20.8 C
Bengaluru
Thursday, December 5, 2024

ಇಂದಿನಿಂದ ‘ಸಾಗರ ಪರಿಕ್ರಮ 4ನೇ ಹಂತ’ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಆರಂಭ

​​​​​​​`ಸಾಗರ ಪರಿಕ್ರಮ’ವು ಮೀನುಗಾರರು ಮತ್ತು ಇತರ ಮಧ್ಯಸ್ಥಗಾರರ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಭಾರತ ಸರಕಾರವು ಜಾರಿಗೆ ತರುತ್ತಿರುವ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಅವರ ಆರ್ಥಿಕ ಉನ್ನತಿಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿರುವ ಉಪಕ್ರಮವಾಗಿದೆ.

1. ಕರ್ನಾಟಕದಲ್ಲಿ ‘ಸಾಗರ್ ಪರಿಕ್ರಮ ಹಂತ- 4’ರ ಪ್ರಯಾಣವು ಎರಡು ದಿನಗಳ ಕಾಲ ಮುಂದುವರಿಯಲಿದ್ದು, ಮಾರ್ಚ್ 18, 2023 ರಂದು ಉತ್ತರ ಕನ್ನಡ, ಮಾರ್ಚ್ 19 2023ರಂದು ಉಡುಪಿ ಮತ್ತು ಬಳಿಕ ದಕ್ಷಿಣ ಕನ್ನಡದಲ್ಲಿ ನಡೆಯಲಿದೆ.

2. ಕಾರ್ಯಕ್ರಮದಲ್ಲಿ, ಪ್ರಗತಿಪರ ಮೀನುಗಾರರಿಗೆ ʻಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆʼ(ಪಿಎಂಎಂಎಸ್ ‌ವೈ), ʻಕೆಸಿಸಿʼ ಮತ್ತು ʻರಾಜ್ಯ ಯೋಜನೆʼಗೆ ಸಂಬಂಧಿಸಿದ ಪ್ರಮಾಣಪತ್ರಗಳು / ಮಂಜೂರಾತಿಗಳನ್ನು ನೀಡಲಾಗುವುದು.

3. ʻಪಿಎಂಎಂಎಸ್‌ವೈʼ ಯೋಜನೆ, ರಾಜ್ಯ ಯೋಜನೆಗಳು, ಇ-ಶ್ರಮ್, ಎಫ್ಐಡಿಎಫ್, ಕೆಸಿಸಿ ಇತ್ಯಾದಿಗಳ ಬಗ್ಗೆ ಮೀನುಗಾರರ ಸಮುದಾಯದಲ್ಲಿ ಅರಿವು ಮೂಡಿಸಲು ಈ ಯೋಜನೆಗಳ ಕುರಿತಾದ ಮಾಹಿತಿಯನ್ನು ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ವೀಡಿಯೊಗಳು, ಜಿಂಗಲ್ಸ್, ಡಿಜಿಟಲ್ ಅಭಿಯಾನದ ಮೂಲಕ ಪ್ರಸಾರ ಮಾಡಲಾಗುವುದು.

