31 C
Bengaluru
Friday, April 12, 2024

ಬಿಬಿಎಂಪಿ ಯ ವಾರ್ಡ್ ಪುನರ್ ವಿಂಗಡಣೆ ಅನಿವಾರ್ಯ;ಬಿಬಿಎಂಪಿ ಚುನಾವಣೆ ನಡೆಯೋದು ಬಹುತೇಕ ಅನುಮಾನ

ಬೆಂಗಳೂರು, ಜೂನ್ 20: ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಅಡಿಯಲ್ಲಿ ಬರುವ ವಾರ್ಡ್ ಗಳನ್ನು ಪುನರ್ ವಿಂಗಡಣೆ ಮಾಡಲು 12 ವಾರಗಳ ಕಾಲಾವಕಾಶ ನೀಡಿದೆ. ಆದ್ದರಿಂದ ಈ ವರ್ಷ ಅಂದರೆ 2023ರಲ್ಲಿ ನಡಯಬೇಕಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಯೋದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಹಾಗಾಗಿ ಬಹುತೇಕ 2024ಕ್ಕೆ ಪಾಲಿಕೆ ಚುನಾವಣೆ ನಡೆಯೋದೂ ಖಾತ್ರಿಯಾಗಿದ್ದು, ಹೆಚ್ಚು ಕಡಿಮೆ ಲೋಕಸಭಾ ಚುನಾವಣೆ ಸಮಯದಲ್ಲಿ ಅಥವ ಅದು ಮುಗಿದ ಬಳಿಕ ಬಿಬಿಎಂಪಿ ಚುನಾವಣೆ ನಡೆಸುವ ಸಾಧ್ಯತೆ ಇದೆ.

ಈ ಹಿಂದೆ 2020 ರ ಸೆಪ್ಟೆಂಬರ್‌ ನಲ್ಲೂ ಸಹ ಚುನಾವಣೆ ನಡೆಯದೇ ಬಿಬಿಎಂಪಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ವಿಧಾನಸಭೆ ಕ್ಷೇತ್ರಗಳ ವಾರ್ಡ್ ಮರು ವಿಂಗಡಣೆಯಲ್ಲಿ ಲೋಪವಾಗಿದ್ದು, ಅದನ್ನು ಸರಿಪಡಿಸಿದ ನಂತರವೇ ಚುನಾವಣೆ ವಿಚಾರದಲ್ಲಿ ಮುಂದುವರಿಯಲಾಗುವುದು ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಸ್ಪಷ್ಟಪಡಿಸಿದೆ.

ಮಾಜಿ ಮೇಯರ್ ಬಿ. ಎನ್. ಮಂಜುನಾಥ ರೆಡ್ಡಿ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯು ಸೋಮವಾರ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಬಿಬಿಎಂಪಿ ವಾರ್ಡ್ ಮರುವಿಂಗಣೆ ಮಾಡಿ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು 2022ರ ಜು.14ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಎತ್ತಿಹಿಡಿದ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿದ್ದರು.ಲೋಪಗಳು ಕಂಡುಬಂದಾಗ ಅದನ್ನು ಸರಿಪಡಿಸುವುದು ಅನಿವಾರ್ಯ ಎಂದು ವಿಭಾಗೀಯ ಪೀಠದ ಗಮನಕ್ಕೆ ತಂದರು.

ಅರ್ಜಿದಾರರ ಪರ ಹಿರಿಯ ವಕೀಲರು ಹಾಜರಾಗಿ, ವಾರ್ಡ್ ಮರು ವಿಂಗಡಣೆಯಲ್ಲಿ ಕೆಲವೊಂದು ಲೋಪದೋಷಗಳಾಗಿವೆ. ಈ ಅಂಶಗಳನ್ನು ಏಕಸದಸ್ಯಪೀಠವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಆದರೂ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ಏನಿದು ಪ್ರಕರಣ?;
ಬಿಬಿಎಂಪಿ ವಾರ್ಡ್ ‌ಗಳನ್ನು ಪುನರ್ ರಚಿಸಿ 2022ರ ಜು.14ರಂದು ಹಿಂದಿನ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಮಾಜಿ ಶಾಸಕಿ ಸೌಮ್ಯಾರೆಡ್ಡಿ ಹಾಗೂ ಹಾಲಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಮಾಜಿ ಮೇಯರ್ ಬಿ. ಎನ್. ಮಂಜುನಾಥ ರೆಡ್ಡಿ, ಶಾಸಕ ಎಂ. ಸತೀಶ್ ರೆಡ್ಡಿ ಸೇರಿದಂತೆ ಹಲವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯಲ್ಲಿ ಕೆಲವೊಂದು ಲೋಪದೋಷಗಳಾಗಿವೆ. ಅವು ಸರ್ಕಾರದ ಗಮನಕ್ಕೆ ಬಂದಿವೆ. ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ. ಆದರೆ, ಲೋಪಗಳನ್ನು ಸರಿಪಡಿಸಿಕೊಂಡು ಹೊಸದಾಗಿ ವಾರ್ಡ್ ಮರು ವಿಂಗಡಣೆ ಮಾಡುವುದು ಅನಿವಾರ್ಯವಾಗಿದೆ. ಆ ನಂತರವೇ ಚುನಾವಣೆ ವಿಚಾರಣೆಯಲ್ಲಿ ಸರ್ಕಾರ ಮುಂದುವರಿಯುತ್ತದೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಹೇಳಿಕೆ ದಾಖಲಿಸಿಕೊಂಡ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ 12 ವಾರ ಕಾಲಾವಕಾಶ ನೀಡಿ ಮೇಲ್ಮನವಿ ವಿಚಾರಣೆ ಮುಂದೂಡಿದೆ.

