ಮಂಡ್ಯ: ಎಂಟು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್ ವೇ ಅನ್ನು ಮದ್ದೂರು ತಾಲೂಕು ಗೆಜ್ಜಲಗೆರೆ ಬಳಿ ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ನರೇಂದ್ರ ಮೋದಿ ಭಾನುವಾರ ಒಂದು ಮುಕ್ಕಾಲು ಕಿ.ಮೀ ರೋಡ್ ಶೋ ನಡೆಸಲಿದ್ದಾರೆ ಎಂದು ಸಚಿವ ಎಸ್. ಟಿ.ಸೋಮಶೇಖರ್ ಮತ್ತು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿರುವ ಮೋದಿಯವರು ಬಳಿಕ ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬರಲಿದ್ದಾರೆ.
ನಗರದ ಪ್ರವಾಸಿ ಮಂದಿರಕ್ಕೆ ಬೆಳಗ್ಗೆ ಸುಮಾರು 11.35ಕ್ಕೆ ಆಗಮಿಸಲಿದ್ದಾರೆ. ರಸ್ತೆಯ ಎರಡೂ ಕಡೆಗಳಲ್ಲೂ ಸ್ಟೀಲ್ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ಎರಡೂ ಬದಿಯಲ್ಲೂ ಜನರು ನಿಂತು ಮೋದಿಯವರನ್ನು ನೋಡಲಿದ್ದಾರೆ. ಮಂಡ್ಯ ವಿಧಾನ ಸಭಾ ಕ್ಷೇತ್ರದಿಂದ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ರಸ್ತೆ ಬದಿಯಲ್ಲಿ ಮೋದಿಯವರನ್ನು ವೀಕ್ಷಿಸಲಿದ್ದಾರೆ.ಇದೇ ವೇದಿಕೆಯಲ್ಲಿ ದಶಪಥ ಹೆದ್ದಾರಿ ಲೋಕಾರ್ಪಣೆ ನಡೆಯಲಿದೆ. ಮೈಸೂರು- ಕುಶಾಲನಗರದವರೆಗಿನ 3,530 ಕೋಟಿ ರೂ. ಕಾಮಗಾರಿ ವೆಚ್ಚದ 4 ಪಥದ ರಾಷ್ಟ್ರೀಯ ಹೆದ್ದಾರಿಯ ಭೂಮಿಪೂಜೆಯೂ ಇಲ್ಲಿ ನಡೆಯಲಿದೆ.ಮಂಡ್ಯ ನಗರಕ್ಕೆ ಕಾವೇರಿ ನೀರು ಪೂರೈಕೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಂಡ್ಯಕ್ಕೆ ತಾಯಿ ಮಗುವಿನ ಆಸ್ಪತ್ರೆಯನ್ನೂ ಕೊಟ್ಟಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿ ಉದ್ಘಾಟನೆ ನೆರವೇರಿಸುತ್ತಾರೆ. ಅಲ್ಲಿಂದ ಮೈಸೂರು, ಬಳಿಕ ಹುಬ್ಬಳ್ಳಿಗೆ ತೆರಳುವರು ಎಸ್. ಟಿ.ಸೋಮಶೇಖರ್ ಮತ್ತು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮಂಡ್ಯದ ಡಿಸಿಸಿ ಬ್ಯಾಂಕ್ ಗೆ ಶೂನ್ಯ ಬಡ್ಡಿ ದರದಲ್ಲಿ 1004 ಕೋಟಿ ರೂ.ಗಳನ್ನು ಸಾಲ ನೀಡುವ ಗುರಿ ನೀಡಲಾಗಿತ್ತು. ಮಾ.31ರ ಅಂತ್ಯಕ್ಕೆ ಪೂರ್ಣಮಾಡಲಾಗುವುದು ಎಂದು ಡಿಸಿಸಿ ಬ್ಯಾಂಕ್ ಎಂಡಿ ಹಾಗೂ ಅಧ್ಯಕ್ಷರು ತಿಳಿಸಿದ್ದಾರೆ. ಇದರಲ್ಲಿ ಹಲವು ಮಂದಿ ಸಾಲ ಪಡೆದುಕೊಂಡಿದ್ದು, ಶೇ. 93 ರಷ್ಟು ಜನ ಸಾಲ ಮರುಪಾವತಿ ಮಾಡುತ್ತಿದ್ದಾರೆ ಎಂದರು.ಎಂಡಿಸಿಸಿ ಬ್ಯಾಂಕ್‌ನಿಂದ ಈವರೆಗೆ 802 ಕೋಟಿ ರೂ. ಸಾಲ ವಿತರಿಸಲಾಗಿದೆ. ಉಳಿದ ಸಾಲವನ್ನು ಮಾ.31ರೊಳಗೆ ವಿತರಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. ಬ್ಯಾಂಕಿನ ಸಾಲ ವಸೂಲಾತಿ ಪ್ರಗತಿಯೂ ಶೇ.93ರಷ್ಟಿದೆ, ಎಂದು ವಿವರಿಸಿದರು.ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ತಾಲೂಕು ಅಧ್ಯಕ್ಷ ಪಿ.ಸಿ.ರಘು, ಮುಖಂಡರಾದ ಚಂದಗಾಲು ಶಿವಣ್ಣ, ಸಿದ್ದರಾಮಯ್ಯ, ಡಾ.ಇಂದ್ರೇಶ್, ಸಚ್ಚಿದಾನಂದ, ಮಹೇಶ್ ಸೇರಿದಂತೆ ಇತರರು ಇದ್ದರು.
