ಆರ್‌ಇಐಟಿ: ರಿಯಲ್‌ ಎಸ್ಟೇಟ್‌ನಲ್ಲಿ ಸಣ್ಣ ಹೂಡಿಕೆ ಅವಕಾಶ

0
100

ಮ್ಯೂಚುವಲ್‌ ಫಂಡ್‌ನಲ್ಲಿ (ಎಂಎಫ್)‌ ಸಣ್ಣ ಮೊತ್ತದ ಹೂಡಿಕೆಯು ವೈವಿಧ್ಯಮಯ ಮತ್ತು ವೃತ್ತಿಪರವಾಗಿ ನಿರ್ವಹಿಸಲಾಗುವ ಸ್ವತ್ತನ್ನು ಪಡೆದುಕೊಳ್ಳಲು ಅವಕಾಶ ನೀಡುತ್ತದೆ. ಅದರಂತೆಯೇ ರಿಯಲ್‌ ಎಸ್ಟೇಟ್ ಇನ್ವೆಸ್ಟ್ಮೆಂಟ್‌ ಟ್ರಸ್ಟ್‌ (ಆರ್‌ಇಐಟಿ) ಕೂಡ ಗೃಹ ಸಾಲ ಮಾಡದೆಯೇ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಸಣ್ಣ ಮೊತ್ತದ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ.

ಆದಾಯವನ್ನು ತರಬಲ್ಲ ಸ್ವತ್ತನ್ನು ತಮ್ಮ ಪೋರ್ಟ್‌ಫೋಲಿಯೊದಲ್ಲಿ ಸಂಗ್ರಹಿಸಲು ರಿಯಲ್‌ ಎಸ್ಟೇಟ್‌ ಮಾಲೀಕರಿಗೆ ಆರ್‌ಇಐಟಿ ದಾರಿ ಮಾಡಿಕೊಡುತ್ತದೆ. ಜೊತೆಗೆ ಹೂಡಿಕೆದಾರರಿಗೆ ಈಕ್ವಿಟಿ ರೂಪದಲ್ಲಿ ರಿಯಲ್‌ ಎಸ್ಟೇಟ್‌ ಮಾಲೀಕತ್ವವನ್ನು ಒದಗಿಸುತ್ತದೆ. ಅಲ್ಲದೆ, ಸಾರ್ವಜನಿಕ ವ್ಯಾಪಾರ ಘಟಕಗಳಲ್ಲಿ ಹೂಡಿಕೆಯ ಸೌಕರ್ಯವನ್ನೂ ಹೂಡಿಕೆದಾರರಿಗೆ ಆರ್‌ಇಐಟಿ ನೀಡುತ್ತದೆ.

ರಿಸ್ಕ್ ಮ್ಯಾನೇಜ್ಮೆಂಟ್
ಮೂಲಭೂತವಾಗಿ ಸದೃಢವಾಗಿರುವ ಸಂಸ್ಥೆಗಳಲ್ಲೇ ಹೂಡಿಕೆ ಮಾಡುವ ಸಲುವಾಗಿ ಮ್ಯೂಚುವಲ್‌ ಫಂಡ್‌ಗಳನ್ನು ವೃತ್ತಿಪರ ಫಂಡ್‌ ಮ್ಯಾನೇಜರ್‌ಗಳು ನಿರ್ವಹಿಸುವಂತೆಯೇ ಆರ್‌ಇಐಟಿ ಕೂಡ ತನ್ನ ಪೋರ್ಟ್‌ಫೋಲಿಯೋದಲ್ಲಿ ಶೇ 80ರಷ್ಟು ಸ್ವತ್ತು ಹೊಂದಿವೆ ಮತ್ತು ಆದಾಯ ಸೃಷ್ಟಿಸುವ ರಿಯಲ್‌ ಎಸ್ಟೇಟ್‌ಗಳಲ್ಲಿ ಹೂಡಿಕೆ ಮಾಡುತ್ತಿರುವುದನ್ನು ಖಾತ್ರಿಪಡಿಸುವುದು ಕಡ್ಡಾಯವಾಗಿರುತ್ತದೆ.

