ಬೆಂಗಳೂರು: ಡೆಬಿಟ್ ಕಾರ್ಡ್ ಮಾದರಿಯಲ್ಲಿರುವ ಎನ್ಸಿಎಂಸಿ ಕಾರ್ಡನ್ನು ದೇಶದ ಯಾವುದೇ ಮೆಟ್ರೋ, ಬಸ್ನಲ್ಲಿ ಬಳಸಬಹುದು. ಯಾವುದೇ ಸಾರಿಗೆ ವ್ಯವಸ್ಥೆಯಲ್ಲಿ ಬಳಕೆ ಮಾಡಿದರೂ, ಒಂದೇ ಖಾತೆಗೆ ಹಣ ಜಮೆ.
ನಮ್ಮ ಮೆಟ್ರೋದ ಬಹುನಿರೀಕ್ಷಿತ ‘ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ’ನ್ನು (ಎನ್ಸಿಎಂಸಿ) ಇನ್ನೊಂದು ತಿಂಗಳಲ್ಲಿ ಜಾರಿಗೊಳಿಸುವ ಪ್ರಯತ್ನ ನಡೆದಿದೆ ಎಂದು ಬೆಂಗಳೂರು ಮೆಟ್ರೋ ರೇಲ್ವೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.
ತಾಂತ್ರಿಕ ಕಾರಣಗಳಿಂದ ಎನ್ಸಿಎಂಸಿ ಜಾರಿ ವಿಳಂಬವಾಗಿದೆ. ಆದರೆ, ಇದೀಗ ಎಲ್ಲ ಮೆಟ್ರೋ ನಿಲ್ದಾಣ ಹಾಗೂ ಇತರೆಡೆಗಳಲ್ಲಿ ಇದರ ಬಳಕೆಗೆ ಅನುವಾಗುವಂತೆ ತಂತ್ರಜ್ಞಾನ ಅಳವಡಿಕೆ ಕಾರ್ಯ ನಡೆದಿದೆ. ಜತೆಗೆ ಕಾರ್ಡ್ ದರ ನಿಗದಿ ಬಗ್ಗೆ ಅಂತಿಮ ಹಂತದಲ್ಲಿದೆ. ಹೊಸ ವರ್ಷದಲ್ಲಿ ಇದನ್ನು ನಮ್ಮ ಮೆಟ್ರೋ ಬಳಕೆದಾರರಿಗೆ ಪರಿಚಯಿಸುತ್ತಿದೆ. ಇನ್ನೊಂದು ತಿಂಗಳಲ್ಲಿ ಕಾರ್ಡ್ ಬಳಕೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಡೆಬಿಟ್ ಕಾರ್ಡ್ ಮಾದರಿಯಲ್ಲಿರುವ ಎನ್ಸಿಎಂಸಿ ಕಾರ್ಡನ್ನು ದೇಶದ ಯಾವುದೇ ಮೆಟ್ರೋ, ಬಸ್ನಲ್ಲಿ ಬಳಸಬಹುದು. ಯಾವುದೇ ಸಾರಿಗೆ ವ್ಯವಸ್ಥೆಯಲ್ಲಿ ಬಳಕೆ ಮಾಡಿದರೂ, ಒಂದೇ ಖಾತೆಗೆ ಹಣ ಜಮೆ ಆಗುತ್ತದೆ. ಅಲ್ಲಿಂದ ಆಯಾ ಸಂಸ್ಥೆ ಒಪ್ಪಂದ ಮಾಡಿಕೊಂಡ ಬ್ಯಾಂಕ್ಗೆ ಹಣ ಜಮಾ ಆಗುತ್ತದೆ. ಮೊದಲ ಹಂತದಲ್ಲಿ 25 ಸಾವಿರ ಕಾರ್ಡನ್ನು ಜನತೆಗೆ ತಲುಪಿಸಲು ಸಿದ್ಧತೆ ನಡೆದಿದೆ.
ಸುರಂಗ ಕಾಮಗಾರಿ ಪ್ರಗತಿಯಲ್ಲಿ
ಡೈರಿ ಸರ್ಕಲ್ನಿಂದ ನಾಗವಾರದವರೆಗೆ 13 ಕಿ.ಮೀ. ಸುರಂಗ ಕೊರೆವ ಕಾರ್ಯ ಪ್ರಗತಿಯಲ್ಲಿದೆ. ಇದರಡಿಯ ಆರ್ಟಿ-1 ಪ್ಯಾಕೇಜ್ನ ಕಾಮಗಾರಿ ದಕ್ಷಿಣ ರಾರಯಂಪ್ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವೆ 3 ಸುರಂಗ ನಿಲ್ದಾಣಗಳಾದ ಡೈರಿ ಸರ್ಕಲ್, ಲಕ್ಕಸಂದ್ರ ಮತ್ತು ಲ್ಯಾನ್ಫೋರ್ಡ್ ಟೌನ್ 3.655 ಕಿ.ಮೀ. ಅಂತರದ ಸುರಂಗ ಕೊರೆವ ಕೆಲಸ ನಡೆಯುತ್ತಿದ್ದು, ಶೇ.66.70ರಷ್ಟುಕಾಮಗಾರಿ ಪೂರ್ಣಗೊಂಡಿವೆ.
