27.6 C
Bengaluru
Friday, October 11, 2024

ಕರ್ನಾಟಕದ 224 ಶಾಸಕರಿಗೂ ಆಸ್ತಿ ವಿವರ ಸಲ್ಲಿಸುವಂತೆ ಗಡುವು ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ.

ಬೆಂಗಳೂರು: ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ(Karnataka Assembly Elections 2023) ಗೆಲುವು ಸಾಧಿಸಿರುವ ಎಲ್ಲಾ 224 ಶಾಸಕರಿಗೂ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ(Karnataka Lokayukta) ನ್ಯಾಯಮೂರ್ತಿ ಡೆಡ್ಲೈನ್ ನೀಡಿದ್ದಾರೆ. ಇದೇ ಜೂನ್ 30ರೊಳಗೆ ಎಲ್ಲಾ ಶಾಸಕರ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ (Karnataka Lokayukta Justice BS Patil) ಗಡುವು ನೀಡಿದ್ದಾರೆ. ಆದೇಶ ನೀಡಿ 15 ದಿನ ಕಳೆದರೂ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಹೀಗಾಗಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಎಲ್ಲಾ ಪಕ್ಷದ ಶಾಸಕರ ಆಸ್ತಿ ವಿವರ ಪಡೆದು ಸಲ್ಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮೌಖಿಕ ಸೂಚನೆ ನೀಡಿದ್ದಾರೆ.

ಕಳೆದ ಬಾರಿ ಆಸ್ತಿ ವಿವರ ಸಲ್ಲಿಸಿದ್ದೇವೆಂದು ಸುಮ್ಮನಿರುವಂತಿಲ್ಲ. ಪುನರ್ ಆಯ್ಕೆಯಾದ ಶಾಸಕರು ಮತ್ತೊಮ್ಮೆ ಆಸ್ತಿ ವಿವರ ಸಲ್ಲಿಸಬೇಕು. ಮೊದಲ ಬಾರಿ ಆಯ್ಕೆಯಾದ ಶಾಸಕರು ಕೂಡ ಆಸ್ತಿ ವಿವರ ಸಲ್ಲಿಸಬೇಕು. ಒಂದು ವೇಳೆ ಜೂ.30ರೊಳಗೆ ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸದಿದ್ದರೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಬಾರಿ ದಾಖಲೆಗಳ ಸಮೇತ ಮತ್ತೆ ಆಸ್ತಿ ವಿವರ ಸಲ್ಲಿಸಬೇಕು. ಕಳೆದ ಬಾರಿ ಶಾಸಕರು ಸರಿಯಾದ ಮಾದರಿಯಲ್ಲಿ ಆಸ್ತಿ ವಿವರ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಸಮಸ್ಯೆ ಆಗಬಾರದೆಂದು ಶಾಸಕರ ಕಡ್ಡಾಯ ಆಸ್ತಿ ವಿವರ ಪಡೆಯಲು ಲೋಕಾಯುಕ್ತ ಸೆಕ್ರೆಟರಿಗೆ ಸೂಚಿಸಿದ್ದಾರೆ.

ಜನಪ್ರತಿನಿಧಿಗಳು ಕಡ್ಡಾಯವಾಗಿ ತಮ್ಮ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತ ಇಲಾಖೆಗೆ ನೀಡಲೇ ಬೇಕಾಗಿರುವುದು ಕಾನೂನು. ಆದರೆ ಆಸ್ತಿ ವಿವರ ನೀಡುವಂತೆ ಲೋಕಾಯುಕ್ತ ಇಲಾಖೆ ಜನಪ್ರತಿನಿಧಿಗಳಿಗೆ ಹಲವು ಬಾರಿ ನೋಟೀಸ್ ನೀಡಿದ್ದರೂ, ಜನಪ್ರತಿನಿಧಿಗಳು ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಸಾಕಷ್ಟು ನಿದರ್ಶನಗಳಿವೆ.

ಲೋಕಾಯುಕ್ತ ನಿಯಮ ಏನು ಹೇಳುತ್ತದೆ ?
ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 22(1), ಕಲಂ 7ರ ಉಪಕಲಂ (1)ರಂತೆ ಸರಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕರ ನೌಕರ ಈ ಕಾಯಿದೆಯಂತೆ, ಈ ಅಧಿನಿಯಮ ಜಾರಿಗೆ ಬಂದ ಮೂರು ತಿಂಗಳೊಳಗೆ ಮತ್ತು ಜೂನ್‌ಗಿಂತ ಮುಂಚಿತವಾಗಿ ಪ್ರತಿ ವರ್ಷವೂ ಪ್ರತಿ ವರ್ಷ ತನ್ನ ಮತ್ತು ಕುಟುಂಬದ ಸದಸ್ಯರ ಆಸ್ತಿ ವಿವರಗಳನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕೆಂಬ ನಿಯಮವಿದೆ. ಅದು ಕಡ್ಡಾಯ ಕೂಡ.

ಒಂದು ವೇಳೆ ಆಸ್ತಿ ವಿವರ ಸಲ್ಲಿಸದಿದ್ದಲ್ಲಿ ಸಾರ್ವಜನಿಕ ಸೇವಕರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಕ್ಷಮ ಪ್ರಾಧಿಕಾರ (ರಾಜ್ಯಪಾಲರು) ವರದಿ ಸಲ್ಲಿಸಬೇಕು. ಅಂತಹ ಶಾಸಕರ ಹೆಸರುಗಳನ್ನು ರಾಜ್ಯದಾದ್ಯಂತ ಪ್ರಸರಣ ಹೊಂದಿರುವ ಮೂರು ದಿನಪತ್ರಿಕೆಗಳಲ್ಲಿ ಪ್ರಕಟಿಸಲು ಕಾಯ್ದೆಯಲ್ಲಿ ಅವಕಾಶವಿದೆ.

Related News

spot_img

Revenue Alerts

spot_img

News

spot_img