ಬೆಂಗಳೂರು: 50% ಡಿಸ್ಕಂಟ್ ಇಂದೇ ಕೊನೆಯ ದಿನ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡವನ್ನು ಶೇ. 50ರಷ್ಟು ರಿಯಾಯಿತಿಯೊಂದಿಗೆ ಪಾವತಿಸಲು ಇಂದು ಸೆ.9 ಕೊನೆಯ ದಿನವಾಗಿದೆ. ತಪ್ಪಿದರೆ ಪೂರ್ಣ ಪ್ರಮಾಣದ ದಂಡವನ್ನು ವಾಹನ ಸವಾರರು ಕಟ್ಟಬೇಕಾಗುತ್ತದೆ. ಆದರೆ, ಫೆ. 11ಕ್ಕೆ ಮೊದಲು ದಾಖಲಾದ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಸಿಗಲಿದೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದ ವಾಹನ ಸವಾರರಿಗೆ ದಂಡ ಪಾವತಿಸಲು ಸರ್ಕಾರ ಈ ಹಿಂದೆ 2 ಬಾರಿ ರಿಯಾಯಿತಿ ನೀಡಿತ್ತು. ಆದರೂ ಲಕ್ಷಾಂತರ ಕೇಸ್‌ಗಳು ಬಾಕಿಯಿದ್ದ ಹಿನ್ನೆಲೆ ಮತ್ತೆ ರಿಯಾಯಿತಿ ಪ್ರಕಟಿಸಿತ್ತು,ಶನಿವಾರ ಕೊನೆಯ ದಿನವಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ತಿಳಿಸಿದ್ದಾರೆ.ಈ ಮೊದಲು ಎರಡು ಬಾರಿ ಡಿಸ್ಕೌಂಟ್ ಕೊಟ್ಟಾಗ ವಾಹನ ಮಾಲೀಕರು, ಸ್ವಯಂ ಪ್ರೇರಿತವಾಗಿ ಸಂಚಾರ ಪೊಲೀಸರ ಬಳಿ ಮತ್ತು ಆನ್‌ಲೈನ್‌ನಲ್ಲಿ ದಂಡ ಪಾವತಿ ಮಾಡಿದ್ದರು. ನೂರಾರು ಕೋಟಿ ರೂ. ಸಂಗ್ರಹವಾಗಿತ್ತು ಮೂರನೇ ಬಾರಿಗೆ ಟ್ರಾಫಿಕ್ ಫೈನ್ ಪಾವತಿಗೆ ಎರಡು ದಿನಗಳ ಕಾಲ ಡಿಸ್ಕೌಂಟ್ ಅವದಿ ನೀಡಲಾಗಿತ್ತು. ಈ ವೇಳೆ ವಾಹನ ಮಾಲೀಕರು ಸ್ವಯಂ ಪ್ರೇರಿತವಾಗಿ ದಂಡ ಪಾವತಿ ಮಾಡಿದ್ದಾರೆ. ಇದರಿಂದ 2,53,519 ಪ್ರಕರಣಗಳಲ್ಲಿ 8,07,73,190 ರೂ. ಸಂಗ್ರಹವಾಗಿದೆ. ಕೊನೆಯ ದಿನ ಮತ್ತಷ್ಟು ದಂಡ ಸಂಗ್ರಹವಾಗುವ ನಿರೀಕ್ಷೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ರಿಯಾಯಿತಿ ದರದಲ್ಲಿ ದಂಡವನ್ನು ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು.ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್ ಸೈಟ್ ಗೆ ಲಾಗ್ ಇನ್ ಆಗಿ ವಾಹನದ ನೋಂದಣಿ ಸಂಖ್ಯೆ ನಮೂದಿಸುವ ಮೂಲಕ ಬಾಕಿ ಪಾವತಿ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ 080-22942883 ಅಥವಾ 080-22943381 ಅನ್ನು ಸಂಪರ್ಕಿಸಬಹುದು.