ಈ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ್ದ ನ್ಯಾ.ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ, ಸರ್ಕಾರದ ಅಧಿಸೂಚನೆಯಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ತಿಳಿಸಿ 2022ರ ಸೆ.16ರಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ವಿಭಾಗೀಯಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ.

 

ಯಾವ ಯಾವ ಮಾಹಿತಿಗಳ ಆಧಾರದ ಮೇಲೆ ವಾರ್ಡ್ ಗಳನ್ನು ಮರು ವಿಂಗಡಣೆ ಮಾಡಲಾಗುತ್ತದೆ?

ವಾರ್ಡ್ ಮರು ವಿಂಗಡಣೆ ಸಂಕೀರ್ಣ ಕೆಲಸ ಯಾವರೀತಿ ನಡೆಯುತ್ತದೆ ಎಂದರೆ, ಎಲ್ಲ ವಾರ್ಡ್ ‌ಗಳನ್ನೂ ಸಮಾನ ಜನಸಂಖ್ಯೆಗೆ ಅನುಗುಣವಾಗಿ ವಿಂಗಡಿಸುವುದು ಸುಲಭವಲ್ಲ. ಹಲವು ಅಂಶಗಳ ಆಧಾರದಲ್ಲಿ ವಿಸ್ತಾರವಾದ ಪ್ರದೇಶಗಳನ್ನು ವಿಂಗಡಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉದ್ಭವಿಸುವುದು ಸಹಜ. ಆದ್ದರಿಂದ, ಸಣ್ಣಪಟ್ಟ ಲೋಪವಿದ್ದರೆ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ. ಗಂಭೀರ ಲೋಪ ಕಂಡುಬಂದರೆ ಮಾತ್ರ ಮಧ್ಯ ಪ್ರವೇಶಿಸಲಾಗುವುದು ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು.

ಮೇಲ್ಮನವಿದಾರರ ವಾದಗಳೇನು? ಮತ್ತು ಬೇಡಿಕೆಗಳೇನು? ಇಲ್ಲಿದೆ ಎಲ್ಲಾ ವಾರ್ಡ್ ಗಳ ಲೆಕ್ಕಾಚಾರ!

ಬಿಬಿಎಂಪಿ ವ್ಯಾಪ್ತಿಯ 84 ಲಕ್ಷ ಜನಸಂಖ್ಯೆಯನ್ನು ಒಟ್ಟು 243 ವಾರ್ಡ್ ‌ಗಳಿಂದ ಭಾಗಿಸಿದರೆ ಪ್ರತಿ ವಾರ್ಡ್ ‌ಗೆ ಅಂದಾಜು 34,500 ಜನಸಂಖ್ಯೆಯಾಗುತ್ತದೆ. ವಾರ್ಡ್ ವಿಂಗಡಣೆಯಲ್ಲಿ ಜನಸಂಖ್ಯೆಯ ಪರಿಗಣಿಸುವಲ್ಲಿ ಶೇ.10ರಷ್ಟು ಏರಿಳಿತದ ಅನುಪಾತ ಅನುಸರಿಸಲಾಗಿದೆ ಎಂಬುದಾಗಿ ಸರ್ಕಾರ ಹೇಳಿದೆ.

ಸರ್ಕಾರ ಹೇಳಿದಂತೆ ಶೇ.10ರಷ್ಟು ಏರಿಳಿತ ಅನುಪಾತ ಪರಿಗಣಿಸಿದರೂ ವಾರ್ಡ್ ಜನಸಂಖ್ಯೆ 31 ಸಾವಿರದಿಂದ 37 ಸಾವಿರದ ಆಸುಪಾಸಿಗೆ ಬರುತ್ತದೆ. ಆದರೆ, ಕೆಲ ವಾರ್ಡ್ ‌ಗಳಲ್ಲಿ 30 ಸಾವಿರ ಜನ ಸಂಖ್ಯೆಯಿದೆ. ಮತ್ತೆ ಕೆಲ ವಾರ್ಡ್ ‌ಗಳಲ್ಲಿ 37 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ.

ಇದರ ಹಿಂದೆ ಇರುವ ರಾಜಕೀಯ ಲೆಕ್ಕಾಚಾರ ಏನು!

ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಲ್ಲಿ ಸಂಖ್ಯೆ ಕಡಿತಗೊಳಿಸಲಾಗಿದೆ ಹಾಗೂ ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳ ವಾರ್ಡ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ರಾಜಕೀಯ ಲಾಭಕ್ಕಾಗಿ ಹೀಗೆ ಮಾಡಲಾಗಿದೆ ಎಂದು ತಕರಾರು ಅರ್ಜಿಯಲ್ಲಿ ಈ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಮಾಜಿ ಶಾಸಕಿ ಸೌಮ್ಯಾರೆಡ್ಡಿ ಹಾಗೂ ಹಾಲಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಮಾಜಿ ಮೇಯರ್ ಬಿ. ಎನ್. ಮಂಜುನಾಥ ರೆಡ್ಡಿ, ಶಾಸಕ ಎಂ. ಸತೀಶ್ ರೆಡ್ಡಿ ಸೇರಿದಂತೆ ಹಲವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

Related News

spot_img

Revenue Alerts

spot_img

News

spot_img