಿಸುತ್ತಿದ್ದನು ಮತ್ತು ನಕಲಿ ನೋಂದಣಿ ಪತ್ರಗಳನ್ನು ತಯಾರಿಸಿ ಫ್ಲಾಟ್‌ಗಳು/ಭೂಮಿಯನ್ನು ಅಮಾಯಕರಿಗೆ ಮಾರಾಟ ಮಾಡುತ್ತಿದ್ದನು. ಆರೋಪಿ ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದನು’ ಎಂದು ಡಿಸಿಪಿ ತಿಳಿಸಿದ್ದಾರೆ.