ಬೆಂಗಳೂರು, ಜೂ. 14 : ನಿದ್ರೆ ಸರಿಯಾಗಿ ಮಾಡದಿದ್ದರೆ, ಮೆದುಳು ಕಾರ್ಯ ನಿರ್ವಹಿಸಲಾಗದೆ ತೊಂದರೆಯಾಗುತ್ತದೆ. ಹಾಗಾಗಿಯೇ ಎಲ್ಲರೂ ದಿನಕ್ಕೆ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ಹೇಳುವುದು. ನಿದ್ರೆ ಚೆನ್ನಾಗಿ ಮಾಡಬೇಕು ಎಂದು ಹೇಳಿದರೆ, ಮನುಷ್ಯ ಮಲಗುವ ಸ್ಥಳವೂ ಶಾಂತಯುತವಾಗಿ ಇರಬೇಕು. ಹಾಸಿಗೆ ಮೆತ್ತಗೆ ಇರಬೇಕು. ಇಲ್ಲದಿದ್ದರೆ, ಮೈ ಕೈ ನೋವು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವೇನಾದರೂ ಹಾಸಿಗೆಯನ್ನು ಖರೀದಿಸುವ ಯೋಚನೆಯಲ್ಲಿದ್ದರೆ, ಮೊದಲು ಕೆಲ ಅಂಶಗಳ ಬಗ್ಗೆ ಮಾಹಿತಿಯನ್ನು ಹೊಂದಿರುವುದು ಒಳ್ಳೆಯದು.
ಯಾವ ರೀತಿಯ ಹಾಸಿಗೆಯನ್ನು ಖರಿದಿಸಬೇಕು? ಹಾಸಿಗೆಯ ಎತ್ತರ ಹೇಗಿರಬೇಕು? ಹಾಸಿಗೆ ತಯಾರಿಕೆಗೆ ಬಳಸಿರುವ ಬಟ್ಟೆ, ಹತ್ತಿ ಅಥವಾ ಸ್ಪಾಂಜ್ ಬಗ್ಗೆಯೂ ಮಾಹಿತಿ ಇದ್ದರೆ ಒಳ್ಳೆಯದು. ಮನೆಗೆ ಹಾಸಿಗೆಯನ್ನು ಆಯ್ಕೆ ಮಾಡುವಾಗ ಯಾವ ರೀತಿಯದ್ದು ಎಂಬ ಬಗ್ಗೆ ಆಲೋಚಿಸಬೇಕಾಗುತ್ತದೆ. ಹತ್ತಿ ಹಾಸಿಗೆಗಳಿಂದ ಹಿಡಿದು ಅತ್ಯಾಧುನಿಕ ಹಾಸಿಗೆಗಳವರೆಗೂ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಪಾಕೆಟ್ ಸ್ಪ್ರಿಂಗ್ಸ್, ಮೆಮೊರಿ ಫೋಮ್ ಹಾಸಿಗೆಗಳು, ಲ್ಯಾಟೆಕ್ಸ್ ಹಾಸಿಗೆಗಳು ಸೇರಿದಂತೆ ವಿವಿಧ ಬಗೆಯ ತಂತ್ರಜ್ಞಾನದ ಮೂಲಕ ಹಾಸಿಗೆಗಳನ್ನು ತಯಾರಿಸಲಾಗುತ್ತದೆ.
ವಿವಿಧ ರೀತಿಯ ಹಾಸಿಗೆಗಳನ್ನು ಆಯ್ಕೆ ಮಾಡಬಹುದಾಗಿದೆ. ಎಲ್ಲರೂ ಹೆಚ್ಚಾಗಿ ಮೃದುವಾದ ಹಾಸಿಗೆಯನ್ನು ಖರೀದಿಸಲು ಬಯಸುತ್ತಾರೆ. ಇದು ಜನರಿಗೆ ಮಲಗಿದಾಗ ಉತ್ತಮವಾದ ನಿದ್ರೆಯನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ. ಹಳೆಯ ಕಾಲದಲ್ಲಿ ಹಾಸಿಗೆಯನ್ನು ಕೈಯಿಂದ ಹೊಲೆಯಲಾಗುತ್ತಿತ್ತು. ಮೀಡಿಯಂ ಗಾತ್ರದ ಹಾಸಿಗೆಯನ್ನು ಎಲ್ಲರೂ ಬಯಸುತ್ತಿದ್ದರು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬುದನ್ನು ಪಾಲಿಸುತ್ತಿದ್ದರು.
ಈಗ ಹಾಗೆಲ್ಲಾ ಇಲ್ಲ. ಮಾರುಕಟ್ಟೆಯಲ್ಲಿ ತರಹೇವಾರಿ ರೀತಿಯ ಹಾಸಿಗೆಗಳು ಬಂದಿದ್ದು, ಗಾತ್ರವೂ ವಿವಿಧ ರೀತಿಯಲ್ಲಿ ಸಿಗುತ್ತವೆ. ನಿಮ್ಮ ಮನೆಯ ಮಂಚಕ್ಕೆ ಎಷ್ಟು ಗಾತ್ರದ ಹಾಸಿಗೆ ಇದ್ದರೆ ಚೆನ್ನ ಎಂಬುದನ್ನು ನೋಡಿ ಆಯ್ಕೆ ಮಾಡಿಕೊಳ್ಳಿ. ಹಾಸಿಗೆಯ ದಪ್ಪದಲ್ಲೂ ಬಗೆಗಳಿವೆ. ನಿಮಗೆ ಎಷ್ಟು ಗಾತ್ರದ ಹಾಸಿಗೆ ಬೇಕು ಎಂಬುದನ್ನು ನಿರ್ಧರಿಸಿ. ಅದರ ಮೂಲಕ ಹಾಸಿಗೆಯ ದಪ್ಪವನ್ನು ಡಿಸೈಡ್ ಮಾಡಿ. ಯಾಕೆಂದರೆ ಹಾಸಿಗೆಯನ್ನು ಬಳಸಿದಷ್ಟು ಅದರ ದಪ್ಪ ಕಡಿಮೆಯಾಗುತ್ತದೆ.
ಮನುಷ್ಯನ ಭಾರ ಬಿದ್ದಂತೆ ದಪ್ಪದಲ್ಲಿ ಏರುಪೇರಾಗುತ್ತಿರುತ್ತದೆ. ಆಯ್ಕೆ ಮಾಡುವಾಗ ವಿಚಾರಿಸುವುದು ಒಳ್ಳೆಯದು. ಇನ್ನು ಹಾಸಿಗೆಯನ್ನು ಖರಿದಿಸುವ ಮುನ್ನ ಅದರ ವಾರೆಂಟಿ ಬಗ್ಗೆಯೂ ಗಮನಿಸುವುದು ಒಳ್ಳೆಯದು. ಎಷ್ಟು ವರ್ಷ ಹಾಸಿಗೆ ಬಾಳಿಕೆ ಬರುತ್ತದೆ. ವಾರೆಂಟಿ ಎಷ್ಟು ವರ್ಷ ಇರುತ್ತದೆ. ವಾರೆಂಟಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ ಎಂಬುದನ್ನು ಗಮನಿಸಬೇಕು. ಇಲ್ಲದಿದ್ದರೆ, ಹಾಸಿಗೆಯನ್ನು ಹೆಚ್ಚಿನ ಮೊತ್ತಕ್ಕೆ ಖರೀದಿಸಿದ ಬಳಿಕ ಸಮಸ್ಯೆ ಎದುರಿಸುವಂತಾಗದಿರಲಿ.