ಆರ್ಟಿ-2 ಪ್ಯಾಕೇಜ್ನ ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಶಿವಾಜಿ ನಗರದವರೆಗಿನ 2.762 ಕಿ.ಮೀ. ಸುರಂಗ ನಿರ್ಮಾಣ ಸಾಗಿದೆ. ಟಿಬಿಎಂ ಅವನಿ, ಟಿಬಿಎಂ ಲಾವಿ ಕಾಮಗಾರಿಯಲ್ಲಿ ತೊಡಗಿದ್ದು, ಶೇ.94ರಷ್ಟುಕೆಲಸ ಮುಗಿದಿದೆ. ಆರ್ಟಿ-3 ಪ್ಯಾಕೇಜ್ನ ಶಿವಾಜಿ ನಗರದಿಂದ ಶಾದಿಮಹಲ್ ಶಾಫ್್ಟವರೆಗೆ 2.884 ಕಿ.ಮೀ. ಸುರಂಗ ಕಾಮಗಾರಿ ಸಾಗಿದ್ದು, ಟಿಬಿಎಂ ವಿಂದ್ಯಾ, ಟಿಬಿಎಂ ಉರ್ಜಾ ಸುರಂಗ ಕೊರೆಯುತ್ತಿವೆ. ಇಲ್ಲಿ ಶೇ.92ರಷ್ಟುಕಾಮಗಾರಿ ಮುಕ್ತಾಯವಾಗಿದೆ.
ಆರ್ಟಿ-4 ಪ್ಯಾಕೇಜ್ನ ಟ್ಯಾನರಿ ರಸ್ತೆ ನಿಲ್ದಾಣದ ದಕ್ಷಿಣದಿಂದ ಕಾಮಗಾರಿ ನಡೆಯುತ್ತಿದ್ದು, ಟ್ಯಾನರಿ ರಸ್ತೆ, ವೆಂಕಟೇಶಪುರ ಕಾಡುಗೊಂಡನಹಳ್ಳಿ ಹಾಗೂ ನಾಗವಾರದ ಸುರಂಗ ನಿಲ್ದಾಣ ಸಂಪರ್ಕಿಸುವ 4.591 ಕಿ.ಮೀ. ಕಾಮಗಾರಿ ಸಾಗಿದೆ. ಟಿಬಿಎಂ ಭದ್ರ, ಟಿಬಿಎಂ ತುಂಗಾ ಸುರಂಗ ಕೊರೆಯುತ್ತಿದ್ದು, ಶೇ.35ರಷ್ಟುಕೆಲಸ ಮುಗಿಸಿವೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಉರ್ಜಾ ಕಾರ್ಯ ಪೂರ್ಣ
ಇನ್ನು, ಜನವರಿ ಆರಂಭದಲ್ಲಿ ಸುರಂಗ ಕೊರೆವ ಉರ್ಜಾ ತನ್ನ ಕಾರ್ಯ ಪೂರ್ಣಗೊಳಿಸಿದೆ. 2ನೇ ಹಂತದ ಕಾಮಗಾರಿಯಲ್ಲಿ ತೊಡಗಿದ್ದ ಈ ಟಿಬಿಎಂ ಯಂತ್ರ ಜನವರಿ 2ನೇ ವಾರದಲ್ಲಿ ಪೂರ್ಣ ಪ್ರಮಾಣದ ಸುರಂಗ ಕೊರೆದು ಶಾದಿ ಮಹಲ್ ಶಾಫ್ಟನಲ್ಲಿ ಹೊರಬಂದಿದೆ. 2022ರ ಆಗಸ್ಟ್ನಲ್ಲಿ ಇದು ಈ ಮಾರ್ಗದಲ್ಲಿ ಪಾಟರಿ ಟೌನ್ನಲ್ಲಿ ಸುರಂಗ ಕೊರೆಯುವ ಕಾಮಗಾರಿ ಪ್ರಾರಂಭಿಸಿತ್ತು. ಈ ಹಂತದಲ್ಲಿ 160 ದಿನಗಳಲ್ಲಿ 688 ಮೀ. ಸುರಂಗ ಕೊರೆದಿರುವ ಉರ್ಜಾ ಒಟ್ಟಾರೆ ಈವರೆಗೆ 2452 ಮೀ. ಸುರಂಗ ಕೊರೆದಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.