ವಿದ್ಯಾರ್ಥಿಗಳ ಸಿಬಿಲ್ ಸ್ಕೋರ್ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ ನೀಡುವ ಸಾಲದ ಮೌಲ್ಯಾಂಕ) ಕಡಿಮೆ ಇದೆ ಎಂಬ ಕಾರಣಕ್ಕೆ ಬ್ಯಾಂಕ್ಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ನಿರಾಕರಿಸಬಾರದು ಎಂದು ಕೇರಳ ಹೈಕೋರ್ಟ್ ಮಂಗಳವಾರ ಹೇಳಿದೆ
ವಿದ್ಯಾರ್ಥಿಗಳು ನಾಳಿನ ರಾಷ್ಟ್ರ ನಿರ್ಮಾತೃಗಳಾಗಿದ್ದು, ಬ್ಯಾಂಕ್ಗಳು ಶೈಕ್ಷಣಿಕ ಸಾಲದ ಅರ್ಜಿಗಳನ್ನು ಪರಿಗಣಿಸುವಾಗ ಮಾನವೀಯ ನಿಲುವು ತಳೆಯುವುದು ಅಗತ್ಯ ಎಂದು ನ್ಯಾಯಮೂರ್ತಿ ಪಿ ವಿ ಕುಂಞಿ ಕೃಷ್ಣನ್ ಹೇಳಿದರು.
“ಶೈಕ್ಷಣಿಕ ಸಾಲದ ಅರ್ಜಿಯನ್ನು ಪರಿಗಣಿಸುವಾಗ, ಬ್ಯಾಂಕ್ಗಳು ಮಾನವೀಯ ವಿಧಾನ ಅನುಸರಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ನಾಳಿನ ರಾಷ್ಟ್ರ ನಿರ್ಮಾತೃಗಳು. ಅವರು ಭವಿಷ್ಯದಲ್ಲಿ ಈ ದೇಶ ಮುನ್ನಡೆಸಬೇಕಿದೆ ಸರಳವಾಗಿ, ಅರ್ಜಿದಾರ ವಿದ್ಯಾರ್ಥಿಗೆ ಸಿಬಿಲ್ (ಸಿಐಬಿಐಎಲ್) ಮೌಲ್ಯಾಂಕ ಕಡಿಮೆ ಇದೆ ಎಂದ ಮಾತ್ರಕ್ಕೆ, ಶೈಕ್ಷಣಿಕ ಸಾಲದ ಅರ್ಜಿಯನ್ನು ಬ್ಯಾಂಕ್ ತಿರಸ್ಕರಿಸಬಾರದು ಎನ್ನುವುದು ನನ್ನ ಆಲೋಚಿತ ನಿರ್ಧಾರವಾಗಿದೆ” ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದರು.
ಬ್ಯಾಂಕ್ಗಳು ಬಹಳ ತಾಂತ್ರಿಕವಾಗಿ ಯೋಚಿಸಬಹುದು, ಆದರೆ ನ್ಯಾಯಾಲಯ ವಾಸ್ತವಾಂಶಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರ ವಿದ್ಯಾರ್ಥಿ ಶೈಕ್ಷಣಿಕ ಸಾಲ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಸಿಬಿಲ್ ಮೌಲ್ಯಾಂಕ ಕೇವಲ 560ರಷ್ಟಿರುವುದರಿಂದ ಬ್ಯಾಂಕ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.
ಬ್ಯಾಂಕ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ.ಕೆ.ಚಂದ್ರನ್ ಪಿಳ್ಳೈ ವಾದ ಮಂಡಿಸಿ, ಅರ್ಜಿದಾರರು ಎರಡು ಬಾರಿ ಸಾಲ ಪಡೆದಿದ್ದರಿಂದ ಸಿಐಬಿಐಎಲ್ ಅಂಕ ತುಂಬಾ ಕಡಿಮೆ ಇದೆ. ಒಂದು ಸಾಲಕ್ಕೆ ಸಂಬಂಧಿಸಿದಂತೆ ₹16,667 ಪಾವತಿಸಬೇಕಿದೆ. ಇನ್ನೊಂದು ಸಾಲವನ್ನು ಬ್ಯಾಂಕ್ ವಜಾಗೊಳಿಸಿದೆ. ಹೀಗಾಗಿ ಅರ್ಜಿದಾರರ ಪರವಾಗಿ ನ್ಯಾಯಾಲಯ ಯಾವುದೇ ಮಧ್ಯಂತರ ಆದೇಶ ನೀಡಬಾರದು ಎಂದರು.
ವಿದ್ಯಾರ್ಥಿ-ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಜಾರ್ಜ್ ಪೂಂತೋಟ್ಟಮ್, ಸಾಲದ ಮೊತ್ತವನ್ನು ತಕ್ಷಣವೇ ವಿತರಿಸದಿದ್ದರೆ, ಅರ್ಜಿದಾರರಿಗೆ ತೊಂದರೆಯಾಗುತ್ತದೆ. ಅರ್ಜಿದಾರರಿಗೆ ಬಹುರಾಷ್ಟ್ರೀಯ ಕಂಪನಿಯಿಂದ ಉದ್ಯೋಗಾವಕಾಶದ ಪ್ರಸ್ತಾಪ ಇದೆ. ಇದರಿಂದ ಅವರು ಸಂಪೂರ್ಣ ಸಾಲದ ಮೊತ್ತ ತೀರಿಸಲಿದ್ದಾರೆ ಎಂದು ಸಮರ್ಥಿಸಿಕೊಂಡರು.
ವಾದಗಳನ್ನು ಆಲಿಸಿದ ನ್ಯಾಯಾಲಯ ʼಪಿಳ್ಳೈ ಅವರು ಕೆಲವು ಕಾನೂನು ಸಮಸ್ಯೆಗಳನ್ನು ಎತ್ತಿದ್ದರೂ ಕೂಡ, ಅನುಕೂಲತೆಯ ಸಮತೋಲನವು ಅರ್ಜಿದಾರರ ಪರವಾಗಿದೆ. ವಿಶೇಷವಾಗಿ ಅವರಿಗೆ ಈಗಾಗಲೇ ಉದ್ಯೋಗ ದೊರೆಯುವ ಸಾಧ್ಯತೆ ಇದ್ದು ಅವರು ಮೇ 31, 2023ರಂದು ಅವರ ಕೋರ್ಸ್ ಪೂರ್ಣಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿತು. ಹಾಗಾಗಿ, ರೂ.4,07,200 ಶಿಕ್ಷಣ ಸಾಲವನ್ನು ವಿದ್ಯಾರ್ಥಿ ಓದುತ್ತಿರುವ ಕಾಲೇಜಿಗೆ ನೀಡುವಂತೆ ಸೂಚಿಸಿತು.
ಆದರೂ ಬ್ಯಾಂಕ್ ಪ್ರತಿ ಅಫಿಡವಿಟ್ ಸಲ್ಲಿಸಲು ಇಲ್ಲವೇ ಅರ್ಜಿಯ ತ್ವರಿತ ವಿಚಾರಣೆಗೆ ಕೋರಲು ಮುಕ್ತ ಎಂದು ಕೂಡ ನ್ಯಾಯಾಲಯ ತಿಳಿಸಿತು.