ಬೆಂಗಳೂರು, ಡಿ. 19: ಅಕ್ರಮ ಬಡಾವಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ನಕಲಿ ದಾಖಲೆಗಳ ದಾಸ್ತವೇಜನ್ನು ನೋಂದಣಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಯಲಹಂಕ ಉಪ ನೋಂದಣಾಧಿಕಾರಿಗಳ ಕಚೇರಿಯ ಇಬ್ಬರು ಉಪ ನೋಂದಣಾಧಿಕಾರಿಗಳನ್ನು ಅಮಾನತು ಮಾಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಯುಕ್ತ ಬಿ.ಅರ್. ಮಮತಾ ಅದೇಶ ಹೊರಡಿಸಿದ್ದಾರೆ.
ಯಲಹಂಕ ಉಪ ನೋಂದಣಾಧಿಕಾರಿಗಳ ಕಚೇರಿಯ ಉಪ ನೋಂದಣಾಧಿಕಾರಿ ನಜೀರ್ ಅಹಮದ್ ನದಾಫ್ ಹಾಗೂ ಜಯಪ್ರಕಾಶ್ ಅಮಾನತಿಗೆ ಒಳಗಾದವರು. ಇವರು ನಕಲಿ ದಾಖಲೆಗಳನ್ನು ಒಳಗೊಂಡ ದಾಸ್ತವೇಜನ್ನು ಅಕ್ರಮವಾಗಿ ನೊಂದಣಿ ಮಾಡಿದ ಆರೋಪದಡಿ ಅಮಾನತಿಗೆ ಒಳಗಾದವರು. ಇವರು ಎಸಗಿರುವ ಅಕ್ರಮ ಸಂಬಂಧ ಇಲಾಖಾ ವಿಚಾರಣೆಗೆ ಆದೇಶಿಸಿ ನೋಂದಣಿ ಮಹಾ ಪರಿವೀಕ್ಷಕರು, ಮುದ್ರಾಂಕ ಇಲಾಖೆಯ ಆಯುಕ್ತ ಮಮತಾ ಅವರು ಅದೇಶ ಮಾಡಿದ್ದಾರೆ. ಒಂದೇ ದಿನ ಇಬ್ಬರು ಉಪ ನೋಂದಣಾಧಿಕಾರಿಗಳು ಅಮಾನತಿಗೆ ಒಳಗಾಗಿದ್ದು, ಇಲಾಖಾ ವಿಚಾರಣೆ ನಡೆಯುವ ವರೆಗೂ ಕೇಂದ್ರ ಸ್ಥಾನ ಬಿಡದಂತೆ ಅಮಾನತು ಆದೇಶದಲ್ಲಿ ಸೂಚಿಸಲಾಗಿದೆ
ಏನಿದು ಅಕ್ರಮ:
ಬಿಬಿಎಂಪಿ ಬ್ಯಾಟರಾಯನಪುರ ಉಪ ವಿಭಾಗಕ್ಕೆ ಒಳಪಟ್ಟಿರುವ ವಾರ್ಡ್ ನಂಬರ್ 5 ರ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಲಾಗಿದೆ. ಈ ಅಕ್ರಮ ಬಡಾವಣೆಯ ನಿವೇಶನಗಳಿಗೆ ಬಿಬಿಎಂಪಿಯಲ್ಲಿ ತೆರಿಗೆ ಪಾವತಿ ಮಾಡಿರುವ ರೀತಿ ನಕಲಿ ತೆರಿಗೆ ಪಾವತಿ ರಿಶೀದಿ ನಿಡಿ ನಕಲಿ ಬಿ ಖಾತಾ ಸೃಷ್ಟಿಸಲಾಗಿದೆ. ಈ ಕುರಿತು ಬ್ಯಾಟರಾಯನಪುರ ಉಪ ವಿಭಾಗಾಧ ಸಹಾಯಕ ಕಂದಾಯ ಅಧಿಕಾರಿ ಬರೆದ ಪತ್ರದ ಮೇಲೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ವಿಚಾರಣೆ ನಡೆಸಲಾಗಿದೆ.
ಅಕ್ರಮ ಬಡಾವಣೆಗೆ ಸಂಬಂಧಿಸಿದಂತೆ ತೆರಿಗೆ ಪಾವತಿಸಿ ಬಿ ಖಾತಾ ಪಡೆದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಬಿಬಿಎಂಪಿ ಆಸ್ತಿಗೆ ಸಂಬಂದಿಸದಿಂತೆ ಯಾವುದೇ ತೆರಿಗೆ ಪಾವತಿ ಮಾಡದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆ ದಾಖಲೆಗಳನ್ನೇ ಯಲಹಂಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದೆ. ನಕಲಿ ದಾಖಲೆ ಸೃಷ್ಟಿಸಿದ ಅರೋಪಿಗಳ ಜತೆ ಯಲಹಂಕ ಉಪ ನೋಂದಣಾಧಿಕಾರಿಗಳಾದ ಜಯ ಪ್ರಕಾಶ್ ಮತ್ತು ನಜೀರ್ ಅಹಮದ್ ಶಾಮೀಲಾಗಿ ಅಕ್ರಮ ಎಸಗಿದ್ದಾರೆ.
