ಇ-ಸ್ಟ್ಯಾಂಪ್ ಪೇಪರ್‌ಗೂ ದಾಸ್ತಾವೇಜು ಹಾಳೆಗೂ ವ್ಯತ್ಯಾಸ ಇದೆಯೇ?

0
197

ನೀವು ಹಳೆಯ ಛಾಪಾ ಕಾಗದಗಳನ್ನು ನೋಡಿರಬಹುದು. ಕರ್ನಾಟಕದಲ್ಲಿ ಛಾಪಾ ಕಾಗದ ಹಗರಣ ಆಗುವುದಕ್ಕೂ ಮುನ್ನ ಅಸ್ತಿತ್ವದಲ್ಲಿದ್ದ ಈ ಸ್ಟ್ಯಾಂಪ್ ಪೇಪರ್ ಅಥವಾ ಛಾಪಾ ಕಾಗದಗಳು ಜನರಲ್ಲಿ ಅಧಿಕೃತತೆಯ ಭಾವನೆ ಮೂಡಿಸಿದ್ದವು. ಯಾವುದೇ ದಾಖಲೆಗಳನ್ನು ಈ ಛಾಪಾ ಕಾಗದದ ಮೇಲೆ ಮುದ್ರಿಸಿದರೆ ಅಥವಾ ಕೈಬರಹದ ಮೂಲ ಬರೆದರೆ ನಮ್ಮ ದಾಖಲೆ ಭದ್ರವಾಯಿತು ಎಂದು ಜನ ಭಾವಿಸುತ್ತಿದ್ದರು.

ಆದರೆ, ಕರೀಂ ಲಾಲ್ ತೆಲಗಿ ಹಗರಣದಲ್ಲಿ ನಂತರ ಛಾಪಾ ಕಾಗದವನ್ನು ಕರ್ನಾಟಕ ಸರ್ಕಾರವು ನಿಷೇಧಿಸಿ ಆದೇಶಿಸಿತು. ಆ ನಂತರದಲ್ಲಿ ಜನಸಾಮಾನ್ಯರಿಗೆ ಆದಂತಹ ತೊಂದರೆಗಳನ್ನು ಕಂಡು ಇ-ಸ್ಟ್ಯಾಂಪ್ ಗೆ ಅವಕಾಶ ನೀಡಲಾಯಿತು. ಸ್ಟ್ಯಾಂಪ್ ಪೇಪರ್‌ಗಳ ಕೊರತೆ ನೀಗಿಸಲು ಕರ್ನಾಟಕ ಸರ್ಕಾರ, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ (ಭಾರತ ಸರ್ಕಾರದ ಒಂದು ಉದ್ಯಮ) ನಡುವೆ ಒಪ್ಪಂದ ಏರ್ಪಟ್ಟು ಇ-ಸ್ಟ್ಯಾಂಪ್ ಪೇಪರ್‌ಗಳನ್ನು ನೀಡಲು ಅನುಮತಿ ಕೊಡಲಾಗಿದೆ.

ಇ-ಸ್ಟ್ಯಾಂಪ್ ಪೇಪರ್‌ಗಳು ನೋಂದಣಿ ಮಾಡಿಸದೇ (Non registrable documents) ಇರುವಂತಹ ದಾಖಲೆಗಳಿಗೆ ಉಪಯೋಗಿಸಲು ಬಿಡಲಾಗಿದೆ. ಸಾಮಾನ್ಯವಾಗಿ ಕಡಿಮೆ ಮೊತ್ತದ ಮುದ್ರಾಂಕ ಶುಲ್ಕ ಕಟ್ಟುವ ಸಂದರ್ಭಗಳಲ್ಲಿ ಇ-ಸ್ಟ್ಯಾಂಪ್ ಪೇಪರ್ ಉಪಯೋಗಿಸುವ ಪದ್ಧತಿ ಇದೆ. ಇ-ಸ್ಟ್ಯಾಂಪ್ ಪೇಪರ್‌ಗಳನ್ನು ನೀಡಲು ಕರ್ನಾಟಕ ಸರ್ಕಾರ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಕೆಲವು ಸಹಕಾರ ಬ್ಯಾಂಕ್‌ಗಳಿಗೆ, ಮಹಿಳಾ ಸಹಕಾರಿ ಬ್ಯಾಂಕ್‌ಗಳಿಗೆ ಈ ರೀತಿಯ ಸಂಸ್ಥೆಗಳಿಗೆ ಮಾತ್ರ ಅನುಮತಿ ನೀಡಿರುತ್ತಾರೆ. ಅದು ಬಿಟ್ಟು ಖಾಸಗಿಯಾಗಿ ಯಾರಿಗೂ ಅನುಮತಿ ನೀಡಿರುವುದಿಲ್ಲ.

