ಖಚಿತ, ವಿಶ್ವಾಸಾರ್ಹ ಮತ್ತು ಹೆಚ್ಚಿನ ಆದಾಯದ ಕಾರಣಕ್ಕೆ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವುದು ಮತ್ತು ಆಸ್ತಿಯನ್ನು ಖರೀದಿಸುವುದು ಹೂಡಿಕೆಯ ಅತ್ಯುತ್ತಮ ವಿಧಾನವೆಂದು ಪರಿಗಣಿಸಲಾಗುತ್ತದೆ. ಭೌತಿಕ ಆಸ್ತಿಯಾಗಿರುವುದರಿಂದ, ಇದು ದೀರ್ಘಾವಧಿಯ ಭದ್ರತೆ ಮತ್ತು ಬಾಡಿಗೆ ಆದಾಯದ ಮೂಲಕ ನಿಯಮಿತ ನಗದು ಹರಿವಿನ ಖಾತರಿಯನ್ನು ಒದಗಿಸುತ್ತದೆ. ಕಾಲಾಂತರದಲ್ಲಿ ರಿಯಲ್ ಎಸ್ಟೇಟ್ ಮೌಲ್ಯ ಮತ್ತು ಬಾಡಿಗೆಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಆಸ್ತಿಯನ್ನು ಹೆಚ್ಚು ಕಾಲ ಉಳಿಸಿಕೊಂಡಂತೆ ಅದನ್ನು ಮಾರಾಟ ಮಾಡುವ ಸಮಯ ಬಂದಾಗ ಹೆಚ್ಚಿನ ಗಳಿಕೆಯನ್ನು ನೀಡುತ್ತದೆ ಮತ್ತು ಯೋಜಿತ ಹೂಡಿಕೆಯಿಂದ ಅತ್ಯುತ್ತಮ ಲಾಭ ಸಿಗುತ್ತದೆ.
ರಿಯಲ್ ಎಸ್ಟೇಟ್ ಅನ್ನು ಮುಖ್ಯವಾಗಿ ವಾಣಿಜ್ಯ ಮತ್ತು ವಸತಿ ಎಂದು ವರ್ಗೀಕರಿಸಲಾಗುತ್ತದೆ. ವಸತಿ ರಿಯಲ್ ಎಸ್ಟೇಟ್ನಲ್ಲಿ ಜನರು ವಾಸಿಸುವ ಮನೆಗಳು, ವಸತಿ ಸಮುಚ್ಚಯಗಳು, ಅಪಾರ್ಟ್ಮೆಂಟ್, ಫ್ಲ್ಯಾಟ್ಗಳನ್ನು ಗುರುತಿಸಲಾಗುತ್ತದೆ. ಕಮರ್ಷಿಯಲ್ ರಿಯಲ್ ಎಸ್ಟೇಟ್ನಲ್ಲಿ ವಾಣಿಜ್ಯ ಉದ್ದೇಶದ ಸ್ವತ್ತು, ಕಚೇರಿ, ಗ್ಯಾರೇಜ್, ಹೋಟೆಲ್, ಕೈಗಾರಿಕೆ, ಮಾಲ್ಗಳು, ಮಲ್ಟಿಪ್ಲೆಕ್ಸ್ಗಳು, ಮಳಿಗೆಗಳು, ಸಮುದಾಯ ಉದ್ಯಾನಗಳನ್ನು ಗುರುತಿಸಲಾಗುತ್ತದೆ. ವಾಣಿಜ್ಯ ಸ್ವತ್ತುಗಳು ಇತ್ತೀಚೆಗೆ ಭಾರತೀಯರನ್ನು ಹೆಚ್ಚು ಆಕರ್ಷಿಸುತ್ತಿದೆ.
