ವಿಶಾಖಪಟ್ಟಣಂ: ನೆರೆರಾಜ್ಯ ಆಂಧ್ರ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದ ಮಹತ್ತರ ರಾಜಕೀಯ ಬೆಳವಣಿಗೆಯೊಂದರಲ್ಲಿ ಆ ರಾಜ್ಯದ ಸಿಐಡಿ ಪೊಲೀಸ್ ಅಧಿಕಾರಿಗಳು ಆಂಧ್ರದಲ್ಲಿ ಸ್ಕಿಲ್ ಡವೆಲಪ್ಮೆಂಟ್ ಯೋಜನೆಯಲ್ಲಿ 371 ಕೋಟಿ ರು ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿದಂತೆ ಆಂಧ್ರ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಎನ್ ಚಂದ್ರಬಾಬು ನಾಯ್ಡುರನ್ನು ಬಂಧಿಸಿದ್ದಾರೆ. ಇವರ ಬಂಧನದ ಬೆನ್ನಲ್ಲೇ ವಿಶಾಖದಲ್ಲಿ ಮಾಜಿ ಸಚಿವ ಗಂಟಾ ಶ್ರೀನಿವಾಸ ಅವರ ಬಂಧನ ಸಹ ಆಗಿದೆ.ಚಂಧ್ರಬಾಬು ಬಂಧನದ ಹಿನ್ನೆಲೆಯಲ್ಲಿ ಟಿಡಿಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ ನೂರಾರು ಕಾರ್ಯಕರ್ತರು ಅವರ ನಿವಾಸದ ಬಳಿ ಸೇರಿದ್ದಾರೆ ಎನ್ನಲಾಗಿದೆ.ಮತ್ತೊಂದೆಡೆ ಮಾಧ್ಯಮದವರನ್ನು ಪೊಲೀಸರು ಅಲ್ಲಿಂದ ಕಳುಹಿಸಿದ್ದಾರೆ. ಪೊಲೀಸರೊಂದಿಗೆ ವಕೀಲರು ಚರ್ಚೆ ಕೈಗೊಂಡಿದ್ದರು. ವಕೀಲರು ಬಂಧನದ ದಾಖಲೆಗಳನ್ನು ಪರಿಶೀಲಿಸಿದರು. ಆದರೆ ಕೆಲವೇ ಗಂಟೆಗಳಲ್ಲಿ ಎಲ್ಲ ದಾಖಲೆಗಳನ್ನು ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.ಎಫ್ ಐಆರ್ ನಲ್ಲಿ ಚಂದ್ರಬಾಬು ಹೆಸರನ್ನು ವಕೀಲರು ಪ್ರಶ್ನಿಸಿದ್ದಾರೆ. ಈ ವೇಳೆ ಎಫ್‌ಐಆರ್ ನನ್ನ ಹೆಸರಿಲ್ಲದೆ ಹೇಗೆ ಬಂಧಿಸಲು ಸಾಧ್ಯ ಎಂದು ಟಿಡಿಪಿ ಮುಖ್ಯಸ್ಥರು ಪೊಲೀಸರನ್ನು ಪ್ರಶ್ನಿಸಿದರು.ನನ್ನನ್ನು ಬಂಧಿಸುವ ಮುನ್ನ ದಾಖಲೆಗಳನ್ನು ನೀಡುವಂತೆ ಹೇಳಿದರು.ಈ ವೇಳೆ ಪೊಲೀಸರು ಬಂಧನದ ನಂತರ ಸೂಕ್ತ ದಾಖಲೆಗಳನ್ನು ನೀಡುವುದಾಗಿ ತಿಳಿಸಿದರು.ಯಾವ ಕಾರಣಕ್ಕಾಗಿ ಬಂಧಿಸಲಾಗುತ್ತಿದೆ ಎಂದು ಕೇಳುವ ಹಕ್ಕು ಸಾಮಾನ್ಯ ಪ್ರಜೆಗೂ ಇದೆ ಎಂದು ಚಂದ್ರಬಾಬು ಹೇಳಿದರು. ಬಂಧನಕ್ಕೆ ನೋಟಿಸ್ ಜಾರಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 24 ಗಂಟೆಗಳಲ್ಲಿ ಬಂಧನಕ್ಕೆ ಕಾರಣಗಳಿರುವ ದಾಖಲೆಗಳನ್ನು ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.