4. ಕನ್ನಡದಲ್ಲಿ ʻಸಾಗರ ಪರಿಕ್ರಮʼ ಕುರಿತ ಹಾಡು ಬಿಡಗಡೆ ಮಾಡಲಾಗುವುದು

5. ಈ ಪ್ರಯಾಣದಲ್ಲಿ ರಾಜ್ಯ ಮೀನುಗಾರಿಕಾ ಅಧಿಕಾರಿಗಳು, ಮೀನುಗಾರರ ಪ್ರತಿನಿಧಿಗಳು, ಮೀನು-ಕೃಷಿಕರು, ಉದ್ಯಮಿಗಳು, ಪಾಲುದಾರರು, ವೃತ್ತಿಪರರು, ಅಧಿಕಾರಿಗಳು ಮತ್ತು ದೇಶದ ವಿವಿಧ ಭಾಗಗಳಿಂದ ಬಂದ ವಿಜ್ಞಾನಿಗಳು ಭಾಗವಹಿಸಲಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ‘ಸಾಗರ ಪರಿಕ್ರಮ’ದ 4ನೇ ಹಂತವು ಎರಡು ದಿನಗಳ ಕಾಲ ನಡೆಯಲಿದೆ. ಮಾರ್ಚ್ 18, 2023 ರಂದು ಉತ್ತರ ಕನ್ನಡ, ಮಾರ್ಚ್ 19 2023ರಂದು ಉಡುಪಿ ಹಾಗೂ ಆ ಬಳಿಕ ದಕ್ಷಿಣ ಕನ್ನಡದಲ್ಲಿ ನಡೆಯಲಿದೆ. ಎಲ್ಲ 3 ಸ್ಥಳಗಳನ್ನು ಇದು ಒಳಗೊಂಡಿರಲಿದೆ.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪರ್ಷೋತ್ತಮ್ ರೂಪಾಲಾ; ಮೀನುಗಾರಿಕೆ, ಹೈನುಗಾರಿಕೆ ಮತ್ತು ಪಶುಸಂಗೋಪನೆ ಸಹಾಯಕ ಸಚಿವ ಡಾ. ಸಂಜೀವ್ ಕುಮಾರ್ ಬಾಲ್ಯನ್ ‌, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ. ಎಲ್‌. ಮುರುಗನ್ ‌, ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವರು, ಕರ್ನಾಟಕ ಸರಕಾರದ ಕಾರ್ಮಿಕ ಸಚಿವರು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಕಾರವಾರ ನಗರಸಭೆ ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಮಹಾಮಂಡಳದ ಅಧ್ಯಕ್ಷರು, ಕರ್ನಾಟಕ ರಾಜ್ಯ ಪಶ್ಚಿಮ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರು, ಸಭಾಪತಿಗಳು ಮತ್ತು ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸತ್ ಸದಸ್ಯರು; ಭಾರತ ಸರಕಾರದ ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಶ್ರೀ ಜತೀಂದ್ರ ನಾಥ್ ಸ್ವೈನ್(ಐಎಎಸ್), ಭಾರತ ಸರಕಾರದ ಮೀನುಗಾರಿಕೆ ಜಂಟಿ ಕಾರ್ಯದರ್ಶಿ ಡಾ.ಜೆ.ಬಾಲಾಜಿ, ಕರ್ನಾಟಕ ಸರಕಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಶ್ರೀಮತಿ ಸಲ್ಮಾ ಕೆ.ಫಹ್ಲಮ್ ‌(ಐಎಎಸ್) ಮತ್ತು ಭಾರತ ಸರಕಾರದ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಕರ್ನಾಟಕ ಸರಕಾರದ ಮೀನುಗಾರಿಕಾ ನಿರ್ದೇಶಕರು, ಭಾರತೀಯ ಕರಾವಳಿ ಕಾವಲು ಪಡೆ, ಭಾರತೀಯ ಮೀನುಗಾರಿಕೆ ಸರ್ವೇಕ್ಷಣಾ ಇಲಾಖೆ, ಕರ್ನಾಟಕ ಕಡಲ ಮಂಡಳಿಯ ಹಿರಿಯ ಅಧಿಕಾರಿಗಳು ಮತ್ತು ಮೀನುಗಾರರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಪ್ರಯಾಣದಲ್ಲಿ ರಾಜ್ಯ ಮೀನುಗಾರಿಕಾ ಅಧಿಕಾರಿಗಳು, ಮೀನುಗಾರರ ಪ್ರತಿನಿಧಿಗಳು, ಮೀನು ಕೃಷಿಕರು, ಉದ್ಯಮಿಗಳು, ಪಾಲುದಾರರು, ವೃತ್ತಿಪರರು, ಅಧಿಕಾರಿಗಳು ಮತ್ತು ದೇಶದ ವಿವಿಧ ಭಾಗಗಳ ವಿಜ್ಞಾನಿಗಳು ಇರಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಗತಿಪರ ಮೀನುಗಾರರಿಗೆ, ವಿಶೇಷವಾಗಿ ಕರಾವಳಿ ಮೀನುಗಾರರು ಮತ್ತು ಮೀನು ಕೃಷಿಕರು, ಯುವ ಮೀನುಗಾರಿಕಾ ಉದ್ಯಮಿಗಳಿಗೆ ʻಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆʼ(ಪಿಎಂಎಂಎಸ್ ‌ವೈ), ʻಕೆಸಿಸಿʼ ಮತ್ತು ʻರಾಜ್ಯ ಯೋಜನೆʼಗೆ ಸಂಬಂಧಿಸಿದ ಪ್ರಮಾಣಪತ್ರಗಳು / ಮಂಜೂರಾತಿಗಳನ್ನು ನೀಡಲಾಗುವುದು. ʻಪಿಎಂಎಂಎಸ್‌ವೈ, ರಾಜ್ಯ ಯೋಜನೆಗಳು, ಇ-ಶ್ರಮ್, ಎಫ್ಐಡಿಎಫ್, ಕೆಸಿಸಿ ಇತ್ಯಾದಿಗಳ ಬಗ್ಗೆ ಮೀನುಗಾರರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆಗಳ ಬಗ್ಗೆ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ವೀಡಿಯೊಗಳು, ಜಿಂಗಲ್ಸ್, ಡಿಜಿಟಲ್ ಅಭಿಯಾನದ ಮೂಲಕ ಯೋಜನೆಗಳ ವ್ಯಾಪಕ ಪ್ರಚಾರ ಮಾಡಲಾಗುವುದು. ಕನ್ನಡದಲ್ಲಿ ʻಸಾಗರ ಪರಿಕ್ರಮʼ ಕುರಿತ ಒಂದು ಹಾಡನ್ನು ಸಹ ಬಿಡುಗಡೆ ಮಾಡಲಾಗುವುದು.

