ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವ ಹರ್ದೀಪ್ ಎಸ್. ಪುರಿ ಅವರು, “ಹವಾಮಾನ ಬದಲಾವಣೆ, ಭವಿಷ್ಯದ ಕಾರ್ಯಗಳು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರ ಪಾತ್ರ ಇತರೆ ವಿಷಯಗಳ ಬಗ್ಗೆ ಯುವಜನತೆ ತಮ್ಮ ಕಾಳಜಿ ಹಂಚಿಕೊಳ್ಳುವ ಜತೆಗೆ ಹೆಚ್ಚಿಸಿಕೊಳ್ಳಲು ಸಮ್ಮೇಳನವು ವೇದಿಕೆಯನ್ನು ಒದಗಿಸಿರುವುದು ಉತ್ತಮವಾಗಿದೆ,ʼʼ ಎಂದು ಶ್ಲಾಘಿಸಿದರು. ದೇಶದ ಸ್ಟಾರ್ಟ್‌ಅಪ್ ವಲಯದಲ್ಲಿನ ಕ್ರಾಂತಿಯು ಈತ್ತೀಚಿನ ವರ್ಷಗಳಲ್ಲಿ ದೇಶದ ಯುವಜನತೆಯ ಉದ್ಯಮಶೀಲತೆ ಸಂಸ್ಕೃತಿಗೆ ಪ್ರೇರಣೆ ನೀಡಿರುವುದಕ್ಕೆ ಸಾಕ್ಷಿಯಂತಿದೆ.
ಯುವಜನತೆಯು ಅಭಿವೃದ್ಧಿಯ ನೇತೃತ್ವ ವಹಿಸುವ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು, “ಸರ್ಕಾರವು ಯುವಜನರ ಅಭಿವೃದ್ಧಿಗಾಗಿ ವಾರ್ಷಿಕವಾಗಿ 90,000 ಕೋಟಿ ರೂ. ವೆಚ್ಚ ಮಾಡುತ್ತಿದೆ,ʼʼ ಎಂದರು. ಇದೇ ವೇಳೆ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಯುವಜನರಿಂದ ರೂಪುಗೊಂಡ ಆವಿಷ್ಕಾರಗಳನ್ನು ಒಳಗೊಂಡ ಹಲವು ಜ್ಞಾನಾಧಾರಿತ ಪ್ರಯೋಗಳನ್ನು ಅನಾವರಣಗೊಳಿಸಿದರು. ‘ಎನ್‌ವೈಸಿ- 2023’ ಸಮ್ಮೇಳನವನ್ನು ಆಯೋಜಿಸುವಲ್ಲಿ ಸ್ಮಾರ್ಟ್‌ಸಿಟೀಸ್ ಮಿಷನ್, ಎನ್‌ಐಯುಎ ಹಾಗೂ ಯುವ ಶಕ್ತಿಯ ಸಂಘಟಿತ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಯುವಜನತೆಯ ಪ್ರಯತ್ನ, ಕೊಡುಗೆಯ ಫಲವಾಗಿ 2047ರ ಹೊತ್ತಿಗೆ ಭಾರತವು ಎಲ್ಲ ಕ್ಷೇತ್ರಗಳಲ್ಲೂ ವಿಶ್ವಕ್ಕೆ ಗುರುವಾಗಲಿದೆ,ʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತವು ಜಿ- 20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆಯು (ಎನ್‌ಐಯುಎ) ವಸತಿ ಹಾಗೂ ನಗರಾಭಿವೃದ್ಧಿ ವ್ಯವಹಾರ ಸಚಿವಾಲಯದ ಸ್ಮಾರ್ಟ್‌ಸಿಟೀಸ್ ಮಿಷನ್ ಹಾಗೂ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎನ್‌ವೈಸಿ- 2023 ಸಮ್ಮೇಳನ ಉದ್ದೇಶಿಸಿ ಅವರು ಮಾತನಾಡಿದರು. “ಸಮ್ಮೇಳನವು ಯು20 ಕುರಿತು ಚರ್ಚಿಸಲು ಹಾಗೂ ವೈ20 ಆದ್ಯತೆ ಕ್ಷೇತ್ರಗಳ ಬಗ್ಗೆ ಸಮಾಲೋಚಿಸಲು ಯುವಜನತೆಯನ್ನು ಒಟ್ಟುಗೂಡಿಸಿದ್ದು, ಆ ಮೂಲಕ ಭವಿಷ್ಯದ ಉಜ್ವಲ ನಾಯಕರನ್ನು ರೂಪಿಸಲು ವೇದಿಕೆ ಕಲ್ಪಿಸಿದೆ,ʼʼ ಎಂದು ಬಣ್ಣಿಸಿದರು.
ಅನ್ವೇಷಣಾ ಸಂಸ್ಕೃತಿಯ ಬಗ್ಗೆ ಪ್ರಸ್ತಾಪಿಸಿದ ಕೇಂದ್ರ ಸಚಿವರು, “ಈಚಿನ ವರ್ಷಗಳಲ್ಲಿ ದೇಶದಲ್ಲಿನ ಸ್ಟಾರ್ಟ್‌ಅಪ್ ಕ್ರಾಂತಿಯು ದೇಶದ ಯುವ ಜನತೆ ಉದ್ಯಮಶೀಲತೆ ಮನೋಭಾವಕ್ಕೆ ಸಾಕ್ಷ್ಯವೆನಿಸಿದೆ,ʼʼ ಎಂದರು. ಅಭಿವೃದ್ಧಿ ಪಥವನ್ನು ಯುವಜನತೆ ಮುನ್ನಡೆಸುತ್ತಿರುವ ಬಗ್ಗೆ ಉಲ್ಲೇಖಿಸಿದ ಅವರು, “ಸರ್ಕಾರವು ಯುಜನತೆಯ ಅಭಿವೃದ್ಧಿಗೆ ಪೂರಕವಾದ ನಾನಾ ಕಾರ್ಯಕ್ರಮಗಳಿಗಾಗಿ ವಾರ್ಷಿಕವಾಗಿ 90,000 ಕೋಟಿ ರೂ. ವಿನಿಯೋಗಿಸುತ್ತಿದೆ,ʼʼ ಎಂದು ಹೇಳಿದರು.
