ಬೆಂಗಳೂರು, ಮಾ. 06 : ಸಾಮಾನ್ಯವಾಗಿ ಮಹಿಳೆಯರಿಗೆ ಚಿನ್ನದ ಮೇಲಿನ ಮೋಹ ಹೆಚ್ಚಾಗಿರುತ್ತದೆ. ಹಣ ಉಳಿತಾಯ ಮಾಡಬೇಕು. ಉಳಿತಾಯದ ಹಣದಿಂದ ತರಹೇವಾರಿ ಚಿನ್ನಾಭರಣವನ್ನು ಖರೀದಿಸಬೇಕು ಎಂಬುದು ಮಹಿಳೆಯರ ಮಹದಾಸೆ. ಸದಾ ಚಿನ್ನವನ್ನು ಖರೀದಿಸುವ ಆಸೆಯನ್ನೇ ತೋರಿಸುತ್ತಾರೆ. ಆದರೆ, ಇದೀಗ ವರದಿಯೊಂದರ ಪ್ರಕಾರ ಮಹಿಳೆಯರು ಚಿನ್ನದ ಮೇಲಿನ ಮೋಹಕ್ಕಿಂತಲೂ ಭೂಮಿಯನ್ನು ಖರೀದಿಸಲು ಮುಂದಾಗಿದ್ದಾರಂತೆ. ಬನ್ನಿ ಹಾಗಿದ್ದರೆ, ಯಾವುದು ಆ ವರದಿ.> ವರದಿಯ ಪ್ರಕಾರ ಸರ್ವೇಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳೋಣ.
ಅನರಾಕ್ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ ಈ ವಿಚಾರ ಬಹಿರಂಗವಾಗಿದೆ. ಮಹಿಳೆಯರ ಪೈಕಿ ಶೇ. 65 ರಷ್ಟು ಮಂದಿ ಈಗ ಚಿನ್ನಕ್ಕಿಂದಲೂ ರಿಯಲ್ ಎಸ್ಟೇಟ್ ಆಸ್ತಿಗಳ ಮೇಲೆ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿದ್ದಾರಂತೆ. ಈ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವವರ ಮಹಿಳೆಯರ ಪ್ರಮಾಣ ಕಡಿಮೆಯಾಗಿದೆ. ಶೇ. 8ರಷ್ಟು ಮಹಿಳೆಯರು ಮಾತ್ರವೇ ಚಿನ್ನ ಖರೀದಿಸಲು ಇಚ್ಛಿಸಿದ್ದಾರೆ ಎಂದು ಸರ್ವೇ ಪ್ರಕಾರ ತಿಳಿದು ಬಂದಿದೆ. ಇನ್ನು ಮಹಿಳೆಯರಲ್ಲಿ ಶೇ. 20ರಷ್ಟು ಮಂದಿ ಷೇರುಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ.
ಅನರಾಕ್ ಸಂಸ್ಥೆ ಒಟ್ಟು 5,500 ಮಂದಿಯಿಂದ ಸರ್ವೇ ನಡೆಸಲು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಮೀಕ್ಷೆಯಲ್ಲಿ ತೊಡಗಿರುವ ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಅರ್ಧದಷ್ಟು ಮಂದಿ ಮಹಿಳೆಯರು ಭೂಮಿ ಮೇಲೆ ಹೂಡಿಕೆ ಮಾಡಲು ಇಚ್ಛಿಸಿದ್ದಾರಂತೆ. ಮಹಿಳೆಯರ ಪೈಕಿ ಶೇ. 7ರಷ್ಟು ಮಂದಿ ಮಾತ್ರ ಕೆಲ ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡಲು ಬಯಸಿದ್ದಾರೆ. ಈ ಮೂಲಕ ಕಳೆದ ಒಂದು ದಶಕದಲ್ಲಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಲು ಮಹಿಳೆಯರ ವರ್ಗ ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದಾರೆ.
ಅನಾರಕ್ ವರದಿ ಪ್ರಕಾರ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಎಷ್ಟು ಬೆಲೆಯ ಮನೆಯನ್ನು ಬಯಸುತ್ತಿದ್ದಾರೆ ಎಂಬ ಬಗ್ಗೆಯೂ ಅಭಿಪ್ರಾಯವನ್ನು ಕೂಡ ಕಲೆ ಹಾಕಲಾಗಿದೆ. ಶೇ. 83 ರಷ್ಟು ಮಹಿಳೆಯರು 45 ಲಕ್ಷ ರೂಪಾಯಿಗಿಂತ ಅಧಿಕ ಬೆಲೆಯ ಮನೆಗಳನ್ನು ಖರೀದಿಸಲು ಬಯಸುತ್ತಿದ್ದಾರೆ. ಇನ್ನು ಶೇ.17 ರಷ್ಟು ಮಹಿಳೆಯರು 45 ಲಕ್ಷಕ್ಕಿಂತಲೂ ಕಡಿಮೆ ದರದಲ್ಲಿರುವ ಮನೆಯನ್ನು ಖರೀದಿಸುದರೂ ಸಾಕು ಎಂದು ಅರಸುತ್ತಿದ್ದಾರೆ. ಕೈಗೆಟಕುವ ಬೆಲೆಯ ಮನೆಗಳನ್ನು ಕೆಲ ಮಹಿಳೆಯರು ಬಯಸುತ್ತಿದ್ದಾರೆ. ಆದರೆ ಹೆಚ್ಚಿನ ಮಹಿಳೆಯರು ಅಧಿಕ ಬೆಲೆಯ ಮನೆಯನ್ನು ಖರೀದಿಸುಲು ಇಚ್ಛಿಸಿದ್ದಾರೆ.