ʻಸಾಗರ ಪರಿಕ್ರಮʼವು ಕರಾವಳಿ ಸಮುದಾಯದ ಜನರ, ವಿಶೇಷವಾಗಿ ದೇಶದ ಸಮುದ್ರ ಮೀನುಗಾರರ ಜೀವನ ಗುಣಮಟ್ಟ ಮತ್ತು ಆರ್ಥಿಕ ಯೋಗಕ್ಷೇಮವನ್ನು ಸುಧಾರಿಸಲು ಉತ್ತಮ ನೀತಿಯನ್ನು ರೂಪಿಸಲು ಸರಕಾರಕ್ಕೆ ಅನುವು ಮಾಡಿಕೊಡುತ್ತದೆ. ʻಸಾಗರ ಪರಿಕ್ರಮʼದ ಪ್ರಯಾಣವು ರಾಷ್ಟ್ರದ ಆಹಾರ ಭದ್ರತೆ ದೃಷ್ಟಿಯಿಂದ ಮಹತ್ವ ಪಡೆದಿದೆ. ಜೊತೆಗೆ ಕರಾವಳಿ ಮೀನುಗಾರ ಸಮುದಾಯಗಳ ಜೀವನೋಪಾಯಕ್ಕಾಗಿ ಸಮುದ್ರ ಮೀನುಗಾರಿಕೆ ಸಂಪನ್ಮೂಲಗಳ ಬಳಕೆ, ಸಮುದ್ರ ಪರಿಸರ ವ್ಯವಸ್ಥೆಗಳ ರಕ್ಷಣೆಯ ನಡುವಿನ ಸುಸ್ಥಿರ ಸಮತೋಲನ, ಮೀನುಗಾರ ಸಮುದಾಯಗಳ ವಿವಿಧ ಅಂತರಗಳನ್ನು ನಿವಾರಣೆ, ಮೀನುಗಾರಿಕೆ ಗ್ರಾಮಗಳ ಅಭಿವೃದ್ಧಿ, ಮೀನುಗಾರಿಕೆ ಬಂದರುಗಳು ಮತ್ತು ಮೀನು ಇಳಿಸುವ ಕೇಂದ್ರಗಳಂತಹ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಉನ್ನತೀಕರಣದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಅಲ್ಲದೆ, ಪರಿಸರ ವ್ಯವಸ್ಥೆ ವಿಧಾನದ ಮೂಲಕ ಸುಸ್ಥಿರ ಮತ್ತು ಜವಾಬ್ದಾರಿಯುತ ಅಭಿವೃದ್ಧಿಯನ್ನು ಖಾತರಿಪಡಿಸುತ್ತದೆ.

