ಮಡಿಕೇರಿ : ಲಂಚ ಸ್ವೀಕರಿಸುತ್ತಿದ್ದ ವೇಳೆ ಸರಕಾರಿ ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ.ಮಡಿಕೇರಿ ಸರ್ವೇ ಇಲಾಖೆ ಅಧಿಕಾರಿ ವ್ಯಕ್ತಿಯೊಬ್ಬರಿಂದ 2 ಸಾವಿರ ರೂ. ನಗದು ಮತ್ತು 1 ಬಾಟಲಿ ಮದ್ಯ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಗರದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸರ್ವೇಯರ್ (Surveyor) ಆಗಿರುವ ಮಾದಪ್ಪ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಡಗ ಗ್ರಾಮದ ತೋಟದಲ್ಲಿ ದೂರುದಾರರು ಮನೆ ನಿರ್ಮಾಣಕ್ಕಾಗಿ 3 ಬೀಟೆ ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಸರ್ವೇ ಮಾಡಿ ವರದಿ ನೀಡಲು ಆರು ತಿಂಗಳ ಹಿಂದೆ ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು ಅಲ್ಲದೆ ಸರ್ಕಾರಿ ಶುಲ್ಕವನ್ನು ಪಾವತಿ ಮಾಡಿದ್ದರು. ಈ ವೇಳೆ ಸರ್ವೇಯರ್ ಮಾದಪ್ಪ 15 ಸಾವಿರ ರೂ ಲಂಚ ಬೇಡಿಕೆ ಇಟ್ಟು ಅದನ್ನು ದೂರುದಾರರಿಂದ ಮೊದಲೇ ಪಡೆದಿದ್ದರು. ಮತ್ತೆ 2 ಸಾವಿರ ರೂ. ಹಾಗೂ ಹಂಡ್ರೆಡ್ ಪೈಪರ್ ಅಥವಾ ಬ್ಲಾಕ್ ಡಾಗ್ ಮದ್ಯದ ಬಾಟಲಿ ನೀಡಲು ಒತ್ತಾಯಿಸಿದ್ದರು.ಹೀಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸವಾಗಿರಲಿಲ್ಲ.
ಇದರಿಂದ ಮನನೊಂದ ಅರ್ಜಿದಾರರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು ಎಂದು ಆರೋಪಿಸಲಾಗಿದೆ. ಅರ್ಜಿದಾರರಿಂದ ಆರೋಪಿ ಮಾದಪ್ಪ ಅವರು ಕೆಎಸ್ಸಾ ರ್ಟಿಸಿ ಬಸ್ ನಿಲ್ದಾಣದಲ್ಲಿ 2 ಸಾವಿರ ರೂ. ನಗದು ಮತ್ತು 1 ಮದ್ಯದ ಬಾಟಲಿಯನ್ನು ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.ಲೋಕಾಯುಕ್ತ ಎಸ್.ಪಿ. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಕೊಡಗು ಲೋಕಾಯುಕ್ತ ಡಿವೈಎಸ್‌ಪಿ ಪವನ್ ಕುಮಾರ್, ವೃತ್ತನಿರೀಕ್ಷಕ ಲೋಕೇಶ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.