ಇದಕ್ಕೂ ಮೊದಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಖಾತೆ ರಾಜ್ಯ ಸಚಿವ ಶ್ರೀ ಕೌಶಲ್ ಕಿಶೋರ್ ಮಾತನಾಡಿ, ʼನಶೆಮುಕ್ತ ಭಾರತʼ ನಿರ್ಮಾಣ ನಿಟ್ಟಿನಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಪ್ರಸ್ತಾಪಿಸಿದರು. ಹಾಗೆಯೇ ದೇಶದ ಪ್ರಗತಿಯ ಯಶೋಗಾಥೆಯಲ್ಲಿ ʼಯುವಶಕ್ತಿʼ ಸಾಮರ್ಥ್ಯದ ಮಹತ್ವಪೂರ್ಣ ಕೊಡುಗೆ ಇದೆ ಎಂದು ಒತ್ತಿ ಹೇಳಿದರು. ಸಮ್ಮೆಳನದಲ್ಲಿ ಜಂಟಿ ಕಾರ್ಯದರ್ಶಿ ಹಾಗೂ ಮಿಷನ್ ನಿರ್ದೇಶಕ (ಎಸ್‌ಸಿಎಂ) ಶ್ರೀ ಕುನಾಲ್ ಕುಮಾರ್, ಎನ್‌ಐಯುಎ ನಿದೇಶಕ ಹಿತೇಶ್ ವೈದ್ಯ, ವರ್ಚ್ಯುವಲ್ ಆಗಿ ಪಾಲ್ಗೊಂಡಿದ್ದ ಯುವಜನ ವ್ಯವಹಾರ ಇಲಾಖೆ ಕಾಯದರ್ಶಿ ಮೀತಾ ರಾಜೀವಲೋಚನ, ಯು20 ಶೆರ್ಪಾ ಸಭೆಯ ಶ್ರೀ ಪ್ರವೀಣ್ ಚೌಧರಿ ಹಾಗೂ ವೈ20 ಸಚಿವಾಲಯದ ಅಧ್ಯಕ್ಷ ಶ್ರೀ ಅನ್ಮೋಲ್ ಸೋವಿಟ್ ಪಾಲ್ಗೊಂಡಿದ್ದರು.
ಎನ್‌ಐಯುಎ- ಎನ್‌ಎಂಸಿಜಿ ವಿದ್ಯಾಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಹಾಗೆಯೇ ʼಅಸಮಾನ ಜಗತ್ತಿನಲ್ಲಿ ಸಮಾನ ಅವಕಾಶ, ಭವಿಷ್ಯ ಸೃಷ್ಟಿʼ ಹಾಗೂ ‘ಯುವಜನತೆಯ ಪಾಲ್ಗೊಳ್ಳುವಿಕೆ ಹೆಚ್ಚಿಸುವಲ್ಲಿ ಮಾಧ್ಯಮಗಳ ಪಾತ್ರʼ ವಿಷಯ ಕುರಿತಂತೆ ನಡೆದ ಸಿಪಿಐಎನ್ ಸಂವಾದದಲ್ಲಿ ಹಲವು ಗಣ್ಯರು, ನಾನಾ ಸಂಸ್ಥೆಗಳು ಹಾಗೂ ಮಾಧ್ಯಮಗಳಲ್ಲಿನ ಯುವ ಜನತೆ ಪಾಲ್ಗೊಂಡಿದ್ದರು.
ಸಮ್ಮೇಳನದ ಭಾಗವಾಗಿ ನಡೆದ ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆ, ಸಂವಾದ, ಹಲವಾರು ವಿಚಾರಮಂಥನ ಗೋಷ್ಠಿಗಳ ಮೂಲಕ ಯುವಜನತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಅರ್ಥೈಸಿಕೊಳ್ಳಲು ನೆರವಾದವು. ರಾಷ್ಟ್ರ ಮಟ್ಟದ ಈ ಸಮ್ಮೇಳನವು ದೇಶದ ಎಲ್ಲಾ ಭಾಗದ ವಿದ್ಯಾರ್ಥಿಗಳು, ಯುವ ವೃತ್ತಿಪರರು, ತಜ್ಞರು ಹಾಗೂ ಅನ್ವೇಷಕರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು. ಆ ಮೂಲಕ ಭಾರತದ ನಗರಗಳ ಕುರಿತಂತೆ ಸಹ ಸೃಷ್ಟಿ, ಸಹಭಾಗಿತ್ವ ಹಾಗೂ ಸಂಪರ್ಕಕ್ಕೆ ನೆರವಾಗುವ ಜತೆಗೆ ಮುನ್ನಡೆಸಿಕೊಂಡು ಹೋಗಲು ಸಹಕಾರಿಯಾಯಿತು.