ಕರ್ನಾಟಕ ರಾಜ್ಯವು 5.74 ಲಕ್ಷ ಹೆಕ್ಟೇರ್ ಸಿಹಿನೀರಿನ ಮೂಲದ ಪ್ರದೇಶವನ್ನು ಹೊಂದಿದೆ. ಈ ಪೈಕಿ 3.02 ಲಕ್ಷ ಹೆಕ್ಟೇರ್ ಕೊಳಗಳು ಮತ್ತು ಕೆರೆಗಳಾದರೆ, 2.72 ಲಕ್ಷ ಹೆಕ್ಟೇರ್ ಜಲಾಶಯಗಳ ರೂಪದಲ್ಲಿದೆ. 8,000 ಹೆಕ್ಟೇರ್ ಸವಳು ಅಥವಾ ಜೌಗು ಭೂಮಿಯಾಗಿದೆ. 27,000 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ 320 ಕಿ.ಮೀ ಕರಾವಳಿ ಪ್ರದೇಶವಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡವು ಒಟ್ಟು ಮೀನುಗಾರಿಕೆಯಲ್ಲಿ ಶೇ.40 ರಷ್ಟು ಕೊಡುಗೆ ನೀಡುತ್ತದೆ. ಉತ್ತರ ಕನ್ನಡ ಶೇ.31 ಮತ್ತು ಉಡುಪಿ ಶೇ.29 ಕೊಡುಗೆ ನೀಡುತ್ತವೆ. ದಕ್ಷಿಣ ಕನ್ನಡದಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ಮಲ್ಪೆ ಮೀನುಗಾರಿಕಾ ಬಂದರುಗಳು ಈ ನಿಟ್ಟಿನಲ್ಲಿ ಪ್ರಮುಖ ಕೊಡುಗೆ ನೀಡುತ್ತವೆ. ರಾಜ್ಯದಲ್ಲಿ 9.84 ಲಕ್ಷ ಮೀನುಗಾರರು ಮತ್ತು 729 ಮೀನುಗಾರರ ಸಹಕಾರ ಸಂಘಗಳಿವೆ (132- ಸಾಗರ ಮತ್ತು 597- ಒಳನಾಡಿನ).