ನಕಲಿ ದಾಖಲೆಗಳನ್ನ ಆಧರಿಸಿ ಯಲಹಂಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿಗೆ ಸಂಬಂಧಿಸಿದ ದಾಸ್ತವೇಜುಗಳನ್ನು ನೋಂದಣಿ ಮಾಡಿಸಲಾಗಿದೆ. ಬಿಬಿಎಂಪಿ ಕಂದಾಯ ಇಲಾಖೆಯ ಹೆಸರಿನಲ್ಲಿ ತೆರಿಗೆ ಪಾವತಿಸಿದಂತೆ ನಕಲಿ ದಾಖಲೆಗಳನ್ನ ಸೃಷ್ಟಿಸಿದ್ದು, ಈ ಸಂಬಂಧ ಬಿಬಿಎಂಪಿ ಕಂದಾಯ ಅಧಿಕಾರಿಗಳು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಈ ಕುರಿತು ಗಾಂಧಿನಗರ ಜಿಲ್ಲಾ ನೋಂದಣಾಧಿಕಾರಿಗಳು ವಿಚಾರಣೆ ನಡೆಸಿದಾಗ, ಬ್ಯಾಟರಾಯನಪುರ ಉಪ ವಿಭಾಗಕ್ಕೆ ಒಳಪಟ್ಟಿರುವ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಅಕ್ರಮ ಬಡಾವಣೆಗೆ ನಕಲಿ ತೆರಿಗೆ ಪಾವತಿ ರಶೀದಿ ಹಾಗೂ ಬಿ ಖಾತಾ ದಾಖಲೆಗಳನ್ನು ಸೃಷ್ಟಿಸಲಾಗಿದೆ. ನಕಲಿ ದಾಖಲೆಗಳನ್ನು ಒಳಗೊಂಡ 42 ದಾಸ್ತವೇಜುಗಳನ್ನು ಯಲಹಂಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. ಅದರಲ್ಲಿ ಹಿರಿಯ ಉಪ ನೋಂದಣಾಧಿಕಾರಿ ನಜೀರ್ ಅಹಮದ್ ನದಾಫ್ 15, ಹಾಗೂ ಮತ್ತೊಬ್ಬ ಉಪ ನೋಂದಣಾಧಿಕಾರಿ ಜಯ ಪ್ರಕಾಶ್ 27 ದಾಸ್ತವೇಜುಗಳನ್ನು ನೋಂದಣಿ ಮಾಡಿರುವುದು ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ನಕಲಿ ದಾಖಲೆ ಸೃಷ್ಟಿ ಸಂಬಂದ ಯಲಹಂಕ, ಆರ್.ಟಿ.ನಗರ ಹಾಗೂ ಗೋವಿಂದಪುರ ಪೊಲೀಸ್ ಠಾಣೆಗಳಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ಕೊಟ್ಟಿ ದಾಖಲೆಗಳನ್ನು ಆಧರಿಸಿ ಆಸ್ತಿಯ ದಾಸ್ತವೇಜು ನೋಂದಣಿ ಮಾಡಿದ ಬಗ್ಗೆ ಯಲಹಂಕ ಉಪ ನೋಂದಣಾಧಿಕಾರಿಗಳು ಸಮಂಜಸ ಉತ್ತರ ನೀಡದ ಹಿನ್ನೆಲೆಯಲ್ಲಿ ಇಬ್ಬರನ್ನು ಸೇವೆಯಿಂದ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಅದೇಶಿಸಲಾಗಿದೆ.
ಅಕ್ರಮ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಸಿರುವ ಆಸ್ತಿಯ ಪಕ್ಷಗಾರರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ. ನಕಲಿ ದಾಖಲೆ ಒಳಗೊಂಡ ಆಸ್ತಿ ದಾಸ್ತವೇಜು ನೋಂದಣಿ ಮಾಡಿದ ಉಪ ನೋಂದಣಾಧಿಕಾರಿಗಳನ್ನು ಅಮಾನತು ಮಾಡಿ ಅದೇಶ ಹೊರಡಿಸಲಾಗಿದೆ.