ನಗದು ಹರಿವು
ಹೂಡಿಕೆದಾರರಿಗೆ ನಗದು ಹರಿವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಆರ್ಇಐಟಿ ಗಳು ಗಳಿಕೆಯ ಬಹುಪಾಲನ್ನು ಯುನಿಟ್‌ ಹೋಲ್ಡರ್‌ಗಳಿಗೆ ವಿತರಿಸಬೇಕು. ಉದಾಹರಣೆಗೆ, ಭಾರತ ಸರ್ಕಾರದ ನಿಯಮದ ಅನ್ವಯ, ವಿತರಿಸಬಹುದಾದ ನಗದು ಹರಿವಿನ ಶೇ 90ರಷ್ಟು ಪಾಲನ್ನು ಹೂಡಿಕೆದಾರರಿಗೆ ಪಾವತಿಸಬೇಕಿರುತ್ತದೆ.

ಅಧಿಕ ಬೆಳವಣಿಗೆ
ಅಮೆರಿಕದಲ್ಲಿ 1960ರ ದಶಕದಲ್ಲಿ ಮೊದಲ ಬಾರಿ ಆರ್‌ಇಐಟಿ ಪರಿಚಯಿಸಿದ ನಂತರ, ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಈ ಪರ್ಯಾಯ ಮಾರ್ಗವನ್ನು ಜಾಗತಿಕವಾಗಿ ಒಪ್ಪಿಕೊಳ್ಳಲಾಗಿದೆ ಮತ್ತು ಜಾಗತಿಕ ಆರ್‌ಇಐಟಿ ಮೌಲ್ಯವು ಅಂದಾಜು ಎರಡು ಲಕ್ಷ ಕೋಟಿ ಅಮೆರಿಕನ್‌ ಡಾಲರ್‌ಗೆ ತಲುಪಿದೆ.

ಲಿಕ್ವಿಡಿಟಿ
ಆರ್‌ಇಐಟಿ ಗಳು ರಿಯಲ್‌ ಎಸ್ಟೇಟ್‌ ಹೂಡಿಕೆಯ ಪ್ರಯೋಜನಗಳೊಂದಿಗೆ ಐಪಿಒಗಳ ಪಟ್ಟಿಯಲ್ಲಿರುವ ಸಾರ್ವಜನಿಕ ವ್ಯಾಪಾರಿ ಘಟಕಗಳಲ್ಲೂ ಹೂಡಿಕೆ ಮಾಡುವ ಅವಕಾಶಗಳನ್ನು ನೀಡುತ್ತದೆ. ಒಮ್ಮೆ ಕಂಪನಿಗಳು ಐಪಿಒ ಪಟ್ಟಿಯಲ್ಲಿ ಸೇರ್ಪಡೆಗೊಂಡ ನಂತರ ಅವು ಹೊಸ ಸ್ವತ್ತುಗಳನ್ನು ಸೃಷ್ಟಿಸಲು ಮಾರುಕಟ್ಟೆಯಲ್ಲಿ ಶಾಶ್ವತ ಬಂಡವಾಳ ಎತ್ತುವ ವಾಹಕಗಳಾಗಿರುತ್ತವೆ.

ಇತರ ಲಾಭಗಳು
ಆರ್ಇಐಟಿ ಅನ್ನು ವಿಶ್ವದಾದ್ಯಂತ ಜಾಗತಿಕ ಸಂಸ್ಥೆಗಳು ಒಪ್ಪಿಕೊಂಡಿವೆ ಮತ್ತು ವೈಯಕ್ತಿಕ ಹೂಡಿಕೆದಾರರೂ ಅದನ್ನು ಒಂದು ಉತ್ಪನ್ನ ಎಂದು ಪರಿಗಣಿಸಿದ್ದಾರೆ. ಆರ್ಇಐಟಿ ಪ್ರಮುಖ ಪ್ರಯೋಜನಗಳೆಂದರೆ,
ಲಿಕ್ವಿಡಿಟಿ
ಪಾರದರ್ಶಕತೆ
ವೈವಿಧ್ಯ
ಲಾಭಾಂಶ ಹಂಚಿಕೆ
ದುಡಿಯುವ ಸಾಮರ್ಥ್ಯ