ರಾಜ್ಯದ ಮೀನು ಉತ್ಪಾದನೆಯು 2021-22ನೇ ಸಾಲಿನ ಭಾರತದ ಒಟ್ಟು ಮೀನು ಉತ್ಪಾದನೆಯಲ್ಲಿ ಸುಮಾರು ಶೇ.6.6 ರಷ್ಟು ಕೊಡುಗೆ ನೀಡಿದೆ ಮತ್ತು ಒಟ್ಟು ಮೀನು ಉತ್ಪಾದನೆಯಲ್ಲಿ ಕರ್ನಾಟಕವು 3ನೇ ಸ್ಥಾನದಲ್ಲಿದೆ. ಸಮುದ್ರ ಮೀನು ಉತ್ಪಾದನೆಯಲ್ಲಿ 5ನೇ ಸ್ಥಾನ ಮತ್ತು ಒಳನಾಡಿನ ಮೀನು ಉತ್ಪಾದನೆಯಲ್ಲಿ 7ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ತಲಾ ಮೀನು ಬಳಕೆ ಸುಮಾರು 8.08 ಕೆ.ಜಿ.ಯಷ್ಟಿದೆ. 2011-12ರಲ್ಲಿ ಪ್ರಸ್ತುತ ಬೆಲೆಗಳಲ್ಲಿ ʻಜಿಎಸ್ ‌ಡಿಪಿʼಗೆ ಮೀನುಗಾರಿಕೆ ವಲಯದ ಕೊಡುಗೆ 2,723 ಕೋಟಿ ರೂ.ಗಳಷ್ಟಿತ್ತು. ಅದು, 2020-21ರಲ್ಲಿ 7,827 ಕೋಟಿ ರೂ.ಗೆ ಏರಿದೆ. 2021-22ರಲ್ಲಿ ಕರ್ನಾಟಕದಿಂದ 1,962.19 ಕೋಟಿ ರೂ. ಮೌಲ್ಯದ 1,20,427 ಮೆಟ್ರಿಕ್ ಟನ್ ಸಾಗರ ಉತ್ಪನ್ನಗಳ ರಫ್ತು ಮಾಡಲಾಗಿದೆ.

ʻಸಾಗರ ಪರಿಕ್ರಮʼವು ದೇಶದ ಕರಾವಳಿ ಪ್ರದೇಶದಾದ್ಯಂತ ರೂಪಿಸಲಾದ ವಿಕಸನಶೀಲ ಪ್ರಯಾಣವಾಗಿದೆ. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು, ನಾವಿಕರು ಮತ್ತು ಮೀನುಗಾರರಿಗೆ ನಮನ ಸಲ್ಲಿಸುವ ಸಲುವಾಗಿ 75ನೇ ʻಸ್ವಾತಂತ್ರ್ಯದ ಅಮೃತ ಮಹೋತ್ಸವʼದ ಸ್ಫೂರ್ತಿಯೊಂದಿಗೆ ಎಲ್ಲ ಮೀನುಗಾರರು, ಮೀನು ಕೃಷಿಕರು ಮತ್ತು ಸಂಬಂಧಪಟ್ಟ ಪಾಲುದಾರರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ.
ಇದು ಭಾರತ ಸರಕಾರದ ಉಪಕ್ರಮವಾಗಿದ್ದು, ಮೀನುಗಾರರು ಮತ್ತು ಇತರ ಮಧ್ಯಸ್ಥಗಾರರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಭಾರತ ಸರಕಾರವು ಜಾರಿಗೆ ತರುತ್ತಿರುವ ವಿವಿಧ ಮೀನುಗಾರಿಕಾ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಅವರ ಆರ್ಥಿಕ ಉನ್ನತಿಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.

ಗ್ರಾಮೀಣ ಪ್ರದೇಶದ ಜನರ ಜೀವನ ಗುಣಮಟ್ಟ ಮತ್ತು ಆರ್ಥಿಕ ಯೋಗಕ್ಷೇಮವನ್ನು ಸುಧಾರಿಸಲು ಮತ್ತು ಹೆಚ್ಚಿನ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು, ʻಸುಸ್ಥಿರ ಅಭಿವೃದ್ಧಿ ಗುರಿʼಗಳನ್ನು (ಎಸ್‌ಡಿಜಿ) ಸಾಧಿಸಲು ಭಾರತ ಸರಕಾರವು ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದೆ. ಅಂತಹ ಒಂದು ಕಾರ್ಯಕ್ರಮದಲ್ಲಿ ʻಸಾಗರ ಪರಿಕ್ರಮʼ ಸಹ ಒಂದಾಗಿದೆ. ಇದು ಗುಜರಾತ್, ಡಿಯು ಮತ್ತು ಡಮನ್‌ನಿಂದ ಪ್ರಾರಂಭವಾಯಿತು ಮತ್ತು ಈಗಾಗಲೇ ಮಹಾರಾಷ್ಟ್ರ ರಾಜ್ಯದಲ್ಲಿ ಪೂರ್ಣಗೊಂಡಿದೆ. ಉಳಿದ ರಾಜ್ಯಗಳೆಂದರೆ ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ. ಕರಾವಳಿ ಮೀನುಗಾರರ ಸಮಸ್ಯೆಗಳನ್ನು ತಿಳಿದುಕೊಳ್ಳುವ ಸಲುವಾಗಿ ಈ ಸ್ಥಳಗಳಲ್ಲಿ ಮೀನುಗಾರರು, ಮೀನುಗಾರ ಸಮುದಾಯಗಳು ಮತ್ತು ಮಧ್ಯಸ್ಥಗಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸುವ ಉದ್ದೇಶವನ್ನು ಹೊಂದಲಾಗಿದೆ.

