ಬೆಂಗಳೂರು, ಸೆ. 16: ಅನಿವಾರ್ಯ ಸಂದರ್ಭದಲ್ಲಿ ಉಪ ನೋಂದಣಾಧಿಕಾರಿಗಳನ್ನು ಮನೆಗೆ ಕರೆಸಿಕೊಂಡು ನೋಂದಣಿ ಪ್ರಕ್ರಿಯೆ ಮಾಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಸಾರ್ವಜನಿಕರು ಈ ಅವಕಾಶ ಬಳಸಿಕೊಳ್ಳಬಹುದು!
ಕರ್ನಾಟಕ ನೋಂದಣಿ ನಿಯಮ 1965 ನಿಯಮ 56 ಜಿಲ್ಲಾ ನೋಂದಣಾಧಿಕಾರಿಗಳ ಖಾಸಗಿ ಹಾಜರಾತಿ ಬಗ್ಗೆ ತಿಳಿಸುತ್ತದೆ. ಪತ್ರಗಳನ್ನು ನೋಂದಣಿ ಮಾಡಿಸುವ ಸಂದರ್ಭದಲ್ಲಿ ನೋಂದಣಿ ಮಾಡಿಸುವರು ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಥವಾ ಜಿಲ್ಲಾ ನೋಂದಣಾಧಿಕಾರಿಗಳಿಗೆ ಹೋಗಲು ಅಗದಿದ್ದ ಪಕ್ಷದಲ್ಲಿ ಖಾಸಗಿ ಹಾಜರಾತಿ ಸೌಲಭ್ಯ ಪಡೆದುಕೊಳ್ಳಬಹುದು.
ಅನಾರೋಗ್ಯ, ಜೀವ ಭಯ, ಅಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು, ಕೈದಿಗಳು ಅನಿವಾರ್ಯ ಸಂದರ್ಭದಲ್ಲಿ ಖಾಸಗಿ ಹಾಜರಾತಿ ಸೌಲಭ್ಯ ಪಡೆಯುವ ಮೂಲಕ ತಾವು ಇರುವಲ್ಲಿಗೆ ಉಪ ನೋಂದಣಾಧಿಕಾರಿಗಳನ್ನು ಇರುವಲ್ಲಿಗೆ ಕರೆಸಿಕೊಂಡು ನೋಂದಣಿ ಪ್ರಕ್ರಿಯೆ ಮಾಡಿಸಬಹುದು.
ಅನಾರೋಗ್ಯ ಸೇರಿದಂತೆ ನೈಜ ಕಾರಣ ನೀಡಿ ಖಾಸಗಿ ಹಾಜರಾತಿ ಸೌಲಭ್ಯ ಪಡೆಯುವ ಸಂಬಂಧ ವ್ಯಕ್ತಿಗಳು ಸೂಕ್ತ ದಾಖಲೆಗಳೊಡನೆ ಸಂಬಂಧಪಟ್ಟ ಉಪ ನೋಂದಣಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅ ಅರ್ಜಿಯನ್ನು ಉಪ ನೋಂದಣಾದಿಕಾರಿಗೆ ತೃಪ್ತಿಯಾಗದಿದ್ದರೆ, ನೋಂದಣಾಧಿಕಾರಿಗಳು ಪಾರ್ಟಿಗಳು ವಾಸಿರುವ ಸ್ಥಳಕ್ಕೆ ಹೋಗಿ ನೋಂದಣಿ ಪ್ರಕ್ರಿಯೆ ಮಾಡಿಕೊಡುತ್ತಾರೆ.
ಖಾಸಗಿ ಹಾಜರಾತಿ ಮಾಡಬೇಕಾದದರೆ, ಉಪ ನೋಂದಣಾಧಿಕಾರಿಯವರು ತಮ್ಮ ವ್ಯಾಪ್ತಿಯಲ್ಲಿ ಮಾತ್ರ ಮಾಡುತ್ತಾರೆ. ಇನ್ನೊಂದು ಉಪ ನೋಂದಣಾಧಿಕಾರಿ ವ್ಯಾಪ್ತಿಗೆ ಹೋಗುವಂತಿಲ್ಲ. ಒಂದು ವೇಳೆ, ಪಾರ್ಟಿಗಳು ಬೇರೆ ಉಪ ನೋಂದಣಾಧಿಕಾರಿ ವ್ಯಾಪ್ತಿಯಲ್ಲಿದ್ದರೆ, ಯಾವ ಉಪ ನೋಂದಣಾಧಿಕಾರಿಗೆ ಅರ್ಜಿ ಕೊಟ್ಟಿರುತ್ತಾರೋ ಅವರು ಆ ದಾಸ್ತವೇಜನ್ನು ನೋಂದಣಿ ಅಮಾನತು ಪಡಿಸಿ, ಪಾರ್ಟಿ ವಾಸವಾಗಿರುವ ಉಪ ನೋಂದಣಾಧಿಕಾರಿಗೆ ‘ಕಮೀಷನರ್’ ಎಂದು ವಿಶೇಷ ಆದೇಶದೊಡನೆ ಅಧಿಕಾರ ನೀಡಿದಾಗ ಮಾತ್ರ ಆ ಉಪ ನೋಂದಣಾಧಿಕಾರಿ ಸಂಬಂಧಪ್ಟವರ ಪಾರ್ಟಿಯ ಮನೆಗೆ ಹೋಗಿ ತದನಂತರ ಮೂಲ ದಾಖಲೆ ಹಾಗೂ ಹೆಬ್ಬಟ್ಟಿನ ಗುರುತು ಹಾಗೂ ಸಹಿ ಪಡೆದು ದಾಸ್ತವೇಜನ್ನು ನೋಂದಣಿ ಮಾಡುತ್ತಾರೆ.
ಜೈಲಿನಲ್ಲಿರುವ ಕೈದಿಗಳು ಪತ್ರ ಬರೆದುಕೊಡಲು ಅಪೇಕ್ಷೆ ಪಟ್ಟರೆ, ಖಾಸಗಿ ಹಾಜರಾತಿಗಾಗಿ ಸಂಬಂಧಪಟ್ಟ ಜೈಲಿನ ಮುಖ್ಯಸ್ಥರಿಂದ ಅನುಮತಿ ಪಡೆದು ಅರ್ಜಿ ಸಲ್ಲಿಸಬಹುದು. ಇದೇ ರೀತಿ ಆಸ್ಪತ್ರೆಯಲ್ಲಿ ಖಾಸಗಿ ಹಾಜರಾತಿ ಮಾಡಬೇಕಾದರೆ, ಸಂಬಂಧಪಟ್ಟ ಆಸ್ಪತ್ರೆ ವೈದ್ಯಾಧಿಕಾರಿಯು ಅನುಮತಿ ನೀಡಿರಬೆಕು. ಮೇಲಿನ ಎಲ್ಲಾ ಪ್ರಕ್ರಿಯೆಗೆ ಸಂಬಂಧಪಟ್ಟ ಪಾರ್ಟಿಯವರು ಸೌಂಡ್ ಮೈಂಡ್ ಮತ್ತು ಮನಸ್ಥಿತಿ ಚೆನ್ನಾಗಿರಬೆಕು. ಎಲ್ಲಾ ಪ್ರಕ್ರಿಯೆ ಮಾಡಲು ತಿಳಿಸಿರಬೇಕು. ಇಲ್ಲದಿದ್ದರೆ ಖಾಸಗಿ ಹಾಜರಾತಿಗೆ ಅವಕಾಶ ನೀಡುವುದಿಲ್ಲ.