ಹೆಚ್ಚಿನ ಆದಾಯ
ದೀರ್ಘಾವಧಿಯಲ್ಲಿ ವಾಣಿಜ್ಯ ಸ್ವತ್ತುಗಳು ಅತ್ಯುತ್ತಮ ಆದಾಯವನ್ನು ತಂದುಕೊಡುತ್ತವೆ. ಹೆಚ್ಚಿನ ಬೇಡಿಕೆಯ ಕಾರಣಕ್ಕೆ ಎ-ದರ್ಜೆ ಕಚೇರಿ ಸ್ವತ್ತುಗಳು ಈಗಾಗಲೇ ಹೆಚ್ಚಿನ ಆದಾಯ ನೀಡಲು ಆರಂಭಿಸಿವೆ. ವಸತಿ ಕ್ಷೇತ್ರ ಈಗಷ್ಟೇ ಸಾಂಕ್ರಾಮಿಕದ ಹೊಡೆತದಿಂದ ಚೇತರಿಸಿಕೊಳ್ಳುತ್ತಿವೆ. ವಸತಿ ಸ್ವತ್ತುಗಳ ನಿರೀಕ್ಷಿತ ಆದಾಯ ಶೇ 3-4ರಷ್ಟು ಆಗಿದ್ದರೆ, ವಾಣಿಜ್ಯ ಸ್ವತ್ತುಗಳಲ್ಲಿ ಇದು ಶೇ 8-10. ಭಾರತೀಯ ಆಸ್ತಿ ಮಾರುಕಟ್ಟೆಗೆ 2022ರ ಎರಡನೇ ತ್ರೈಮಾಸಿಕವು ಅತ್ಯುತ್ತಮವಾಗಿ ಪರಿಣಮಿಸಿದೆ. 2022-27ರ ಅವಧಿಯಲ್ಲಿ ದೇಶದ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಶೇ 13ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ ಎಂದು ವಾರ್ಷಿಕ ವರದಿ ತಿಳಿಸಿದೆ.
ಹೆಚ್ಚುತ್ತಿರುವ ಬೇಡಿಕೆ
ದೊಡ್ಡ ಕುಟುಂಬ, ಚಿಕ್ಕ ಮನೆ, ಅಸಮರ್ಪಕ ಅಂತರ್ಜಾಲ ಸಂಪರ್ಕ, ದುರ್ಬಲ ಡಿಜಿಟಲ್ ವೇದಿಕೆಗಳ ಕಾರಣಕ್ಕೆ ಹೆಚ್ಚಿನ ಜನರು ಕಚೇರಿಗೆ ಮರಳಲು ಆಸಕ್ತಿ ತೋರುತ್ತಿದ್ದಾರೆ. ಹೊಸ ಉದ್ಯಮಗಳ ಹೆಚ್ಚಳವೂ ವಾಣಿಜ್ಯ ಸ್ವತ್ತುಗಳ ಬೇಡಿಕೆ ಹೆಚ್ಚಿಸಿವೆ. ಮೂಲಗಳ ಪ್ರಕಾರ ಲಾಕ್ಡೌನ್ ಘೋಷಣೆ ಆದ ನಂತರ ಅಂದಾಜು 16,000 ಹೊಸ ಕಂಪನಿಗಳು ನೋಂದಣಿ ಆಗಿವೆ. ಸ್ಟಾರ್ಟ್-ಅಪ್ಗಳ ಜೊತೆಗೆ, ಬಹುರಾಷ್ಟ್ರೀಯ ಕಂಪನಿಗಳು ಭಾರತವನ್ನು, ಅದರಲ್ಲೂ ಮೊದಲ ಹಂತದ ನಗರಗಳನ್ನು ದತ್ತಾಂಶ ಕೇಂದ್ರಗಳ ಕಚೇರಿಗಳ ಹಬ್ ಆಗಿ ನೋಡುತ್ತಿವೆ.
ನಿರಂತರ-ತ್ವರಿತ ನಗದು ಹರಿವು
ವಾಣಿಜ್ಯ ಸ್ವತ್ತುಗಳ ಗುತ್ತಿಗೆ ಅವಧಿಯು 2-10 ವರ್ಷ. ಹೀಗೆ ದೀರ್ಘಾವಧಿ ಒಪ್ಪಂದದಿಂದಾಗಿ, ಹಣದ ನಿರಂತರ ಹರಿವು ಇರುತ್ತದೆ. ಮತ್ತೆ ಮತ್ತೆ ಬಾಡಿಗೆದಾರರನ್ನು ಅರಸುವ ತೊಂದರೆ ತಪ್ಪುತ್ತದೆ. ವಸತಿ ಸ್ವತ್ತುಗಳ ಸಾಮಾನ್ಯ ಬಾಡಿಗೆ ಒಪ್ಪಂದ 11 ತಿಂಗಳು ಮಾತ್ರ.
ನಿರ್ವಹಣೆ ಸುಲಭ
ಆಕರ್ಷಕ ಜೀವನ ಶೈಲಿ ಒದಗಿಸಲು ವಸತಿ ಸ್ವತ್ತುಗಳಿಗೆ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಆದರೆ ವಾಣಿಜ್ಯ ಸ್ವತ್ತುಗಳ ನಿರ್ವಹಣೆ ಕಡಿಮೆ ವೆಚ್ಚದಾಯಕ. ಕಚೇರಿ ಅಂದಗೊಳಿಸುವ ಕಾರ್ಯವೂ ಬಾಡಿಗೆದಾರರದ್ದೇ ಆಗಿರುತ್ತದೆ.