ʻಸಾಗರ್ ಪರಿಕ್ರಮʼದ ಪ್ರಯಾಣವು 2022ರ ಮಾರ್ಚ್ 5ರಂದು ಗುಜರಾತ್‌ನ ಮಾಂಡ್ವಿಯಿಂದ (ಶ್ಯಾಮ್ ‌ಜಿ ಕೃಷ್ಣ ವರ್ಮಾ ಅವರ ಸ್ಮಾರಕ) ಓಖಾ-ದ್ವಾರಕಾದವರೆಗೆ “ಕ್ರಾಂತಿ ಸೆ ಶಾಂತಿ” ಎಂಬ ಘೋಷವಾಕ್ಯದೊಂದಿಗೆ ಪ್ರಾರಂಭವಾಯಿತು. 3 ಸ್ಥಳಗಳ ವ್ಯಾಪ್ತಿಯೊಂದಿಗೆ 6 ಮಾರ್ಚ್ 2022 ರಂದು ಪೋರ್‌ಬಂದರ್‌ನಲ್ಲಿ ಸಂಪನ್ನಗೊಂಡಿತು. ಈ ಕಾರ್ಯಕ್ರಮವು ಭಾರಿ ಯಶಸ್ಸನ್ನು ಕಂಡಿತು, 5,000ಕ್ಕೂ ಹೆಚ್ಚು ಜನರು ಭೌತಿಕವಾಗಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ʻಯೂಟ್ಯೂಬ್ʼ ಮತ್ತು ʻಫೇಸ್‌ಬುಕ್‌ʼನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸುಮಾರು 10,000 ಜನರು ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