ಅದೇ ರೀತಿ ಹಳೆಯ ಛಾಪಾ ಕಾಗದ ಮಾದರಿಯಲ್ಲಿಯೇ ಕಾಣುವ ದಾಸ್ತಾವೇಜು ಹಾಳೆ ಸಹ ಅಧಿಕೃತ ದಾಖಲೆಗಳನ್ನು ಮುದ್ರಿಸಲು ಬಳಸಲಾಗುತ್ತದೆ. ಈ ಹಾಳೆಗಳನ್ನು ಉಪಯೋಗಿಸಿ ಯಾವುದೇ ದಾಖಲೆಗಳ ಮುದ್ರಣಕ್ಕೆ ಉಪಯೋಗಿಸಬಹುದಾಗಿದೆ.

ಅದು 2001ರ ಕಾಲಘಟ್ಟ ಇರಬಹುದು. ಕರೀಂ ಲಾಲ್ ತೆಲಗಿ ಹಗರಣದಲ್ಲಿ ನಂತರ ಛಾಪಾ ಕಾಗದವನ್ನು ಕರ್ನಾಟಕ ಸರ್ಕಾರವು ನಿಷೇಧಿಸಿ ಆದೇಶಿಸಿತು. ಆಗ ಇದ್ದಕ್ಕಿದ್ದಂತೆ ಛಾಪಾ ಕಾಗದಗಳನ್ನು ನಿಷೇಧಿಸಿ ಸರ್ಕಾರ ಆದೇಶ ಮಾಡುತ್ತದೆ. ಆಗ ಛಾಪಾ ಕಾಗದ ಮಾದರಿಯಲ್ಲಿಯೇ ದಾಖಲೆಗಳನ್ನು ಮುದ್ರಿಸುವುದಕ್ಕಾಗಿ ತಯಾರಾಗಿದ್ದು ದಸ್ತಾವೇಜು ಹಾಳೆಗಳು (Document sheets). ಕಂದಾಯ ( ನೋಂದಣಿ ಮತ್ತುಮುದ್ರಾಂಕ) ಇಲಾಖೆಯು ಛಾಪಾ ಕಾಗದದ ಅವಶ್ಯಕತೆಯನ್ನು ಪೂರೈಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಿವಿಧೋದ್ದೇಶದ ಸಹಕಾರ ಸಂಘ ಇವರಿಗೆ ದಾಖಲೆಗಳನ್ನು ಮುದ್ರಿಸಲು ದಾಸ್ತಾವೇಜು ಹಾಳೆ ತಯಾರು ಮಾಡಿ ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಏನೇನು ಮುದ್ರಿಸಬಹುದು:
ನೋಂದಣಿ ಮತ್ತು ಮುದ್ರಾಂಕಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಸಹ ಈ ದಸ್ತಾವೇಜು ಹಾಳೆಗಳಲ್ಲಿ ಮುದ್ರಿಸಬಹುದು. ಬಳಿಕ ಇದನ್ನು ನೋಂದಣಿಗೆ ಕಳುಹಿಸಲಾಗುತ್ತದೆ.