ಪ್ರಧಾನಿ ಮೋದಿ ಭೇಟಿ ಕಾರ್ಯಕ್ರಮ ವಿವರ:
*ಮಾ.12 ರ ಬೆಳಗ್ಗೆ ಮೈಸೂರು ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅವರು ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಬಂದಿಳಿಯುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
*ಬೆಳಗ್ಗೆ 11:35 ಕ್ಕೆ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಮೋದಿ ಅವರು ಬಂದಿಳಿಯಲಿದ್ದಾರೆ. ಬಳಿಕ ಪ್ರವಾಸಿ ಮಂದಿರದ ವೃತ್ತದಿಂದ ರೋಡ್ ಶೋ ಆರಂಭವಾಗಿ
*ನಂದಾ ಚಿತ್ರಮಂದಿರದ ವೃತ್ತದವರೆಗೂ ಸುಮಾರು 1.8 ಕಿ.ಮೀ ರೋಡ್ ಶೋ ನಡೆಯಲಿದೆ. ರೋಡ್ ಶೋ ಬಳಿಕ ಅಮರಾವತಿ ಹೋಟೆಲ್ ಸಮೀಪದ ಬೆಂ-ಮೈ ಹೈವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ.
ಹೋಟೆಲ್ ಸ್ವಲ್ಪ ದೂರದಲ್ಲೇ ನೂತನ ಹೈವೆಗೆ ಮೋದಿ ವಿದ್ಯುಕ್ತ ಚಾಲನೇ ನೀಡಲಿದ್ದಾರೆ. ಅಲ್ಲಿಂದಲೆ 50 ಮೀಟರ್ ನಡೆದು ಕೆಲಕಾಲ ಹೈವೆಯನ್ನು ವೀಕ್ಷಿಸಲಿದ್ದಾರೆ.
*ನೂತನ ಹೆದ್ದಾರಿಯಲ್ಲಿ ನಮೋಗೆ ಕಲಾತಂಡಗಳು ಸ್ವಾಗತ ಕೋರಲಿವೆ.ಚಾಲನೆ ನೀಡಿದ ಬಳಿಕ ಕಲಾವಿದರಿಗೆ ಅಭಿನಂದನೆ ತಿಳಿಸಿ ಮೋದಿಯವರು ವೇದಿಕೆ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ.
12:05 ಕ್ಕೆ ಸಾರ್ವಜನಿಕ ಕಾರ್ಯಕ್ರಮ ಗೆಜ್ಜಲಗೆರೆ ಕಾಲೋನಿ ಬಳಿ ನಡೆಯಲಿದೆ.
* ಮೈಸೂರು-ಕುಶಾಲ ನಗರ ಹೆದ್ದಾರಿ ಭೂಮಿಪೂಜೆ ಮಾಡಲಿದ್ದಾರೆ. ವಿವಿಧ 5700 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೇ ನೀಡಲಿದ್ದಾರೆ.
*ಮಂಡ್ಯ ನಗರದ 137ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಕಾಮಗಾರಿ ಲೋಕಾರ್ಪಣೆಯಾಗಲಿದೆ. ಮಂಡ್ಯಕ್ಕೆ ನೀಡಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.
*ವೇದಿಕೆ ಕಾರ್ಯಕ್ರಮದಲ್ಲಿ 3 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ. ರೋಡ್ ಶೋಗೆ 40 ಸಾವಿರ ಜನರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಬರಲು ಮತ್ತು ವಾಪಾಸ್ ತೆರಳಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರ್ಯಕ್ರಮ ಮುಗಿದ ಬಳಿಕ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿ- ಧಾರವಾಡಕ್ಕೆ ನರೇಂದ್ರ ಮೋದಿ ಪ್ರಯಾಣ ಬೆಳೆಸಲಿದ್ದಾರೆ.