2022ರ ಸೆಪ್ಟೆಂಬರ್ 23ರಿಂದ 25ರವರೆಗೆ 2ನೇ ಹಂತದ ಕಾರ್ಯಕ್ರಮವು ಮಂಗ್ರೋಲ್, ವೆರಾವಲ್, ಡಿಯು, ಜಫ್ರಾಬಾದ್, ಸೂರತ್, ಡಮನ್ ಮತ್ತು ವಲ್ಸಾದ್ ‌ ಸೇರಿದಂತೆ 7 ಸ್ಥಳಗಳಲ್ಲಿ ಜರುಗಿತು. ಈ ವೇಳೆ ಕರಾವಳಿ ಮೀನುಗಾರರ ಸಮಸ್ಯೆಗಳನ್ನು ತಿಳಿಯಲು ಮೀನುಗಾರರೊಂದಿಗೆ ಸಂವಾದ ನಡೆಸಲಾಯಿತು. ಗುಜರಾತಿ ಭಾಷೆಯಲ್ಲಿ ʻಸಾಗರ್ ಪರಿಕ್ರಮʼ ಕುರಿತ ಹಾಡನ್ನು ಬಿಡುಗಡೆ ಮಾಡಲಾಯಿತು. ʻಯೂಟ್ಯೂಬ್ʼ, ʻಫೇಸ್ ‌ಬುಕ್ʼನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗಿದ್ದು, ಸುಮಾರು 15,000 ಜನರು ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. 3ನೇ ಹಂತದ ‘ಸಾಗರ್ ಪರಿಕ್ರಮ’ ಅನ್ನು 2023ರ ಫೆಬ್ರವರಿ 19ರಂದು ಗುಜರಾತ್‌ನ ಸೂರತ್ ಹಜಿರಾ ಬಂದರಿನಿಂದ ಪ್ರಾರಂಭಿಸಲಾಯಿತು. ಉತ್ತರ ಮಹಾರಾಷ್ಟ್ರದ ಕರಾವಳಿ 5 ಪ್ರದೇಶಗಳಾದ ಸತ್ಪತಿ (ಪಾಲ್ಘರ್ ಜಿಲ್ಲೆ), ವಸಾಯಿ, ವರ್ಸೊವಾ, ನ್ಯೂ ಫೆರ್ರಿ ವಾರ್ಫ್ (ಭೌಚಾ ಧಕ್ಕಾ) ಮತ್ತು ಸಾಸನ್ ಡಾಕ್ ಮತ್ತು ಹಾಗೂ ಮುಂಬಯಿನ ಇತರ ಪ್ರದೇಶಗಳ ವ್ಯಾಪ್ತಿಯಲ್ಲಿ 2023ರ ಫೆಬ್ರವರಿ 20-21 ರವರೆಗೆ ಇದು ನೆರವೇರಿತು. 13,500 ಜನರು ಭೌತಿಕವಾಗಿ ಪಾಲ್ಗೊಳ್ಳುವುದರೊಂದಿಗೆ ಈ ಕಾರ್ಯಕ್ರಮವು ಯಶಸ್ವಿಯಾಯಿತು. ಈ ಕಾರ್ಯಕ್ರಮವನ್ನು ಸಹ ʻಯೂಟ್ಯೂಬ್ʼ, ʻಫೇಸ್‌ಬುಕ್‌ʼನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನೇರ ಪ್ರಸಾರ ಮಾಡಲಾಯಿತು, ಸುಮಾರು 10000 ಜನರು ಇದನ್ನು ವೀಕ್ಷಿಸಿದರು. ʻಪರಿಕ್ರಮʼದ ಮೂರು ಹಂತಗಳಲ್ಲಿ ಗುಜರಾತ್, ಮಹಾರಾಷ್ಟ್ರ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಡಿಯು ಮತ್ತು ಡಮನ್ ಸೇರಿದಂತೆ 15 ಪ್ರದೇಶಗಳನ್ನು ತಲುಪಲಾಯಿತು.

ಭೂಮಿಯ ಮೇಲಿನ ಮಾನವನ ಅಸ್ತಿತ್ವ ಮತ್ತು ಜೀವನಕ್ಕೆ ಆರೋಗ್ಯಕರ ಸಾಗರಗಳು ಮತ್ತು ಸಮುದ್ರಗಳು ಅತ್ಯಗತ್ಯ. ಸಾಗರಗಳೂ ಭೂಗ್ರಹದ 70 ಪ್ರತಿಶತವನ್ನು ಆವರಿಸಿವೆ. ಆಹಾರ, ಶಕ್ತಿ ಮತ್ತು ನೀರನ್ನು ಒದಗಿಸುತ್ತವೆ. ಜೀವನೋಪಾಯ, ಹವಾಮಾನ ಬದಲಾವಣೆ, ವಾಣಿಜ್ಯ ಮತ್ತು ಭದ್ರತೆಯಂತಹ ಉದಯೋನ್ಮುಖ ಸಂಕೀರ್ಣ ಮತ್ತು ಪರಸ್ಪರ ಸಂಪರ್ಕಿತ ಅಭಿವೃದ್ಧಿ ಸಮಸ್ಯೆಗಳಿಂದ ಅವು ದೊಡ್ಡ ಮಟ್ಟದಲ್ಲಿ ಪ್ರಭಾವಿತಗೊಳ್ಳುತ್ತವೆ. ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ ಮತ್ತು ಅದರ ಪರಿಣಾಮಗಳನ್ನು ಸುಧಾರಿಸುವಲ್ಲಿ ಸಾಗರಗಳು ಪ್ರಮುಖ ಪಾತ್ರವಹಿಸುತ್ತವೆ. ಹಿಂದೂ ಮಹಾಸಾಗರವು ಅದರ ಕರಾವಳಿ ರಾಜ್ಯಗಳ ಆರ್ಥಿಕತೆ, ಭದ್ರತೆ ಮತ್ತು ಜೀವನೋಪಾಯಕ್ಕೆ ಅತ್ಯಗತ್ಯವಾಗಿದೆ.