ಇ-ಸ್ಟ್ಯಾಂಪ್ ಪೇಪರ್‌ಗಳಲ್ಲಿ ಸರ್ಕಾರ ಸ್ಟ್ಯಾಂಪ್ ಡ್ಯೂಟಿ (ಮುದ್ರಾಂಕ ಶುಲ್ಕ) ಪಡೆದು ಹಂಚಿಕೆ ಮಾಡುತ್ತದೆ. ಅಂದರೆ, ನೋಂದಣಿಗೆ ಹೋದಾಗ ಮತ್ತೆ ಸ್ಟ್ಯಾಂಪ್ ಡ್ಯೂಟಿ ಪಾವತಿಸಬೇಕಾದ ಅಗತ್ಯ ಇಲ್ಲ. ಆದರೆ, ದಸ್ತಾವೇಜು ಹಾಳೆಗಳಿಗೆ ಯಾವುದೇ ಮುದ್ರಾಂಕ ಶುಲ್ಕ ಪಾವತಿಸುವುದಿಲ್ಲ. ಅದು ನೋಂದಣಿಗೆ ಅಧಿಕೃತತೆಯನ್ನಷ್ಟೇ ಪ್ರತಿನಿಧಿಸುತ್ತದೆ.

ಲೀಗಲ್ ಪೇಪರ್ ಸಹ ಇದೆ:
ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತಕ್ಕೆ ಕರ್ನಾಟಕ ಸರ್ಕಾರವು ದಸ್ತಾವೇಜು ಹಾಳೆಗಳನ್ನು ಮುದ್ರಿಸಿ ಹಂಚಿಕೆ ಮಾಡಲು ಅವಕಾಶ ನೀಡಿತ್ತು. ಆ ಬಳಿಕ ಅದೇ ಮಾದರಿಯಲ್ಲಿ ವಕೀಲರ ಸಹಕಾರ ಸಂಘವೂ ಸಹ ಲೀಗಲ್ ಪೇಪರ್‌ಗಳನ್ನು ತಮ್ಮದೇ ನಿಯಮಿತದಡಿ ಮುದ್ರಿಸಿ ಹಂಚಿಕೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆಗ ಸರ್ಕಾರ ಅದಕ್ಕೆ ಅವಕಾಶ ನೀಡದಿದ್ದಾಗ, ನ್ಯಾಯಾಲಯದ ಮೊರೆ ಹೋಗಿ ಮಾನ್ಯತೆ ಪಡೆಯಲಾಯಿತು. ಸದ್ಯ ನೋಂದಣಿ ಮತ್ತು ಮುದ್ರಾಂಕ ನೌಕರರ ಸಂಘ ಹಾಗೂ ವಕೀಲರ ಸಹಕಾರ ಸಂಘಗಳು ಮಾನ್ಯತೆ ಇರುವ ಹಾಳೆಗಳನ್ನು ಮುದ್ರಿಸಿ ಹಂಚಿಕೆ ಮಾಡುತ್ತವೆ. ಆದರೆ, ಈ ಹಾಳೆಗಳಲ್ಲಿ ದಾಖಲೆಗಳನ್ನು ಮುದ್ರಿಸಿದಾಕ್ಷಣ ಅದಕ್ಕೆ ಕಾನೂನು ಮಾನ್ಯತೆ ಇದೆ ಎಂದು ಭಾವಿಸುವಂತಿಲ್ಲ. ಬಳಿಕ ನೋಂದಣಿ ಮಾಡಿಸಿ ಮಾತ್ರ ಅಧಿಕೃತ ಮಾಡಿಕೊಳ್ಳಬಹುದಾಗಿದೆ.

ಇದಲ್ಲದೆ, ಜನಸಾಮಾನ್ಯರು ಬಿಳಿಯ ಹಾಳೆಗಳು ಮತ್ತು ಹಸಿರು ಹಾಳೆಗಳನ್ನು ಸಹ ದಾಖಲೆಗಳ ಮುದ್ರಣಕ್ಕೆ ಬಳಸುತ್ತಾರೆ. ಆ ಬಳಿಕ ಸ್ಟ್ಯಾಂಪ್ ಡ್ಯೂಟಿ ಪಾವತಿಸಿ ಅವುಗಳನ್ನೂ ಸಹ ನೋಂದಣಿ ಮಾಡಿಸಿಕೊಳ್ಳುವುದಕ್ಕೆ ಅವಕಾಶ ಇದೆ.