ದೇಶವು 8,118 ಕಿ.ಮೀ ಕರಾವಳಿಯನ್ನು ಹೊಂದಿದ್ದು, 9 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳು ಇದರ ಭಾಗವಾಗಿವೆ. ದೇಶದ ಕರಾವಳಿಯು 2.8 ದಶಲಕ್ಷ ಮೀನುಗಾರರಿಗೆ ಜೀವನೋಪಾಯದ ಬೆಂಬಲವನ್ನು ಒದಗಿಸುತ್ತದೆ. ಭಾರತವು ಜಾಗತಿಕ ಮೀನು ಉತ್ಪಾದನೆಯಲ್ಲಿ ಶೇ.8 ರಷ್ಟು ಪಾಲು ಹೊಂದಿದೆ ಮತ್ತು ವಿಶ್ವದ 3ನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ. ದೇಶದ ಒಟ್ಟು ಮೀನು ಉತ್ಪಾದನೆ 162.48 ಲಕ್ಷ ಟನ್ ಆಗಿದ್ದು, ಇದರಲ್ಲಿ 121.21 ಲಕ್ಷ ಟನ್ ಒಳನಾಡಿನಿಂದ ಮತ್ತು 41.27 ಲಕ್ಷ ಟನ್ ಸಮುದ್ರದಿಂದ ಬರುತ್ತದೆ. 2021-22ರಲ್ಲಿ ಮೀನುಗಾರಿಕೆ ರಫ್ತು ಮೌಲ್ಯ 57,586.48 ಕೋಟಿ ರೂ. ಇದ್ದು, ಈ ವಲಯವು ʻಜಿವಿಎʼಯಲ್ಲಿ ಸ್ಥಿರವಾದ ಬೆಳವಣಿಗೆಯ ದರವನ್ನು ಸೂಚಿಸುತ್ತದೆ. ಇದು ಕೃಷಿ ಜಿಡಿಪಿಯ ಶೇ.6.724 ಪಾಲನ್ನು ಹೊಂದಿದೆ ಮತ್ತು ಕೃಷಿ ರಫ್ತಿನಲ್ಲಿ ಸುಮಾರು ಶೇ.17 ಕೊಡುಗೆ ನೀಡುತ್ತದೆ. ಭಾರತದಲ್ಲಿ, ಮೀನುಗಾರಿಕೆಯು ಸಾಮಾನ್ಯವಾಗಿ ಮುಕ್ತ ಪ್ರವೇಶ ಮೀನುಗಾರಿಕೆಯಾಗಿದ್ದು, ಸರಕಾರವು ಹಲವು ವರ್ಷಗಳಿಂದ ಜಾರಿಗೊಳಿಸಿದ ವಿವಿಧ ಕಾಯಿದೆಗಳು ಮತ್ತು ನೀತಿಗಳ ಮೂಲಕ ಇದನ್ನು ನಿಯಂತ್ರಿಸಲಾಗುತ್ತದೆ.

Related News

spot_img

Revenue Alerts

spot_img

News

spot_img